*ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ಅವಶ್ಯಕ ಡಾ. ಕರ್ನಲ್ ಎಂ.ದಯಾನಂದ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಅಪಘಾತ ಹಾಗೂ ತುರ್ತು ವೈದ್ಯಕೀಯ ಪರಿಸ್ಥಿಯಲ್ಲಿ ಅವಶ್ಯವಿರುವ ಚಿಕಿತ್ಸೆಯನ್ನು ನೀಡುತ್ತ ತಡಮಾಡದೇ ಸಕಲ ವ್ಯವಸ್ಥೆಯಿರುವ ಆಸ್ಪತ್ರೆಗೆ ಸಾಗಿಸಬೇಕು. ಸುವರ್ಣ ಘಳಿಗೆ (ಗೋಲ್ಟನ್ ಅವರ) ಅವಧಿಯನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿ ರೋಗಿಯ ಪ್ರಾಣ ಉಳಿಸಲು ಸಹಕರಿಸಬೇಕು. ಯಾವುದೇ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ಅವಶ್ಯಕ ಎಂದು ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ವೈದ್ಯಕೀಯ ನಿರ್ದೇಶಕರಾದ ಡಾ. ಕರ್ನಲ್ ಎಂ ದಯಾನಂದ ಅವರಿಂದಿಲ್ಲಿ ಹೇಳಿದರು.
ಜೆಎನ್ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೆಂದ್ರದ ಎಮರ್ಜೆನ್ಸಿ ಮೆಡಿಸಿನ್ ವಿಭಾಗವು ಇತ್ತೀಚೆಗೆ ಏರ್ಪಡಿಸಿದ್ದ ವಿಶ್ವ ಎಮರ್ಜೆನ್ಸಿ ಮೆಡಿಸಿನ್ ದಿನಾಚರಣೆಯಲ್ಲಿ ಮಾತನಾಡಿದ ಅವರು, ಬೆಳಗಾವಿ ನಗರದಲ್ಲಿಯೂ ಸಹ ತುರ್ತು ವೈದ್ಯಕೀಯ ಸೇವೆಗಳ ಮಹತ್ವದ ಬಗ್ಗೆ ಸರಿಯಾದ ಅರಿವು ಇಲ್ಲ. ಅತ್ಯುತ್ತಮ ತುರ್ತು ಚಿಕಿತ್ಸೆ ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲೇ ಲಭ್ಯವಿದೆ. ಅತ್ಯಂತ ಸಾಮರ್ಥ್ಯ ಮತ್ತು ಅನುಭವಿ ತಜ್ಞವೈದ್ಯರ ತಂಡವು ಸದಾ ಕಾರ್ಯಪ್ರವೃತ್ತವಾಗಿದೆ ಎಂದರು.
ತುರ್ತು ