*ಪಶುವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮ: SIT ತನಿಖಾ ತಂಡ ರಚಿಸಿದ ಹೈಕೋರ್ಟ್ ಮಹತ್ವದ ನಿರ್ದೇಶನ*

ಪ್ರಗತಿವಾಹಿನಿ ಸುದ್ದಿ: ಕೆಪಿಎಸ್ ಸಿ ನಡೆಸಿದ ಪಶುವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷಾ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಪೀಠ, ವಿಶೇಷ ತನಿಖಾ ತಂಡ (SIT) ರಚಿಸಿ ಮಹತ್ವದ ಆದೇಶ ಹೊರಡಿಸಿದೆ.
ಪ್ರಕರಣದ ಸಮಗ್ರ ತನಿಖೆಗಾಗಿ ಹಿರಿಯ ಪೊಲೀಸ್ ಅಧಿಕಾರಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಎಸ್ ಐಟಿ ರಚಿಸಿ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಹೈಕೋರ್ಟ್ ಪೀಠವು ಈ ಆದೇಶ ಹೊರಡಿಸಿದೆ.
ತನಿಖಾ ತಂಡಕ್ಕೆ ಮುಂದಿನ 100 ದಿನಗಳಲ್ಲಿ ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸಬೇಕು. 30 ದಿನಗಳಿಗೆ ಒಮ್ಮೆ ತನಿಖಾ ವರದಿಯ ವಿವರಗಳನ್ನು ನ್ಯಾಯಪೀಠಕ್ಕೆ ಸಲ್ಲಿಸಬೇಕು ಎಂದು ಒಟ್ಟು 17 ನಿರ್ದೇಶಗಳನ್ನು ನೀಡಿ ಆದೇಶಿಸಿದೆ.
ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಐಪಿಎಸ್ ಅಧಿಕಾರಿಗಳಾದ ದಿವ್ಯಾ ಗೋಪಿನಾಥ್, ಅನೂಪ್ ಶೆಟ್ಟಿ, ಕುಶಾಲ್ ಚೌಕ್ಸೆ, ಶ್ರಮ್ಮಾ ಮಿಶ್ರಾ ಅವರಿರುವ ತಂಡ ರಚನೆ ಮಾಡಬೇಕು. ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ(ಇಡಿ) ನಡೆಸುತ್ತಿರುವ ತನಿಖೆಗೆ ಈ ತಂಡ ಅಗತ್ಯ ಸಹಕಾರ ನೀಡಬೇಕು. ಅಲ್ಲದೇ, ಎಸ್ಐಟಿ ತನಿಖೆಯನ್ನು 100 ದಿನಗಳಲ್ಲಿ ಪೂರ್ಣಗೊಳಿಸಬೇಕು. 30 ದಿನಗಳಿಗೊಮ್ಮೆ ತನಿಖಾ ಪ್ರಗತಿ ವರದಿಯನ್ನು ಸಲ್ಲಿಸಬೇಕು. ಸಿಐಡಿ ಪೊಲೀಸರು ಎಸ್ಐಟಿ ತನಿಖೆಗೆ ಅಗತ್ಯವಿರುವ ಸಂಪೂರ್ಣ ದಾಖಲೆಗಳನ್ನು ನೀಡಬೇಕು. ರಾಜ್ಯ ಸರ್ಕಾರ ಎಸ್ಐಟಿಗೆ ಪೊಲೀಸ್ ಠಾಣೆ ಸ್ಥಾನಮಾನ ನೀಡಬೇಕು ಎಂದು ಹೈಕೋರ್ಟ್ ಪೀಠ ಸೂಚಿಸಿದೆ.




