*ಗ್ರಾಹಕರಿಗೆ ಗಾಯದ ಮೇಲೆ ಬರೆ*: *ಹಾಲಿನ ದರ ಹೆಚ್ಚಳದ ಬೆನ್ನಲ್ಲೇ ಕಾಫಿ, ಟೀ ದರವೂ ದುಬಾರಿ!*

ಪ್ರಗತಿವಾಹಿನಿ ಸುದ್ದಿ: ನಂದಿನಿ ಹಾಲಿನ ದರ ಏರಿಕೆಯ ಬಿಸಿ ಇದೀಗ ಹೋಟೆಲ್ ಗ್ರಾಹಕರಿಗೂ ತಟ್ಟಿದೆ. ಹಾಲಿನ ಬೆಲೆ ಹೆಚ್ಚಳದ ಬೆನ್ನಲ್ಲೇ ಹಲವು ಹೋಟೆಲ್ಗಳು ಕಾಫಿ ಮತ್ತು ಟೀ ದರವನ್ನು ಹೆಚ್ಚಿಸಿವೆ. ಕೆಲವು ಕಡೆ ಒಂದು ಕಪ್ ಕಾಫಿ ಅಥವಾ ಟೀ ಬೆಲೆ 5 ರೂಪಾಯಿವರೆಗೆ ಏರಿಕೆಯಾಗಿದೆ. ಹಾಲಿನಿಂದ ತಯಾರಿಸುವ ಬಾದಾಮಿ ಹಾಲು, ಹಾರ್ಲಿಕ್ಸ್, ಮೊಸರು, ಮಜ್ಜಿಗೆ ಹಾಗೂ ಸಿಹಿ ತಿನಿಸುಗಳ ಬೆಲೆಯೂ ಹೆಚ್ಚಾಗುವ ಸಾಧ್ಯತೆಯಿದೆ.
ಹಾಲು ಉತ್ಪಾದಕರು ಮತ್ತು ಹಾಲು ಒಕ್ಕೂಟಗಳ ಬೇಡಿಕೆಗೆ ಸ್ಪಂದಿಸಿರುವ ಸರ್ಕಾರ, ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್ಗೆ 8 ರೂಪಾಯಿ ಹೆಚ್ಚಿಸಿದೆ. ಇದರಿಂದ ಹೋಟೆಲ್ ಉದ್ಯಮದ ಮೇಲೂ ಹೆಚ್ಚುವರಿ ವೆಚ್ಚದ ಹೊರೆ ಬಿದ್ದಿದೆ. ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ. ರಾವ್ ಈ ಬಗ್ಗೆ ಮಾತನಾಡಿದ್ದು, ಸಾಮಾನ್ಯವಾಗಿ ಹಾಲಿನ ದರ 2ರಿಂದ 3 ರೂಪಾಯಿ ಹೆಚ್ಚಾದರೆ ಹೋಟೆಲ್ಗಳು ತಮ್ಮ ದರವನ್ನು ಬದಲಾಯಿಸುತ್ತಿರಲಿಲ್ಲ. ಆದರೆ ಈ ಬಾರಿ ಲೀಟರ್ಗೆ 8 ರೂಪಾಯಿ ಹೆಚ್ಚಳವಾಗಿರುವುದರಿಂದ ಉದ್ಯಮವನ್ನು ನಷ್ಟದಿಂದ ಉಳಿಸಿಕೊಳ್ಳಲು ಕಾಫಿ, ಟೀ ಮತ್ತು ಹಾಲಿನ ಉತ್ಪನ್ನಗಳ ದರ ಹೆಚ್ಚಿಸುವುದು ಅನಿವಾರ್ಯವಾಗಿದೆ ಎಂದು ತಿಳಿಸಿದ್ದಾರೆ.
