*ಮೂರು ವರ್ಷಗಳ ವಿಶ್ವಪರ್ಯಟನೆಗೆ ಹೊರಟಿದ್ದ ಐಷಾರಾಮಿ ಹಡಗು ಸ್ಥಗಿತ*: *200 ಪ್ರಯಾಣಿಕರು ಅತಂತ್ರ*

ಪ್ರಗತಿವಾಹಿನಿ ಸುದ್ದಿ: ವಿಶ್ವದಾದ್ಯಂತ ಮೂರು ವರ್ಷಗಳ ಕಾಲ ಸಮುದ್ರಯಾನ ಮಾಡುವ ಕನಸಿನೊಂದಿಗೆ ಐಷಾರಾಮಿ ಹಡಗಿನಲ್ಲಿ ಪ್ರಯಾಣ ಆರಂಭಿಸಿದ್ದ ಸುಮಾರು 200 ಪ್ರಯಾಣಿಕರು ಇದೀಗ ಕಾಂಬೋಡಿಯಾದಲ್ಲಿ ಸಿಲುಕಿಕೊಂಡಿದ್ದಾರೆ. ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದ ಇಂಧನ ವೆಚ್ಚ ಹೆಚ್ಚಳವಾಗಿದ್ದು, ನಿರ್ವಹಣಾ ವೆಚ್ಚ ಭರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅಮೆರಿಕ ಮೂಲದ ವಿಲ್ಲಾ ವೀ ರೆಸಿಡೆನ್ಸಸ್ ಕಂಪನಿ ತನ್ನ ಎಂವಿ ಒಡಿಸ್ಸಿ ಕ್ರೂಸ್ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
ಈ ಹಡಗು ಭಾರತಕ್ಕೂ ಭೇಟಿ ನೀಡಬೇಕಿತ್ತು. ಆದರೆ ಪ್ರಯಾಣ ಅರ್ಧದಲ್ಲೇ ನಿಂತಿರುವುದರಿಂದ ಭಾರತೀಯ ಬಂದರುಗಳಿಗೆ ಆಗಮಿಸುವ ಯೋಜನೆಯೂ ಅನಿಶ್ಚಿತವಾಗಿದೆ.
ಸುಮಾರು ನಾಲ್ಕು ತಿಂಗಳ ವಿಳಂಬದ ಬಳಿಕ 2024ರ ಅಕ್ಟೋಬರ್‌ನಲ್ಲಿ ಉತ್ತರ ಐರ್ಲೆಂಡ್‌ನ ಬೆಲ್‌ಫಾಸ್ಟ್‌ನಿಂದ ಎಂವಿ ಒಡಿಸ್ಸಿ ವಿಶ್ವಪರ್ಯಟನೆ ಆರಂಭಿಸಿತ್ತು. ಏಳು ಖಂಡಗಳ 400ಕ್ಕೂ ಹೆಚ್ಚು ಬಂದರುಗಳಿಗೆ ಭೇಟಿ ನೀಡುವ ಯೋಜನೆ ಹೊಂದಿತ್ತು. ಹಡಗಿನಲ್ಲಿ ಶಾಶ್ವತವಾಗಿ ವಾಸಿಸಲು ಐಷಾರಾಮಿ ಕ್ಯಾಬಿನ್‌ಗಳನ್ನು 1.20 ಲಕ್ಷ ಡಾಲರ್‌ನಿಂದ 4.40 ಲಕ್ಷ ಡಾಲರ್‌ವರೆಗೆ ಮಾರಾಟ ಮಾಡಲಾಗಿತ್ತು. ಇದಲ್ಲದೆ ಪ್ರಯಾಣಿಕರು ಪ್ರತಿ ತಿಂಗಳು ವಸತಿ ಮತ್ತು ನಿರ್ವಹಣಾ ಶುಲ್ಕವನ್ನೂ ಪಾವತಿಸುತ್ತಿದ್ದರು.
