EducationLatestNational

*ಐಐಟಿ ಬಾಂಬೆ ವಿದ್ಯಾರ್ಥಿ ಆತ್ಮಹತ್ಯೆ ಕೇಸ್: ಡೀನ್ ಅಮಾನತು*

ಪ್ರಗತಿವಾಹಿನಿ ಸುದ್ದಿ: ಐಐಟಿ ಬಾಂಬೆ ಕ್ಯಾಂಪಸ್ ನ ಹಾಸ್ಟೆಲ್ ನಲ್ಲಿ ಎರಡನೇ ವರ್ಷದ ಬಿ.ಟೆಕ್ ವಿದ್ಯಾರ್ಥಿ ಸಾಹಿಲ್ ರವೀಂದ್ರ ವಕೋಡ್ (22) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐಐಟಿ ಬಾಂಬೆ ಡೀನ್ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.

ಶುಕ್ರವಾರ ಸೆ.19ರಂದು ಆತ್ಮಹತ್ಯೆಗೆ ಶರಣಾಗಿದ್ದ. ಸಾಹಿಲ್ ಆತ್ಮಹತ್ಯೆ ಖಂಡಿಸಿ ವಿದ್ಯಾರ್ಥಿಗಳು ತೀವ್ರ ಪ್ರತಿಭಟನೆ ನಡೆಸಿದ್ದರು. ವಿದ್ಯಾರ್ಥಿ ಕುಟುಂಬಸ್ಥರ ದೂರಿನ ಹಿನ್ನೆಲೆಯಲ್ಲಿ ಐಐಟಿ ಬಾಂಬೆ ಡೀನ್ ಪ್ರೊಫೆಸರ್ ಸೂರ್ಯನಾರಾಯಣ್ ದುಲ್ಲಾ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹುದ್ದೆಯಿಂದ ಅಮಾನತುಗೊಳಿಸಲಾಗಿದೆ.

ಅಲ್ಲದೇ ವಿದ್ಯಾರ್ಥಿಯ ಸಾವಿನ ಬೆನ್ನಲ್ಲೇ ಈ ಹಿಂದೆ ನೀಡಿದ್ದ ಅಸಂವೇದನಾಶೀಲ ಹೇಳಿಕೆಗಳಿಗಾಗಿ ಐಐಟಿ ಬಾಂಬೆ ಆಡಳಿತ ಮಂಡಳಿಯು ಸಾರ್ವಜನಿಕವಾಗಿ ಕ್ಷಮೆಯಾಚಿಸಿದೆ.

ಮಹಾರಾಷ್ಟ್ರದ ಯವತ್ಮಾಳ್ ಮೂಲದ ಸಾಹಿಲ್, ಎನರ್ಜಿ ಸೈನ್ಸ್ ವಿಭಾಗದಲ್ಲಿ ಕಲಿಯುತ್ತಿದ್ದರು. ಶುಕ್ರವಾರ ನಡೆದ ಮಿಡ್-ಸೆಮಿಸ್ಟರ್ ಪರೀಕ್ಷೆಯಲ್ಲಿ ಮೊಬೈಲ್ ಮೂಲಕ ಪ್ರಶ್ನೆ ಪತ್ರಿಕೆಯನ್ನು ಚಾಟ್‌ಜಿಪಿಟಿಗೆ ಅಪ್‌ಲೋಡ್ ಮಾಡಿ ನಕಲು ಮಾಡಲು ಯತ್ನಿಸಿದ್ದ ಎಂದು ಆರೋಪಿಸಲಾಗಿತ್ತು. ಪರೀಕ್ಷೆ ಮುಗಿದ ಕೆಲವೇ ಸಮಯದಲ್ಲಿ ವಿದ್ಯಾರ್ಥಿ ಪೊವೈ ಕ್ಯಾಂಪಸ್‌ನ ಹಾಸ್ಟೆಲ್ ಕೋಣೆಯಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದ.

ಸಾಹಿಲ್ ಕ್ಯಾಂಪಸ್‌ನಲ್ಲಿ ಸಾಂಸ್ಥಿಕ ಕಿರುಕುಳ ಮತ್ತು ಜಾತಿ ಆಧಾರಿತ ತಾರತಮ್ಯವನ್ನು ಎದುರಿಸುತ್ತಿದ್ದರು ಎಂದು ಅವರ ಕುಟುಂಬ ಹಾಗೂ ಸಹಪಾಠಿಗಳು ಆರೋಪಿಸಿದ್ದಾರೆ. ಪೋಷಕರ ದೂರಿನ ಮೇರೆಗೆ ಮುಂಬೈ ಪೊಲೀಸರು ಪ್ರೊ. ದುಲ್ಲಾ ಮತ್ತು ಇತರರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಹಾಗೂ ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿ, ತನಿಖೆ ಆರಂಭಿಸಿದ್ದಾರೆ.

ಮತ್ತೊಂದೆಡೆ ಐಐಟಿ ಬಾಂಬೆ ನಿರ್ದೇಶಕ ಪ್ರೊ. ಶಿರೀಶ್ ಕೇದಾರೆ ಖುದ್ದಾಗಿ ವಿದ್ಯಾರ್ಥಿಗಳ ಪ್ರತಿಭಟನಾ ಸ್ಥಳಕ್ಕೆ ತೆರಳಿ ಸುದೀರ್ಘ ಚರ್ಚೆ ನಡೆಸಿದ್ದು, ವಿದ್ಯಾರ್ಥಿಗಳು ಮುಂದಿಟ್ಟ 18 ಬೇಡಿಕೆಗಳ ಬಗ್ಗೆ ಸಹಿ ಮಾಡಿದ್ದಾರೆ. ಇದರ ಬೆನ್ನಲ್ಲೇ ವಿದ್ಯಾರ್ಥಿಗಳು ಪ್ರತಿಭಟನೆ ನಿಲ್ಲಿಸಿದ್ದಾರೆ.

Related Articles

Back to top button