*ಪ್ರಾದೇಶಿಕ ಆಯುಕ್ತರಿಂದ “From Land to Layout” ಪುಸ್ತಕ ಬಿಡುಗಡೆ*

ಕರ್ನಾಟಕದ ರಿಯಲ್ ಎಸ್ಟೇಟ್ ಮತ್ತು ಭೂ ದಾಖಲೆಗಳ ಕುರಿತ ಅಧಿಕೃತ ಪ್ರಾಯೋಗಿಕ ಕೈಪಿಡಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಕೆ. ಎಂ. ಜಾನಕಿ ಅವರು ಇಂದು ಬೆಳಗಾವಿಯಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ, ಡಾ. ನಜ್ಜಾ ಪೀರ್‌ಜಾದೆ ಅವರು ರಚಿಸಿರುವ “From Land to Layout: Practical Guidance for Real Estate” ಪುಸ್ತಕವನ್ನು ಅಧಿಕೃತವಾಗಿ ಬಿಡುಗಡೆ ಮಾಡಿದರು.
ಲೇಖಕರಾದ ಡಾ. ನಜ್ಜಾ ಪೀರ್‌ಜಾದೆ ಅವರು ಬೆಳಗಾವಿ ವಿಭಾಗದ ಮಾಜಿ ಹೆಚ್ಚುವರಿ ಪ್ರಾದೇಶಿಕ ಆಯುಕ್ತರು ಹಾಗೂ ಭೂ ದಾಖಲೆಗಳ ಪ್ರಾದೇಶಿಕ ಜಂಟಿ ನಿರ್ದೇಶಕರಾಗಿ 28 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ ಅನುಭವಿ ಆಡಳಿತ ಅಧಿಕಾರಿಯಾಗಿದ್ದಾರೆ.
ಕಾರ್ಯಕ್ರಮದಲ್ಲಿ ಭೂ ದಾಖಲೆಗಳ ಪ್ರಾದೇಶಿಕ ಜಂಟಿ ನಿರ್ದೇಶಕರಾದ ಉಮೇಶ್ ಅವರು, ಸಹಾಯಕ ನಿರ್ದೇಶಕರು, ತಹಶೀಲ್ದಾರರು, ಕಂದಾಯ ಅಧಿಕಾರಿಗಳು, ಸರ್ವೆಯರ್‌ಗಳು ಸೇರಿದಂತೆ ಕಂದಾಯ ಮತ್ತು ಸರ್ವೆ, ಭೂ ದಾಖಲೆಗಳ ಇಲಾಖೆಯ ಹಲವಾರು ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಜಾನಕಿ ಅವರು, ಈ ಕೃತಿಯು ಭೂ ದಾಖಲೆಗಳು, ಸರ್ವೆ ಪ್ರಕ್ರಿಯೆಗಳು ಹಾಗೂ ಕೃಷಿ ಭೂಮಿಯಿಂದ ಅನುಮೋದಿತ ಲೇಔಟ್‌ವರೆಗಿನ ಕಾನೂನು ಮತ್ತು ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಇಲಾಖಾ ಅಧಿಕಾರಿಗಳು, ಆಸ್ತಿ ಮಾಲೀಕರು ಮತ್ತು ಸಾರ್ವಜನಿಕರು ಸುಲಭವಾಗಿ ಅರ್ಥಮಾಡಿಕೊಳ್ಳಲು ಅತ್ಯಂತ ಉಪಯುಕ್ತ ಮತ್ತು ಸಕಾಲಿಕ ಮಾರ್ಗದರ್ಶಕ ಗ್ರಂಥವಾಗಿದೆ ಎಂದು ಶ್ಲಾಘಿಸಿದರು. ಭೂಮಿ, ನಿವೇಶನ ಮತ್ತು ನೋಂದಣಿ ಪ್ರಕ್ರಿಯೆಗಳ ಕುರಿತು ಸಮಗ್ರ ಜ್ಞಾನ ಪಡೆಯಲು ಪ್ರತಿಯೊಬ್ಬರೂ ಈ ಪುಸ್ತಕವನ್ನು ಓದಬೇಕು ಎಂದು ಅವರು ಆಗ್ರಹಿಸಿದರು.
