Belagavi NewsBelgaum NewsEducationKannada NewsKarnataka News

*ಪರೀಕ್ಷೆ ಮುಗಿದು 10 ನಿಮಿಷದಲ್ಲಿ ಫಲಿತಾಂಶ ಪ್ರಕಟ: ಇತಿಹಾಸ ಸೃಷ್ಟಿಸಿದ ವಿಟಿಯು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ದೇಶದ ಪ್ರತಿಷ್ಠ ತಾಂತ್ರಿಕ ವಿಶ್ವವಿದ್ಯಾಲಯಹಳಲ್ಲಿ ಒಂದಾದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಹೊಸ ಇತಿಹಾಸ ನಿರ್ಮಿಸಿದೆ.  ಅಂತಿಮ ಸೆಮಿಸ್ಟರ್ ಪರೀಕ್ಷೆ ಮುಗಿದ ಕೇವಲ 10 ನಿಮಿಷಗಳ ಅವಧಿಯಲ್ಲಿ ಫಲಿತಾಂಶವನ್ನು ಪ್ರಕಟಿಸುವ ಮೂಲಕ ಹೊಸ ಇತಿಹಾಸಕ್ಕೆ ನಾಂದಿ ಹಾಡದೆ.

ಬಿ.ಇ ಹಾಗೂ ಬಿ.ಟೆಕ್ ಕೋರ್ಸ್‌ಗಳ ಪರೀಕ್ಷೆ ಶುಕ್ರವಾರ ಸಂಜೆ 5:30ಕ್ಕೆ ಕೊನೆಯ ಮುಕ್ತಾಯವಾಗಿದ್ದು ಕೇವಲ ಹತ್ತೇ ನಿಮಿಷದಲ್ಲಿ ಅಂದರೆ ಸಂಜೆ 5:40ಕ್ಕೆ ವಿಶ್ವವಿದ್ಯಾಲಯವು ಅಧಿಕೃತವಾಗಿ ರಿಸಲ್ಟ್ ಬಿಡುಗಡೆ ಮಾಡಿದೆ. 

ಈ ಬಾರಿ ಅಂತಿಮ ಸೆಮಿಸ್ಟರ್ ಪರೀಕ್ಷೆಗೆ ಒಟ್ಟು 56,192 ವಿದ್ಯಾರ್ಥಿಗಳು ಹಾಜರಾಗಿದ್ದು, ಶೇಕಡಾ 99.98 ರಷ್ಟು ಅದ್ಭುತ ಫಲಿತಾಂಶ ದಾಖಲಾಗಿದೆ. ವಿಶೇಷವೆಂದರೆ, ಫಲಿತಾಂಶ ಪ್ರಕಟವಾಗುತ್ತಿದ್ದಂತೆ ವಿದ್ಯಾರ್ಥಿಗಳ ಮೊಬೈಲ್ ಸಂಖ್ಯೆಗೆ ನೇರವಾಗಿ ಅಂಕಗಳ ವಿವರವನ್ನು ಸಂದೇಶದ ಮೂಲಕ ಕಳುಹಿಸಲಾಗಿದೆ.

ಕಳೆದ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಇಡೀ ಮೌಲ್ಯಮಾಪನ ಪ್ರಕ್ರಿಯೆಯನ್ನು ನಿಗದಿತ ಸಮಯಕ್ಕಿಂತ 8 ದಿನ ಮುಂಚಿತವಾಗಿಯೇ ಪೂರ್ಣಗೊಳಿಸಲಾಗಿತ್ತು. ಈ ಹಿಂದೆ ಪರೀಕ್ಷೆ ಮುಗಿದ ಒಂದು ಗಂಟೆಯೊಳಗೆ ಫಲಿತಾಂಶ ನೀಡಿ ದಾಖಲೆ ಬರೆದಿದ್ದ ವಿಟಿಯು, ಈ ಬಾರಿ ತನ್ನದೇ ದಾಖಲೆಯನ್ನು ತಾನೇ ಧೂಳೀಪಟ ಮಾಡಿದೆ.

Home add -Advt

ಈ ಕುರಿತು ಮಾತನಾಡಿದ ಕುಲಪತಿ ಪ್ರೊ. ಎಸ್. ವಿದ್ಯಾಶಂಕರ್ ಅವರು, “ವಿಟಿಯು ಸದಾ ಆಧುನಿಕ ತಂತ್ರಜ್ಞಾನದ ಅಳವಡಿಕೆಯಲ್ಲಿ ಮುಂಚೂಣಿಯಲ್ಲಿದ್ದು ವಿದ್ಯಾರ್ಥಿ ಸ್ನೇಹಿಯಾಗಿ ಕೆಲಸ ಮಾಡುತ್ತದೆ ಎಂಬುದಕ್ಕೆ ಈ ಯಶಸ್ಸೇ ಸಾಕ್ಷಿ. ಅಂತಿಮ ವರ್ಷದ ವಿದ್ಯಾರ್ಥಿಗಳು ಉದ್ಯೋಗ ಹಾಗೂ ಉನ್ನತ ಶಿಕ್ಷಣದ ಪ್ರವೇಶಾತಿಗಾಗಿ ಫಲಿತಾಂಶದ ನಿರೀಕ್ಷೆಯಲ್ಲಿರುತ್ತಾರೆ. ಅವರ ಭವಿಷ್ಯಕ್ಕೆ ನೆರವಾಗಲು ಶೀಘ್ರವಾಗಿ ರಿಸಲ್ಸ್ ನೀಡಿದ್ದೇವೆ” ಎಂದು ತಿಳಿಸುತ್ತಾ ಶ್ರಮಿಸಿದ ಇಡೀ ಸಿಬ್ಬಂದಿ ವರ್ಗಕ್ಕೆ ಅಭಿನಂದನೆ ಸಲ್ಲಿಸಿದರು.

ಮೌಲ್ಯಮಾಪನ ವಿಭಾಗದ ಕುಲಸಚಿವ ಪ್ರೊ. ಯು. ಜೆ. ಉಜ್ವಲ್ ಮಾತನಾಡಿ, “ಉತ್ತರ ಪತ್ರಿಕೆಗಳನ್ನು ಅತ್ಯಾಧುನಿಕ ಡಿಜಿಟಲ್ ಮೌಲ್ಯಮಾಪನ ಪ್ರಕ್ರಿಯೆಗೆ ಒಳಪಡಿಸಿದ್ದರಿಂದ ಹಾಗೂ ವ್ಯವಸ್ಥಿತ ಸಿದ್ಧತೆ ಮಾಡಿಕೊಂಡಿದ್ದರಿಂದ ಈ ಅಸಾಧ್ಯವಾದ ಸಾಧನೆ ಎಲ್ಲರ ಸಹಕಾರದೊಂದಿಗೆ ಸಾಧ್ಯವಾಗಿದೆ” ಎಂದರು.

ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಅಧಿಕೃತ ವೆಬ್‌ಸೈಟ್ https://results.vtu.ac.in/ಗೆ ಭೇಟಿ ನೀಡಿ ತಮ್ಮ ವಿವರವಾದ ಅಂಕಪಟ್ಟಿಯನ್ನು ವೀಕ್ಷಿಸಬಹುದಾಗಿದೆ.

Related Articles

Back to top button