*ಹರ್ಷ ಟ್ರೋಫಿ – 2026 ರ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ*

ಪ್ರಗತಿವಾಹಿನಿ ಸುದ್ದಿ: ಗ್ರಾಮೀಣ ಯುವ ಪ್ರತಿಭೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಹಿರೇಬಾಗೇವಾಡಿ ಗ್ರಾಮದಲ್ಲಿ ಆಯೋಜಿಸಲಾದ ‘ಹರ್ಷ ಟ್ರೋಫಿ – 2026’ ಮೊದಲ ಆವೃತ್ತಿಯ ಕ್ರಿಕೆಟ್ ಪಂದ್ಯಾವಳಿಗೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಶನಿವಾರ ಚಾಲನೆ ನೀಡಿದರು.
ಗ್ರಾಮದ ಕ್ರೀಡಾಂಗಣದಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗಗಳಲ್ಲಿ ಕ್ರೀಡಾ ಚಟುವಟಿಕೆಗಳು ಹೆಚ್ಚಾಗುತ್ತಿರುವುದು ಸಂತಸದ ಸಂಗತಿ. ಕ್ರೀಡೆ ಯುವಕರಲ್ಲಿ ಶಿಸ್ತು, ತಂಡಭಾವನೆ ಮತ್ತು ನಾಯಕತ್ವ ಗುಣಗಳನ್ನು ಬೆಳೆಸುತ್ತದೆ. ಇಂತಹ ಪಂದ್ಯಾವಳಿಗಳು ಪ್ರತಿಭಾವಂತ ಆಟಗಾರರಿಗೆ ಉತ್ತಮ ವೇದಿಕೆಯಾಗುವುದರ ಜೊತೆಗೆ, ಯುವಕರನ್ನು ಸಕಾರಾತ್ಮಕ ಚಟುವಟಿಕೆಗಳತ್ತ ಸೆಳೆಯುತ್ತವೆ ಎಂದು ಹೇಳಿದರು.

ಕ್ರೀಡೆಯೊಂದಿಗೆ ಶಿಕ್ಷಣ ಮತ್ತು ಸಾಮಾಜಿಕ ಜವಾಬ್ದಾರಿಗಳನ್ನೂ ಸಮಾನವಾಗಿ ಗಮನಿಸಬೇಕೆಂದು ಕರೆ ನೀಡಿದ ಅವರು, ಮುಂದಿನ ದಿನಗಳಲ್ಲಿ ಹರ್ಷ ಟ್ರೋಫಿಯನ್ನು ಇನ್ನಷ್ಟು ದೊಡ್ಡ ಮಟ್ಟದಲ್ಲಿ ಆಯೋಜಿಸಿ ಜಿಲ್ಲೆಯ ಮಟ್ಟದ ಕ್ರೀಡಾಕೂಟವನ್ನಾಗಿ ರೂಪಿಸುವ ವಿಶ್ವಾಸ ವ್ಯಕ್ತಪಡಿಸಿದರು.
ಪಂದ್ಯಾವಳಿಯ ಉದ್ಘಾಟನಾ ಸಂದರ್ಭದಲ್ಲಿ ಆಟಗಾರರನ್ನು ಪರಿಚಯಿಸಿಕೊಂಡ ಚನ್ನರಾಜ ಹಟ್ಟಿಹೊಳಿ ಅವರು, ಬ್ಯಾಟಿಂಗ್ ಮೂಲಕ ಪಂದ್ಯಾವಳಿಗೆ ಅಧಿಕೃತ ಚಾಲನೆ ನೀಡಿದರು.
ವಿವಿಧ ಗ್ರಾಮಗಳಿಂದ ಆಗಮಿಸಿದ್ದ ತಂಡಗಳು ಉತ್ಸಾಹದಿಂದ ಪಂದ್ಯಗಳಲ್ಲಿ ಭಾಗವಹಿಸಿದ್ದವು. ಕ್ರೀಡಾಂಗಣದಲ್ಲಿ ಯುವಕರ ಸಂಭ್ರಮ, ಪ್ರೇಕ್ಷಕರ ಚೀರಾಟ ಮತ್ತು ಕ್ರಿಕೆಟ್ ಹಬ್ಬದ ವಾತಾವರಣ ಗಮನ ಸೆಳೆಯಿತು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಪ್ರಮುಖ ಮುಖಂಡರು, ಯುವ ಕಾರ್ಯಕರ್ತರು, ಕ್ರೀಡಾಭಿಮಾನಿಗಳು ಹಾಗೂ ವಿವಿಧ ತಂಡಗಳ ಆಟಗಾರರು ಉಪಸ್ಥಿತರಿದ್ದರು.