ಪ್ರಾದೇಶಿಕ ಜಂಟಿ ನಿರ್ದೇಶಕರಾದ ಉಮೇಶ್ ಅವರು ಮಾತನಾಡಿ, ಕ್ಷೇತ್ರ ಅಧಿಕಾರಿಗಳು, ವಕೀಲರು, ಡೆವಲಪರ್‌ಗಳು ಹಾಗೂ ಸಾಮಾನ್ಯ ನಾಗರಿಕರಿಗೆ ಈ ಪುಸ್ತಕವು ಕರ್ನಾಟಕದ ಭೂ ಆಡಳಿತ ವ್ಯವಸ್ಥೆಗೆ ಸಂಬಂಧಿಸಿದ ಪ್ರಾಯೋಗಿಕ ಮಾಹಿತಿಯ ಸಮಗ್ರ ಆಕರ ಗ್ರಂಥವಾಗಲಿದೆ ಎಂದು ಅಭಿಪ್ರಾಯಪಟ್ಟರು. ಇಬ್ಬರೂ ಗಣ್ಯ ಅಧಿಕಾರಿಗಳು, ೨೮ ವರ್ಷಗಳ ಆಡಳಿತ ಅನುಭವದ ಆಧಾರದ ಮೇಲೆ, ಸರ್ಕಾರಿ ಪ್ರಕ್ರಿಯೆಗಳು ಮತ್ತು ಸಾರ್ವಜನಿಕ ತಿಳುವಳಿಕೆಯ ನಡುವೆ ಸೇತುವೆಯಾಗುವಂತೆ ಈ ಕೃತಿ ರಚಿಸಿರುವ ಡಾ. ನಜ್ಜಾ ಪೀರ್‌ಜಾದೆ ಅವರನ್ನು ಮುಕ್ತಕಂಠದಿಂದ ಅಭಿನಂದಿಸಿದರು.
ಲೇಖಕರಾದ ಡಾ. ನಜ್ಜಾ ಪೀರ್‌ಜಾದೆ ಅವರು ಮಾತನಾಡಿ, ಈ ಕೃತಿ ರಚನೆಗೆ ಮುಖ್ಯ ಪ್ರೇರಣೆಯಾದ ಜಾನಕಿ ಮೇಡಂ ಅವರಿಗೆ ವಿಶೇಷ ಕೃತಜ್ಞತೆ ಸಲ್ಲಿಸಿದರು. ತಮ್ಮ ಸೇವಾ ಅವಧಿಯಲ್ಲಿ ಮಾರ್ಗದರ್ಶನ ನೀಡಿದ, ಜ್ಞಾನ ಹಂಚಿಕೊಂಡ ಮತ್ತು ಒಟ್ಟಾಗಿ ದುಡಿದ ಇಲಾಖೆಯ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗವನ್ನು ಅವರು ಕೃತಜ್ಞತೆಯಿಂದ ಸ್ಮರಿಸಿದರು. ಈ ಕೃತಿಯು ತಮ್ಮ ವೈಯಕ್ತಿಕ ಪ್ರಯತ್ನ ಮಾತ್ರವಲ್ಲ; ಇದು ಇಡೀ ಇಲಾಖೆಯ ಸಾಮೂಹಿಕ ಅನುಭವ ಮತ್ತು ಸಮರ್ಪಣೆಯ ಪ್ರತಿಫಲ ಎಂದು ಅವರು ಭಾವಪೂರ್ಣವಾಗಿ ನುಡಿದರು.
