*ಬೆಳಗಾವಿಯಲ್ಲಿ ಹಲ್ಮಿಡಿ ಶಾಸನದ ಪ್ರತಿಕೃತಿಗೆ ಸಪ್ತನದಿಗಳ ನೀರಿನಿಂದ ಜಲಾಭಿಷೇಕ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಆವರಣದಲ್ಲಿ ನೂತನವಾಗಿ ಪ್ರತಿಷ್ಠಾಪಿಸಿರುವ ಕನ್ನಡದ ಮೊದಲ ಹಲ್ಮಡಿ ಶಾಸನದ ಪ್ರತಿಕೃತಿಗೆ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಹಾಲು ಮತ್ತು ಸಪ್ತನದಿಗಳಿಂದ ತಂದಿದ್ದ ನೀರಿನಿಂದ ಅಭಿಷೇಕ ಮಾಡಲಾಯಿತು.
ಕನ್ನಡಪರ ಸಂಘಟನೆಗಳ ಮಹಿಳಾ ಕಾರ್ಯಕರ್ತೆಯರು ತಲೆ ಮೇಲೆ ಹೊತ್ತು ತಂದ ಕೊಡದಲ್ಲಿದ್ದ ಸಪ್ತನದಿಗಳ ನೀರನ್ನು ಶಾಸನದ ಪ್ರತಿಕೃತಿ ಮೇಲೆ ಹಾಕಿದರು. ಬಳಿಕ ಪೂಜೆ ಸಲ್ಲಿಸಲಾಯಿತು.
ಈ ವೇಳೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಸಾ.ರಾ.ಗೋವಿಂದು, ಅಶೋಕ ಚಂದರಗಿ, ಮಹಾದೇವ ತಳವಾರ, ಶ್ರೀನಿವಾಸ ತಾಳೂಕರ್, ವಾಜೀದ್ ಹಿರೇಕೊಡಿ ಸೇರಿ ಮತ್ತಿತರರು ಇದ್ದರು.
ಬೆಳಗಾವಿ ಕರ್ನಾಟಕದ ಅಭಿಭಾಜ್ಯ ಅಂಗ ಎಂದು ಘೋಷಣೆ ಮಾಡಬೇಕೆಂದು ಹೋರಾಟ ಮಾಡಲಾಗುತ್ತಿದೆ. 2005 ರಲ್ಲಿ ವಿಜಯ್ ಮೋರೆ ಮಹಾಪೌರರಾಗಿದ್ದಾಗ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಠರಾವು ಪಾಸ್ ಮಾಡಲಾಗಿದ್ದು, ಅದನ್ನು ವಿರೋಧಿಸಿ ಕನ್ನಡ ಪರ ಸಂಘಟನೆಗಳು ಪ್ರತಿಭಟಯೆನ್ನು ನಡೆಸುತ್ತಿವೆ. ಗಡಿ ವಿವಾದವು ಸುಪ್ರೀಂಕೋರ್ಟಿನಲ್ಲಿದ್ದು, ಅದು ಬೇಗನೆ ಬಗೆಹರಿಯಬೇಕು. ಮಹಾಜನ್ ವರದಿಯೇ ಗಡಿವಿವಾದಲ್ಲಿ ಅಂತಿಮ, ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ನಿರ್ಣಯವನ್ನು ಪಾಸ್ ಮಾಡಬೇಕು. ಅಲ್ಲಿಯ ವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಎಚ್ಚರಿಕೆಯನ್ನು ನೀಡಿದರು.