ಮಧ್ಯಪ್ರಾಚ್ಯದಲ್ಲಿನ ಯುದ್ಧ ಮತ್ತು ಹಾರ್ಮುಜ್ ಜಲಸಂಧಿಗೆ ಸಂಬಂಧಿಸಿದ ಬಿಕ್ಕಟ್ಟಿನಿಂದ ಜಾಗತಿಕ ಇಂಧನ ಪೂರೈಕೆ ಹಾಗೂ ಬೆಲೆಗಳ ಮೇಲೆ ಪರಿಣಾಮ ಬೀರಿದೆ ಎಂದು ಕಂಪನಿ ತಿಳಿಸಿದೆ. ಇದರಿಂದ ಹಡಗಿನ ಇಂಧನ ವೆಚ್ಚ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ.
ಹಿಂದೆ ಒಂದು ಕ್ಯಾಬಿನ್‌ಗೆ ತಿಂಗಳಿಗೆ ಸುಮಾರು 1,800 ಡಾಲರ್ ಇದ್ದ ಇಂಧನ ವೆಚ್ಚ ಕೆಲವು ಏಷ್ಯನ್ ಪ್ರದೇಶಗಳಲ್ಲಿ 8,000 ಡಾಲರ್‌ಗೆ ಏರಿಕೆಯಾಗಿದೆ ಎನ್ನಲಾಗಿದೆ. ಹೀಗಾಗಿ ಪ್ರಯಾಣಿಕರಿಂದ ಹೆಚ್ಚುವರಿಯಾಗಿ ಪ್ರತಿ ತಿಂಗಳು 500 ಡಾಲರ್ ಇಂಧನ ಶುಲ್ಕ ಪಡೆಯುವ ಪ್ರಸ್ತಾಪವನ್ನೂ ಕಂಪನಿ ಮುಂದಿಟ್ಟಿತ್ತು. ಆದರೆ ಇದಕ್ಕೆ ಪ್ರಯಾಣಿಕರಿಂದ ವಿರೋಧ ವ್ಯಕ್ತವಾಗಿತ್ತು.
ಕಾಂಬೋಡಿಯಾದಿಂದ ವಿಯೆಟ್ನಾಂ, ಸಿಂಗಾಪುರ, ಮಲೇಷ್ಯಾ ಮತ್ತು ಥೈಲ್ಯಾಂಡ್‌ಗೆ ತೆರಳಬೇಕಿದ್ದ ಹಡಗು ಬಳಿಕ ಭಾರತಕ್ಕೆ ಆಗಮಿಸುವ ಯೋಜನೆ ಹೊಂದಿತ್ತು. ನವೆಂಬರ್ 29ರಂದು ಕೋಲ್ಕತ್ತಾಗೆ ತಲುಪಬೇಕಿತ್ತು. ನಂತರ ವಿಶಾಖಪಟ್ಟಣ ಮತ್ತು ಚೆನ್ನೈಗೆ ಭೇಟಿ ನೀಡುವ ವೇಳಾಪಟ್ಟಿಯಿತ್ತು.
ಡಿಸೆಂಬರ್‌ನಲ್ಲಿ ಮಂಗಳೂರು, ಮುಂಬೈ, ಗೋವಾ ಮತ್ತು ಕೊಚ್ಚಿ ಬಂದರುಗಳಿಗೂ ತೆರಳಬೇಕಿತ್ತು. ಆದರೆ ಸದ್ಯ ಕಾರ್ಯಾಚರಣೆ ಸ್ಥಗಿತಗೊಂಡಿರುವುದರಿಂದ ಈ ಪ್ರವಾಸ ವೇಳಾಪಟ್ಟಿ ಜಾರಿಯಾಗುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ.
