Karnataka NewsLatestPolitics

*ವೃದ್ಧ ಮಹಿಳೆಗೆ ನಿವೇಶನ; ಮಾನವೀಯತೆ ಆಧಾರದಲ್ಲಿ ಸ್ಪಂದಿಸಲು ಜಿಲ್ಲಾಧಿಕಾರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೂಚನೆ*

ಪ್ರಗತಿವಾಹಿನಿ ಸುದ್ದಿ: ಉಡುಪಿ: ಮುಸ್ಲಿಂ ಮಹಿಳೆಯರ ನೆರವಿನೊಂದಿಗೆ ಮನೆ ನಿವೇಶನಕ್ಕಾಗಿ ಅರ್ಜಿ ಹಿಡಿದು ಬಂದಿದ್ದ ವೃದ್ಧ ಮಹಿಳೆ ಗಿರಿಜಾ ಶೆಟ್ಟಿಗಾರ್ ಅಹವಾಲು ಆಲಿಸಿದ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ತುರ್ತಾಗಿ ಸ್ಪಂದಿಸುವಂತೆ ಉಡುಪಿ ಜಿಲ್ಲಾಧಿಕಾರಿಗೆ ಪತ್ರ ಬರೆದು ಸೂಚಿಸಿದ್ದಾರೆ.

80 ಬಡಗಬೆಟ್ಟು ಗ್ರಾಮದ ನಿವಾಸಿ ಗಿರಿಜಾ ಶೆಟ್ಟಿಗಾರ್ ಎಂಬ ಮಹಿಳೆ ತನ್ನ ನೆರೆಮನೆಯ ಮುಸ್ಲಿಂ ಮಹಿಳೆಯರ ನೆರವಿನೊಂದಿಗೆ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿಯಾಗಿ ಸಹಾಯ ಕೇಳಿದ್ದರು. 1990ರಲ್ಲಿ ವಸತಿ ಯೋಜನೆಯಡಿ ಮಂಜೂರಾಗಿದ್ದ 5 ಸೆಂಟ್ಸ್ ಜಾಗದ ಹಕ್ಕುಪತ್ರವಿದ್ದರೂ ಪ್ರಸ್ತುತ ಅರಣ್ಯ ಇಲಾಖೆಯು ಡೀಮ್ಡ್ ಫಾರೆಸ್ಟ್ ಎಂದು ಜಾಗದ ಸ್ವಾಧೀನಕ್ಕೆ ಆಕ್ಷೇಪಿಸುತ್ತಿರುವುದು ಮತ್ತು ಗ್ರಾಮ ಪಂಚಾಯಿತಿಯು ಮನೆ ಕಟ್ಟಲು ಪರವಾನಗಿ ನೀಡದಿರುವ ವಿಚಾರದ ಬಗ್ಗೆ ಮಹಿಳೆ ಕಷ್ಟಪಡುತ್ತಿರುವುದನ್ನು ಸಚಿವರು ಆಕೆಯ ಅರ್ಜಿಯನ್ನು ಲಗತ್ತಿಸಿ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ.

ತಕ್ಷಣವೇ ಈ ವಿಷಯದಲ್ಲಿ ಸ್ಪಂದಿಸಿ ಕಂದಾಯ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಜಂಟಿ ಪರಿಶೀಲನೆ ನಡೆಸಿ ಮಾನವೀಯತೆ ಆಧಾರದಲ್ಲಿ ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸಿ ಕೈಗೊಂಡ ಕ್ರಮದ ವರದಿಯನ್ನು ಸಲ್ಲಿಸಬೇಕೆಂದು ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ. ಹಿಂದು ವೃದ್ಧ ಮಹಿಳೆಯ ಪರವಾಗಿ ಮಿಡಿದ ಮುಸ್ಲಿಂ ಮಹಿಳೆಯರು ಎನ್ನುವ ನೆಲೆಯಲ್ಲಿ ಅರ್ಜಿ ಹಿಡಿದು ಸಚಿವರಲ್ಲಿಗೆ ಬಂದಿದ್ದ ವಿಚಾರ ರಾಜ್ಯದಲ್ಲಿ ವ್ಯಾಪಕ ಸುದ್ದಿಯಾಗಿತ್ತು. ಹಿಂದು- ಮುಸ್ಲಿಮರು ಒಟ್ಟಿಗೆ ಬಂದಿದ್ದನ್ನು ಸಚಿವರು ಪ್ರಶಂಸಿಸಿ, ಇದು ನಮ್ಮ ಭಾರತ ಎಂದು ಹೇಳಿದ್ದರು.

Home add -Advt

Related Articles

Back to top button