*ಕನ್ನಡ ಚಿತ್ರರಂಗದ ನಟ ನಿರ್ಮಾಪಕ ಹೃದಯಾಘಾತಕ್ಕೆ ಬಲಿ*

ಪ್ರಗತಿವಾಹಿನಿ ಸುದ್ದಿ: ಕನ್ನಡ ಕಿರುತೆರೆ ಲೋಕದ ಖ್ಯಾತ ನಟ ಮತ್ತು ನಿರ್ಮಾಪಕ ದಿಲೀಪ್ ರಾಜ್ (47) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಇಂದು ಬೆಳಗ್ಗೆ ಹೃದಯಾಘಾತದಿಂದ ಅವರು ಸ್ವಗೃಹದಲ್ಲೇ ಕುಸಿದುಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಷ್ಟರಲ್ಲಿ ಅವರು ಮೃತಪಟ್ಟಿದ್ದರು ಎಂದು ವೈದ್ಯರು ತಿಳಿಸಿದ್ದಾರೆ.
ನಟನೆಯ ಜೊತೆಗೆ ಯಶಸ್ವಿ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದ ಅವರ ಹಠಾತ್ ನಿಧನ ಸ್ಯಾಂಡಲ್ವುಡ್ ಮತ್ತು ಕಿರುತೆರೆ ಅಭಿಮಾನಿಗಳಿಗೆ ಭಾರಿ ಆಘಾತ ನೀಡಿದೆ.
ದಿಲೀಪ್ ರಾಜ್ ಅವರು, ಕಾಲೇಜು ದಿನಗಳಿಂದಲೇ ನೃತ್ಯ ನಿರ್ದೇಶನ ಮತ್ತು ನಾಟಕಗಳಲ್ಲಿ ಸಕ್ರಿಯರಾಗಿದ್ದರು. ‘ನಟರಂಗ’ ಮತ್ತು ‘ದೃಷ್ಟಿ’ ತಂಡಗಳ ಮೂಲಕ ನಟನೆಯ ಓನಾಮ ಕಲಿತಿದ್ದ ಇವರು, ‘ಕಂಬದ ಮನೆ’ ಧಾರಾವಾಹಿಯ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದರು. ನಂತರ ಜನನಿ, ಅರ್ಧ ಸತ್ಯ ರಂಗೋಲಿ, ಕುಂಕುಮ ಭಾಗ್ಯ ಮಾಂಗಲ್ಯ ಪ್ರೀತಿಗಾಗಿ ಮತ್ತು ರಥಸಪ್ತಮಿ ಸೇರಿದಂತೆ ಹಲವು ಸೂಪರ್ ಹಿಟ್ ಧಾರಾವಾಹಿಗಳಲ್ಲಿ ನಟಿಸಿ ಮನೆಮಾತಾಗಿದ್ದರು.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಹಿಟ್ಲರ್ ಕಲ್ಯಾಣ’ ಧಾರಾವಾಹಿಯಲ್ಲಿ ‘ಎಜೆ’ (ಅಭಿನವ್ ಜಗನ್ನಾಥ್ ಎಂಬ ಖಡಕ್ ಪಾತ್ರದ ಮೂಲಕ ದಿಲೀಪ್ ರಾಜ್ ಕನ್ನಡಿಗರ ಮನಗೆದ್ದಿದ್ದರು. ಕೇವಲ ನಟನೆಯಷ್ಟೇ ಅಲ್ಲದೆ, ಈ ಧಾರಾವಾಹಿಯನ್ನು ತಮ್ಮದೇ ನಿರ್ಮಾಣ ಸಂಸ್ಥೆಯಡಿ ನಿರ್ಮಿಸುವ ಮೂಲಕ ಯಶಸ್ವಿ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದರು.
2005ರಲ್ಲಿ ‘ಬಾಯ್ ಫ್ರೆಂಡ್ ಚಿತ್ರದ ಮೂಲಕ ಸಿನಿಮಾರಂಗ ಪ್ರವೇಶಿಸಿದ ಇವರಿಗೆ ದೊಡ್ಡ ಬ್ರೇಕ್ ನೀಡಿದ್ದು ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಟನೆಯ ‘ಮಿಲನ’ ಚಿತ್ರ. ಈ ಚಿತ್ರದಲ್ಲಿ ಅವರು ನಿರ್ವಹಿಸಿದ ಖಳನಾಯಕನ ಪಾತ್ರ ಇಂದಿಗೂ ಪ್ರೇಕ್ಷಕರ ನೆನಪಿನಲ್ಲಿದೆ. ಇದಲ್ಲದೆ 2016ರಲ್ಲಿ ತೆರೆಕಂಡ ಸೂಪರ್ ಹಿಟ್ ‘ಯು ಟರ್ನ್’ ಚಲನಚಿತ್ರದಲ್ಲೂ ಅವರು ಪ್ರಮುಖ ಪಾತ್ರ ನಿರ್ವಹಿಸಿದ್ದರು.
ದಿಲೀಪ್ ರಾಜ್ ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು ಹಾಗೂ ಕಿರುತೆರೆಯ ಸಹ ಕಲಾವಿದರು ತೀವ್ರ ಸಂತಾಪ ಸೂಚಿಸಿದ್ದಾರೆ.


