
ಪ್ರಗತಿವಾಹಿನಿ ಸುದ್ದಿ: ರಾಜ್ಯದ ಸರ್ಕಾರಿ ಸಾರಿಗೆ ಬಸ್ಗಳ ಪ್ರಯಾಣ ದರ ನವೆಂಬರ್ 5ರಿಂದ ಹೆಚ್ಚಳವಾಗಲಿದೆ ಎಂದು ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ. ಡೀಸೆಲ್ ಬೆಲೆ ಏರಿಕೆ ಹಾಗೂ ಸಾರಿಗೆ ನಿಗಮಗಳ ಆರ್ಥಿಕ ನಷ್ಟದ ಹಿನ್ನೆಲೆಯಲ್ಲಿ ದರ ಪರಿಷ್ಕರಣೆ ಅನಿವಾರ್ಯವಾಗಿದೆ ಎಂದ ಸಚಿವರು, ನವೆಂಬರ್ 4ರಂದು ಸಾರಿಗೆ ಇಲಾಖೆ ಮತ್ತು ನಿಗಮಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ ದರ ಹೆಚ್ಚಳದ ಪ್ರಮಾಣವನ್ನು ಅಂತಿಮಗೊಳಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ ಒಂದು ವರ್ಷದಲ್ಲಿ ಐದು ಬಾರಿ ಡೀಸೆಲ್ ಬೆಲೆ ಹೆಚ್ಚಿಸಿದೆ. ಇದರಿಂದ ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳಿಗೆ ವಾರ್ಷಿಕ ಸುಮಾರು ಎರಡು ಸಾವಿರ ಕೋಟಿ ರೂಪಾಯಿ ನಷ್ಟವಾಗುತ್ತಿದೆ. ಈಗಾಗಲೇ ಸಾರಿಗೆ ಸಂಸ್ಥೆಗಳು ಒಟ್ಟು ಒಂಬತ್ತು ಸಾವಿರ ಕೋಟಿ ರೂಪಾಯಿ ನಷ್ಟದಲ್ಲಿವೆ ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಬಸ್ ಪ್ರಯಾಣ ದರ ಹೆಚ್ಚಳದ ಕುರಿತು ಚರ್ಚೆ ನಡೆದಿದೆ. ದರ ಪರಿಷ್ಕರಣೆಯ ಅಂತಿಮ ನಿರ್ಧಾರವನ್ನು ಸಾರಿಗೆ ಇಲಾಖೆಗೆ ವಹಿಸಲಾಗಿದೆ. ಹೀಗಾಗಿ ನವೆಂಬರ್ 4ರಂದು ಅಧಿಕಾರಿಗಳ ಸಭೆ ನಡೆಸಿ ಎಷ್ಟು ಪ್ರಮಾಣದಲ್ಲಿ ದರ ಹೆಚ್ಚಿಸಬೇಕು ಎಂಬುದನ್ನು ನಿರ್ಧರಿಸಿ, ನವೆಂಬರ್ 5ರಿಂದ ಪರಿಷ್ಕೃತ ದರ ಜಾರಿಗೆ ತರಲು ಉದ್ದೇಶಿಸಲಾಗಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಬಸ್ ಪ್ರಯಾಣ ದರ ಹೆಚ್ಚಳವನ್ನು ಟೀಕಿಸಿರುವ ಸಂಸದ ಡಾ. ಸುಧಾಕರ್ ವಿರುದ್ಧ ಸಚಿವರು ವಾಗ್ದಾಳಿ ನಡೆಸಿದ್ದಾರೆ. ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಬಸ್ ಪ್ರಯಾಣ ದರ ಕಡಿಮೆಯಿದೆ. ಸುಧಾಕರ್ ಅವರು ಟೀಕೆ ಮಾಡುವ ಮೊದಲು ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಪ್ರಯಾಣ ದರ ಎಷ್ಟಿದೆ ಎಂಬುದನ್ನು ಪರಿಶೀಲಿಸಲಿ. ನಷ್ಟದಲ್ಲಿರುವ ಸಾರಿಗೆ ಸಂಸ್ಥೆಗಳನ್ನು ಮುಚ್ಚಬೇಕೇ ಎಂದು ಪ್ರಶ್ನಿಸಿದ್ದಾರೆ.
ಹಾಲಿನ ದರ ಹೆಚ್ಚಳದ ವಿಚಾರದಲ್ಲೂ ಬಿಜೆಪಿ ವಿರುದ್ಧ ಬೈರತಿ ಸುರೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರೈತರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಸರ್ಕಾರ ಹಾಲಿನ ದರ ಹೆಚ್ಚಿಸಿದೆ. ಹೆಚ್ಚಿಸಿರುವ ಎಂಟು ರೂಪಾಯಿಗಳಲ್ಲಿ ಏಳು ರೂಪಾಯಿಯನ್ನು ರೈತರಿಗೆ ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಹಾಲಿನ ದರ ಹೆಚ್ಚಳದ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸಲಿ. ಆದರೆ ರೈತರ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಳ್ಳುವವರಿಗೆ ಚುನಾವಣೆಯಲ್ಲಿ ರೈತರೇ ಉತ್ತರ ನೀಡಲಿದ್ದಾರೆ ಎಂದು ಸಚಿವರು ಹೇಳಿದ್ದಾರೆ.