ಹಡಗಿನಲ್ಲಿ ಪ್ರಯಾಣಿಸುತ್ತಿದ್ದ ರಾಂಡಿ ಕ್ಯಾಸಿಂಗ್ಹ್ಯಾಮ್ ಎಂಬ ಪ್ರಯಾಣಿಕರು ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗುತ್ತಿದ್ದಾರೆ. ಹಡಗಿನಲ್ಲಿ ವಾಸವಿದ್ದಾಗ ಅಗತ್ಯವಿದ್ದಾಗ ತಮ್ಮ ಕೋಣೆಯಲ್ಲೇ ವಿಶ್ರಾಂತಿ ಪಡೆಯಲು ಸಾಧ್ಯವಾಗುತ್ತಿತ್ತು. ಆದರೆ ಈಗ ಹಡಗಿನಿಂದ ಇಳಿಯಬೇಕಾದ ಪರಿಸ್ಥಿತಿ ಎದುರಾಗಿದೆ. ಚಿಕಿತ್ಸೆ ಮುಂದುವರಿಸಲು ಥೈಲ್ಯಾಂಡ್‌ಗೆ ತೆರಳಲು ನಿರ್ಧರಿಸಿದ್ದಾರೆ. ಪ್ರಯಾಣಿಕರಿಗೆ ಹೋಟೆಲ್‌ಗಳ ಮಾಹಿತಿ ಅಥವಾ ವಸತಿ ವ್ಯವಸ್ಥೆ ಕಲ್ಪಿಸಲು ಕಂಪನಿ ಸಾಕಷ್ಟು ನೆರವು ನೀಡಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಹಡಗಿನ ಸಂಸ್ಥಾಪಕ ಮೈಕೆಲ್ ಪೆಟರ್ಸನ್ ಕಂಪನಿ ಆರ್ಥಿಕ ಪುನರ್ರಚನೆಗೆ ಮುಂದಾಗಿದೆ ಎಂದು ತಿಳಿಸಿದ್ದಾರೆ. ಹೊಸ ಹೂಡಿಕೆದಾರರಿಂದ ಹಣ ಸಂಗ್ರಹಿಸಲು ಪ್ರಯತ್ನ ನಡೆಯುತ್ತಿದೆ. ಪ್ರಯಾಣಿಕರು ಮತ್ತು ಸಿಬ್ಬಂದಿಗೆ ನೆರವು ನೀಡುವುದು ಈಗಿನ ಆದ್ಯತೆ ಎಂದಿದ್ದಾರೆ.
ಪ್ರಯಾಣಿಕರು ಸುರಕ್ಷಿತವಾಗಿ ಹಡಗಿನಿಂದ ಇಳಿಯಲು ಹಾಗೂ ತಾತ್ಕಾಲಿಕ ವಸತಿ ಹುಡುಕಲು ಸಹಕರಿಸುತ್ತಿರುವುದಾಗಿ ಕಂಪನಿ ಹೇಳಿದೆ. ಆದರೆ ಕಾಂಬೋಡಿಯಾದಿಂದ ತಮ್ಮ ಊರುಗಳಿಗೆ ಮರಳುವ ಪ್ರಯಾಣದ ವೆಚ್ಚವನ್ನು ಕಂಪನಿ ಭರಿಸುವುದಿಲ್ಲ ಎನ್ನಲಾಗಿದೆ.
ಐಷಾರಾಮಿ ಸಮುದ್ರಯಾನದ ಕನಸಿಗಾಗಿ ಲಕ್ಷಾಂತರ ಡಾಲರ್ ಖರ್ಚು ಮಾಡಿ ಹಡಗಿನಲ್ಲಿ ವಾಸ ಆರಂಭಿಸಿದ್ದ ಪ್ರಯಾಣಿಕರು ಈಗ ಅತಂತ್ರರಾಗಿದ್ದಾರೆ. ಹಡಗಿನ ಪ್ರಯಾಣ ಮತ್ತೆ ಯಾವಾಗ ಆರಂಭವಾಗಲಿದೆ ಎಂಬುದರ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ.




