Belagavi NewsBelgaum NewsKannada NewsKarnataka NewsLatest

*ಶ್ರೀ ಅಭಯ ವಿನಾಯಕ ದೇವಸ್ಥಾನದ 19ನೇ ವಾರ್ಷಿಕೋತ್ಸವ ಭಕ್ತಿಭಾವದಿಂದ ಸಂಪನ್ನ*

ಪ್ರಗತಿವಾಹಿನಿ ಸುದ್ದಿ, ಶಿರಸಿ: ಇಲ್ಲಿನ ನಾರಾಯಣಗುರು ನಗರದ ಶ್ರೀ ಅಭಯ ವಿನಾಯಕ ದೇವಸ್ಥಾನದ 19ನೇ ವಾರ್ಷಿಕೋತ್ಸವ ಮಂಗಳವಾರ ಭಕ್ತಿಭಾವ ಹಾಗೂ ಧಾರ್ಮಿಕ ಸಂಭ್ರಮದ ನಡುವೆ ವಿಜೃಂಭಣೆಯಿಂದ ನಡೆಯಿತು. ಬೆಳಗ್ಗೆಯಿಂದಲೇ ದೇವಸ್ಥಾನದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ಜರುಗಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದು ಆಶೀರ್ವಾದ ಪಡೆದರು.

ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ 6 ಗಂಟೆಯಿಂದಲೇ ಕಲಶಾಭಿಷೇಕ, ಹವನ, ಪಂಚಾಮೃತ ಅಭಿಷೇಕ, ಫಲಾಭಿಷೇಕ, ರುದ್ರಾಭಿಷೇಕ, ನವಗ್ರಹ ಅಭಿಷೇಕ ಸೇರಿದಂತೆ ಹಲವು ವೈದಿಕ ಪೂಜೆಗಳು ನೆರವೇರಿದವು. ಬಳಿಕ ಶ್ರೀ ಅಭಯ ವಿನಾಯಕ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿದ್ದು, ಮಹಾಪೂಜೆ ಹಾಗೂ ನವಗ್ರಹ ಹೋಮ ಭಕ್ತಿಭಾವದಿಂದ ನಡೆಯಿತು. ಪೂರ್ಣಾಹುತಿ ವೇಳೆ ಭಕ್ತರು ಪೂಜೆಯಲ್ಲಿ ಭಾಗವಹಿಸಿ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಮಧ್ಯಾಹ್ನ 12.30ಕ್ಕೆ ಮಹಾಪೂಜೆ ಹಾಗೂ ಮಹಾಮಂಗಳಾರತಿ ನೆರವೇರಿತು. ನಂತರ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದ್ದು, ನೂರಾರು ಭಕ್ತರು ಪ್ರಸಾದ ಸ್ವೀಕರಿಸಿದರು. ದೇವಸ್ಥಾನದ ಆವರಣದಲ್ಲಿ ಭಕ್ತರ ಸಂಚಾರದಿಂದ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.

*ಪಲ್ಲಕ್ಕಿ ಮೆರವಣಿಗೆ :*

ಸಂಜೆ 3.30ರಿಂದ ಶ್ರೀ ಅಭಯ ವಿನಾಯಕ ದೇವರ ಪಲ್ಲಕ್ಕಿ ಉತ್ಸವ ಜರುಗಿತು.  ಅಲಂಕೃತ ಪಲ್ಲಕ್ಕಿಯಲ್ಲಿ ವಿರಾಜಮಾನನಾದ ದೇವರ ಮೆರವಣಿಗೆ ಡೊಳ್ಳು, ವಾದ್ಯ, ಜಾಗಟೆಗಳ ನಾದದೊಂದಿಗೆ ನಾರಾಯಣಗುರು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಈ ವೇಳೆ ಜೋರಾಗಿ ಸುರಿದ ಮಳೆಯನ್ನೂ ಲೆಕ್ಕಿಸದೆ ನೂರಾರು ಭಕ್ತರು ಪಲ್ಲಕ್ಕಿ ಉತ್ಸವದಲ್ಲಿ ಪಾಲ್ಗೊಂಡರು. ಪಲ್ಲಕ್ಕಿ ಸಾಗಿದ ಮಾರ್ಗದೆಲ್ಲೆಡೆ ಭಕ್ತರು ಭಕ್ತಿ ಭಾವದಿಂದ ಪೂಜೆ ಸಲ್ಲಿಸಿ ದೇವರನ್ನು ಬರಮಾಡಿಕೊಂಡರು.

ಮನೆಗಳ ಬಾಗಿಲುಗಳಿಗೆ ತಳಿರು ತೋರಣ ಕಟ್ಟಿ ಶೃಂಗರಿಸಲಾಗಿದ್ದು, ಮನೆಯಂಗಳಗಳಲ್ಲಿ ರಂಗವಲ್ಲಿಗಳನ್ನು ಬಿಡಿಸಿ ಪಲ್ಲಕ್ಕಿಗೆ ಸ್ವಾಗತ ಕೋರಲಾಯಿತು. ಮಹಿಳೆಯರು ಆರತಿ ಬೆಳಗಿ ದೇವರ ಕೃಪೆಗೆ ಪಾತ್ರರಾದರು. ಮೆರವಣಿಗೆಯಲ್ಲಿ ಭಕ್ತರ ಜಯಘೋಷ ಹಾಗೂ ಧಾರ್ಮಿಕ ವಾತಾವರಣ ವಿಶೇಷ ಆಕರ್ಷಣೆಯಾಗಿತ್ತು.

ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಆರ್. ಎನ್. ಶೇಟ್,  ಪ್ರಮುಖರಾದ ಜೀವನ ಪೈ, ನವೀನ ಶೆಟ್ಟಿ, ಜಗನ್ನಾಥ ಗೋಕರ್ಣ, ಗಣಪತಿ ಆಚಾರಿ, ನೀಲಕಂಠ ಹೆಗಡೆ, ಬಿ. ಎಂ. ನಾಯ್ಕ, ಚರಣ ನಾಯ್ಕ, ನಾರಾಯಣ ಶೆಟ್ಟಿ , ಈಶ್ವರ ನಾಯ್ಕ, ಗೌರೀಶ ನಾಯ್ಕ, ವಿವೇಕ ಪೂಜಾರಿ ಸೇರಿದಂತೆ ಅನೇಕರು  ಪಾಲ್ಗೊಂಡಿದ್ದರು. ದೇವಸ್ಥಾನದ ಸದಸ್ಯರು ಹಾಗೂ ಗ್ರಾಮಸ್ಥರು ಸಹಕಾರ ನೀಡಿ ವಾರ್ಷಿಕೋತ್ಸವವನ್ನು ಯಶಸ್ವಿಗೊಳಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button