ಈ ಕೃತಿಗೆ ಪ್ರಖ್ಯಾತ ಶಿಕ್ಷಣತಜ್ಞರು, ಕೆಎಎಚ್ ಇಆರ್ ಮತ್ತು ಕೆಎಲ್‌ಇ ತಾಂತ್ರಿಕ ವಿಶ್ವವಿದ್ದಾ ಲಯದ ಕುಲಾಧಿಪತಿಗಳು ಹಾಗೂ ಮಾಜಿ ಸಂಸದರಾದ ಪದ್ಮಶ್ರೀ ಡಾ. ಪ್ರಭಾಕರ ಬಿ. ಕೋರೆ ಅವರು ಆಶೀರ್ವಚನ ನೀಡಿದ್ದಾರೆ. ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕಟಾರಿಯಾ ಅವರು ಗ್ರಂಥಕ್ಕೆ ಮುನ್ನುಡಿ ಬರೆದಿದ್ದಾರೆ. ಸರ್ವೆ, ಭೂ ದಾಖಲೆಗಳ ಆಯುಕ್ತರಾದ ವೆಂಕಟ ರಾಜ, ಕೊಪ್ಪಳ ಜಿಲ್ಲೆಯ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿ ಡಾ. ಸುರೇಶ್ ಇಟ್ನಾಳ್ ಹಾಗೂ ಬೆಂಗಳೂರು ವಿಭಾಗದ ಪ್ರಾದೇಶಿಕ ಜಂಟಿ ನಿರ್ದೇಶಕರಾದ ಎಸ್. ನಿಸಾರ್ ಅಹ್ಮದ್, ಅವರು ಪುಸ್ತಕದ ಹಿಂಬದಿ ಮುಖಪುಟದಲ್ಲಿ ಮೌಲ್ಯಯುತ ಅಭಿಪ್ರಾಯ ನೀಡಿದ್ದಾರೆ.
ಈ ಎಲ್ಲಾ ಗಣ್ಯರ ಮಾರ್ಗದರ್ಶನ ಮತ್ತು ಸಹಕಾರಕ್ಕಾಗಿ ಲೇಖಕರು ಹೃತೂರ್ವಕ ಕೃತಜ್ಞತೆ ಸಲ್ಲಿಸಿದರು.
ಬೆಳಗಾವಿಯ ಅಮನ್ ಅರ್ಶ್ ಪಬ್ಲಿಕೇಷನ್ ಪ್ರಕಟಿಸಿರುವ ಈ ಪುಸ್ತಕವು ಕರ್ನಾಟಕದ ಭೂ ಆಡಳಿತ ವ್ಯವಸ್ಥೆಯ ಸಮಗ್ರ ಚಿತ್ರಣ ನೀಡುತ್ತದೆ. ಟಿಪ್ಪಣ್, ಎಫ್‌ಎಂಬಿ, ಆರ್‌ಟಿಸಿ, ಫೋಡಿ, ಭೂ ಪರಿವರ್ತನೆ, ಲೇಔಟ್ ಮಾನದಂಡಗಳು, ಯೋಜನಾ ಅನುಮೋದನೆ ಮತ್ತು ರೇರಾ ಅನುಸರಣೆ ಇವೆಲ್ಲದರ ಜೊತೆಗೆ, ಆಸ್ತಿ ವಹಿವಾಟು, ವಿವಾದ ಪರಿಹಾರ ಹಾಗೂ ಭೂಮಿ, ಮೋಜಿನಿ ವಿ೩, ದಿಶಾಂಕ್, ಇ-ಸ್ವತ್ತು, ಇ-ಆಸ್ತಿ ಮತ್ತು ಕಾವೇರಿ ೨.೦ ಡಿಜಿಟಲ್ ಪೋರ್ಟಲ್‌ಗಳ ಕುರಿತು ಪ್ರಾಯೋಗಿಕ ಮಾರ್ಗದರ್ಶನವನ್ನು ಈ ಕೃತಿ ಒಳಗೊಂಡಿದೆ.