ಹಾಲಿನ ಬೆಲೆ ಮಾತ್ರವಲ್ಲದೆ ಅಕ್ಕಿ, ಬೇಳೆಕಾಳು, ಖಾದ್ಯ ತೈಲ ಮತ್ತು ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಗಳೂ ಹೆಚ್ಚಾಗಿವೆ. ಈ ಎಲ್ಲಾ ವೆಚ್ಚಗಳನ್ನು ಸರಿದೂಗಿಸಲು ಇಡ್ಲಿ, ದೋಸೆ, ರೈಸ್ ಬಾತ್ ಸೇರಿದಂತೆ ತಿಂಡಿ ಮತ್ತು ಊಟದ ದರವನ್ನು ಶೇ. 5ರಿಂದ 10ರಷ್ಟು ಹೆಚ್ಚಿಸಲು ಹೋಟೆಲ್ ಮಾಲೀಕರು ಸಿದ್ಧತೆ ನಡೆಸಿದ್ದಾರೆ. ಇದರಿಂದ ಕೆಲವು ತಿಂಡಿ-ಊಟಗಳ ಬೆಲೆಯಲ್ಲಿ 10ರಿಂದ 20 ರೂಪಾಯಿವರೆಗೆ ಹೆಚ್ಚಳವಾಗುವ ಸಾಧ್ಯತೆಯಿದೆ.
ನಂದಿನಿ ಹಾಲಿನ ಪರಿಷ್ಕೃತ ದರದ ಪ್ರಕಾರ, ಟೋನ್ಡ್ ಹಾಲಿನ ಬೆಲೆ 46 ರೂಪಾಯಿಯಿಂದ 54 ರೂಪಾಯಿಗೆ ಏರಿಕೆಯಾಗಿದೆ. ಹೋಮೋಜಿನೈಸ್ಡ್ ಟೋನ್ಡ್ ಹಾಲು 47ರಿಂದ 56 ರೂಪಾಯಿಗೆ, ಹೋಮೋಜಿನೈಸ್ಡ್ ಹಸುವಿನ ಹಾಲು 50ರಿಂದ 58 ರೂಪಾಯಿಗೆ ಹೆಚ್ಚಾಗಿದೆ. ಸ್ಪೆಷಲ್ ಟೋನ್ಡ್ ಹಾಲು ಮತ್ತು ಶುಭಂ ಹಾಲಿನ ಬೆಲೆ 52ರಿಂದ 64 ರೂಪಾಯಿಗೆ ಏರಿಕೆಯಾಗಿದೆ. ಹೋಮೋಜಿನೈಸ್ಡ್ ಶುಭಂ ಹಾಲಿನ ದರ 53ರಿಂದ 65 ರೂಪಾಯಿಗೆ ತಲುಪಿದೆ.
ಇನ್ನು ಕಾಫಿ, ಟೀ ಬೆಲೆ ಏರಿಕೆ ಗ್ರಾಹಕರ ಅಸಮಾಧಾನಕ್ಕೆ ಕಾರಣವಾಗಿದೆ. ಹಾಲಿನ ದರ ಹೆಚ್ಚಳದ ಬೆನ್ನಲ್ಲೇ ಕೆಲವು ಹೋಟೆಲ್ಗಳಲ್ಲಿ ಒಂದು ಕಪ್ ಕಾಫಿ ಅಥವಾ ಟೀ ಬೆಲೆ 30 ರೂಪಾಯಿಯಿಂದ 38 ರೂಪಾಯಿಗೆ ಏರಿಕೆಯಾಗಿದೆ. ಕಾಫಿ ಟೀಗಾಗಿ ಹೋಟೆಲ್ಗೆ ಹೋದ ಗ್ರಾಹಕರು ಬೆಲೆ ಏರಿಕೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಒಂದು ಲೀಟರ್ ಹಾಲಿಗೆ 8 ರೂಪಾಯಿ ಹೆಚ್ಚಳವಾಗಿದ್ದರೂ, ಒಂದು ಕಪ್ ಕಾಫಿಗೆ 5ರಿಂದ 8 ರೂಪಾಯಿ ಹೆಚ್ಚಳ ಮಾಡುವುದು ಅತಿಯಾಗಿದೆ ಎಂಬುದು ಗ್ರಾಹಕರ ಅಭಿಪ್ರಾಯ. ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಬೆಲೆ ಏರಿಕೆ ಮಾಡಲಾಗುತ್ತಿದೆ ಎಂದೂ ಕೆಲವರು ಟೀಕಿಸಿದ್ದಾರೆ. ದಿನನಿತ್ಯ ಕಾಫಿ, ಟೀ ಸೇವಿಸುವ ಸಾಮಾನ್ಯ ಜನರ ಜೇಬಿಗೆ ಈ ಹೆಚ್ಚಳ ಮತ್ತಷ್ಟು ಹೊರೆ ತಂದಿದೆ ಎಂದು ಗ್ರಾಹಕರು ಅಳಲು ತೋಡಿಕೊಂಡಿದ್ದಾರೆ.




