*ಡಿಎಂಕೆ ಭದ್ರಕೋಟೆ ಧೂಳಿಪಟ: ಧಳಪತಿ ಅಲೆಯಲ್ಲಿ ಕೊಚ್ಚಿ ಹೋದ ಸಿಎಂ ಸ್ಟಾಲಿನ್*

ಪ್ರಗತಿವಾಹಿನಿ ಸುದ್ದಿ: ಈ ಬಾರಿ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಅಚ್ಚರಿ ಫಲಿತಾಂಶ ಹೊರಬಿದ್ದಿದೆ. ಇದೇ ಮೊದಲ ಬಾರಿಗೆ ರಾಜಕೀಯ ಅಖಾಡಕ್ಕೆ ಧುಮುಕಿ ಹೊಸ ಪಕ್ಷದ ಮೂಲಕ ಸ್ಪರ್ಧಿಸಿದ್ದ ನಟ ದಳಪತಿ ವಿಜಯ್ ಅವರ ಟಿವಿಕೆ ಪಕ್ಷ ಭರ್ಜರಿ ಮುನ್ನಡೆ ಸಾಧಿಸಿದೆ. ಆಡಳಿತಾರೂಢ ಡಿಎಂಕೆ ಪಕ್ಷ ವಿಜಯ್ ಅವರ ಟಿವಿಕೆ ಅಲೆಯಲ್ಲಿ ಕೊಚ್ಚಿ ಹೋಗಿದೆ.
ತಮಿಳುನಾಡು ಚುನಾವಣೆಯಲ್ಲಿ ಸ್ವತಃ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ತಮ್ಮದೇ ಕ್ಷೇತ್ರದಲ್ಲಿ ಟಿವಿಕೆ ಅಭ್ಯರ್ಥಿ ಎದುರು ಸೋಲನುಭವಿಸಿದ್ದಾರೆ. ಸಿಎಂ ಎಂ.ಕೆ.ಸ್ಟಾಲಿನ್ ಉತ್ತರ ಚೆನ್ನೈನ ಕೊಳತ್ತೂರು ಕ್ಷೇತ್ರದಿಂದ ಡಿಎಂಕೆಯಿಂದ ಸ್ಪರ್ಧಿಸಿದ್ದರು. ಆದರೆ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಅಭ್ಯರ್ಥಿ ವಿ.ಎಸ್.ಬಾಬು ಸ್ಟಾಲಿನ್ ವಿರುದ್ಧ ಸೋಲುಂಡಿದ್ದಾರೆ.
ಆಡಳಿತಾರೂಢ ಪಕ್ಷಕ್ಕೆ ನಟ ದಳಪತಿ ವಿಜಯ್ ಶಾಕ್ ನೀಡಿದ್ದಾರೆ. ಆರಂಭಿಕ ಮತ ಎಣಿಕೆ ಹಂತದಿಂದಲೂ ಉಭಯ ಅಭ್ಯರ್ಥಿಗಳ ನಡುವೆ ಭಾರಿ ಪೈಪೋಟಿ ಇತ್ತಾದರೂ ಅಂತಿಮವಾಗಿ ಎಂ.ಕೆ. ಸ್ಟಾಲಿನ್ ಟಿವಿಕೆ ಅಭ್ಯರ್ಥಿ ವಿರುದ್ಧ ಸೋಲು ಕಂಡಿದ್ದಾರೆ.
ಕೆಲವು ವರ್ಷಗಳಿಂದ ಕೊಳತ್ತೂರು ಕ್ಷೇತ್ರ ಡಿಎಂಕೆಯ ಭದ್ರ ಕೋಟೆಯಾಗಿದ್ದು, ಎಂ.ಕೆ. ಸ್ಟಾಲಿನ್ 2011ರಿಂದ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ಆದರೆ ಈ ಬಾರಿ ವಿಜಯ್ ಅವರ ಟಿವಿಕೆ ಪಕ್ಷದ ಅಭ್ಯರ್ಥಿ ವಿರುದ್ಧ ಸೋಲನುಭವಿಸಿದ್ದಾರೆ.
ತಮಿಳುನಾಡಿನಲ್ಲಿ ಡಿಎಂಕೆ 68 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಟಿವಿಕೆ 105 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ. ಎಐಎಡಿಎಂಕೆ 59 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ.



