*ಕೃಷಿ ಕಾರ್ಮಿಕರಿದ್ದ ಆಟೋ ರಿಕ್ಷಾಗೆ ಗುದ್ದಿದ ಟ್ಯಾಂಕರ್: 6 ಜನ ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ಕೆಲಸ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದ ಕೃಷಿ ಕಾರ್ಮಿಕರಿದ್ದ ಆಟೋ ರಿಕ್ಷಾಗೆ ವೇಗವಾಗಿ ಬಂದ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ, ಆಟೋ ಚಾಲಕ ಸೇರಿ ಐವರು ಕೂಲಿ ಕಾರ್ಮಿಕರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ.
ದಿನವಿಡೀ ಕೃಷಿ ಕೆಲಸ ಮುಗಿಸಿ ತಮ್ಮ ಗ್ರಾಮಕ್ಕೆ ಆಟೋದಲ್ಲಿ ವಾಪಸ್ ಆಗುತ್ತಿದ್ದಾಗ ಈ ಭೀಕರ ದುರಂತ ಸಂಭವಿಸಿದೆ. ಅಪಘಾತದ ರಭಸಕ್ಕೆ ಆಟೋ ರಿಕ್ಷಾ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ವಾಹನದಲ್ಲಿದ್ದ ಐವರು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಅಸುನೀಗಿದ್ದಾರೆ.
ಈ ಘಟನೆ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಜಹೀರಾಬಾದ್ ಬಳಿಯ ಚಿರಾಘಪಲ್ಲಿ-ಸತ್ವಾರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಮೃತಪಟ್ಟವರೆಲ್ಲರೂ ಬೀದರ್ ಜಿಲ್ಲೆಯ ರಾಜ್‌ಗಿರಿ ಗ್ರಾಮದ ಮೂಲದವರೆಂದು ಗುರುತಿಸಲಾಗಿದೆ.
ಈ ಭೀಕರ ಅಪಘಾತದಲ್ಲಿ ಏಳಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಜಹೀರಾಬಾದ್‌ನ ಸರ್ಕಾರಿ ಏರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದ್ದು, ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.



