ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಯುವಕನ ಕೊಲೆ: ಶಾಸಕರು, ಸರ್ಕಲ್ ಇನ್‌ಸ್ಪೆಕ್ಟರ್ ವಿರುದ್ಧ ಗಂಭೀರ ಆರೋಪ
Youth murdered during Ganesha immersion procession

ಪ್ರಗತಿವಾಹಿನಿ ಸುದ್ದಿ, ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ನಡೆದ ಗಲಾಟೆಯ ಬಳಿಕ 17 ವರ್ಷದ ಯುವಕನೊಬ್ಬನನ್ನು ಕಲ್ಲಿನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಮಧುಗಿರಿ ತಾಲೂಕಿನ ಕಸಾಪುರ ಗ್ರಾಮದ ಮಾರಮ್ಮ ದೇವಸ್ಥಾನದ ಬಳಿ ಘಟನೆ ನಡೆದಿದೆ. ಸಿಂಹಾದ್ರಿ ಮೃತ ಯುವಕನಾಗಿದ್ದು, ಮಗನ ಸಾವಿನ ಸುದ್ದಿ ತಿಳಿದು ತಾಯಿ ಅನ್ನಪೂರ್ಣ ಅಸ್ವಸ್ಥರಾಗಿದ್ದಾರೆ.
ಮೃತ ಸಿಂಹಾದ್ರಿಯನ್ನು ಗಣೇಶ ವಿಸರ್ಜನಾ ಕಾರ್ಯಕ್ರಮದ ವೇಳೆ ಕೀಳು ಜಾತಿಯವನು ಎಂದು ನಿಂದಿಸಿ, ಬಳಿಕ ಕಲ್ಲಿನಿಂದ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದೆ ಎಂದು ತಾಯಿ ಅನ್ನಪೂರ್ಣ ಆರೋಪಿಸಿದ್ದಾರೆ. ನಾಯಕ ಸಮುದಾಯದ ಮಾರುತೇಶ್ (24) ಎಂಬಾತ ಕೊಲೆ ಮಾಡಿದ್ದಾನೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಘಟನೆಗೂ ಮೊದಲು ಸಿಂಹಾದ್ರಿ ತಾಯಿಗೆ ಕರೆ ಮಾಡಿದ್ದು, ತನಗೆ ಆರೋಗ್ಯ ಸರಿಯಿಲ್ಲ ಎಂದು ತಿಳಿಸಿದ್ದರಿಂದ ಆಸ್ಪತ್ರೆಗೆ ಹೋಗುವಂತೆ ತಾಯಿ ಹೇಳಿದ್ದರು ಎನ್ನಲಾಗಿದೆ. ಬಳಿಕ ಹುಡುಗಿಯ ವಿಚಾರವಾಗಿ ನಾಯಕರ ಹಟ್ಟಿಗೆ ಕರೆಸಿದ್ದಾರೆ ಎಂದು ಸಿಂಹಾದ್ರಿ ತಿಳಿಸಿದ್ದ. ಅಲ್ಲಿಗೆ ಹೋಗದಂತೆ ತಾಯಿ ಸೂಚಿಸಿದ್ದರೂ, ಬಳಿಕ ಸಿಂಹಾದ್ರಿ ಮನೆಗೆ ಮರಳಲಿಲ್ಲ ಎಂದು ಅನ್ನಪೂರ್ಣ ಹೇಳಿದ್ದಾರೆ.
8ರಿಂದ 10 ಮಂದಿ ಸೇರಿ ಹಲ್ಲೆ ನಡೆಸಿ ಮಗನನ್ನು ಕೊಲೆ ಮಾಡಿದ್ದಾರೆ ಎಂದು ಅನ್ನಪೂರ್ಣ ಆರೋಪಿಸಿದ್ದು, ಪ್ರಕರಣದಲ್ಲಿ ಒಬ್ಬನನ್ನು ಮಾತ್ರ ಬಂಧಿಸಲಾಗಿದೆ. ಉಳಿದ ಆರೋಪಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಅನ್ನಪೂರ್ಣ ನೀಡಿದ ದೂರಿನ ಆಧಾರದ ಮೇಲೆ ಮಿಡಿಗೇಶಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಯುವಕನ ತಾಯಿಯನ್ನು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಹಾಗೂ ಮಾದಿಗ ಮಹಾಸಭಾ ಜಿಲ್ಲಾಧ್ಯಕ್ಷ ಹುಚ್ಚಯ್ಯ ಭೇಟಿ ಮಾಡಿ ಮಾತನಾಡಿದ್ದಾರೆ.
ಮಧುಗಿರಿ ತಾಲೂಕಿನಲ್ಲಿ ಈ ಹಿಂದೆಯೂ ಮಾದಿಗ ಸಮುದಾಯದವರ ಮೇಲೆ ದಾಳಿ ಮತ್ತು ಕೊಲೆ ಪ್ರಕರಣಗಳು ನಡೆದಿವೆ ಎಂದು ಹುಚ್ಚಯ್ಯ ಆರೋಪಿಸಿದ್ದಾರೆ. ಒಂದು ವರ್ಷದ ಹಿಂದೆ ಮನೆಯಲ್ಲಿದ್ದ ವ್ಯಕ್ತಿಯನ್ನು ಹೊರಗೆ ಕರೆತಂದು ವಾಹನ ಹತ್ತಿಸಿ ಕೊಲೆ ಮಾಡಲಾಗಿತ್ತು ಹಾಗೂ ಬಳಿಕ ಐಡಿ ಹಳ್ಳಿಯಲ್ಲೂ ಮಾದಿಗ ಸಮುದಾಯದ ಯುವಕನ ಕೊಲೆ ನಡೆದಿತ್ತು ಎಂದು ಅವರು ಹೇಳಿದ್ದಾರೆ.
ಮಧುಗಿರಿ ತಾಲೂಕಿನಲ್ಲಿ ಇಂತಹ ಘಟನೆಗಳು ದಿನದಿಂದ ದಿನಕ್ಕೆ ನಡೆಯುತ್ತಿವೆ ಎಂದು ಆರೋಪಿಸಿರುವ ಹುಚ್ಚಯ್ಯ, ಶಾಸಕರು ಹಾಗೂ ಸರ್ಕಲ್ ಇನ್‌ಸ್ಪೆಕ್ಟರ್ ವಿರುದ್ಧವೂ ಗಂಭೀರ ಆರೋಪಗಳನ್ನು ಮಾಡಿದ್ದಾರೆ.




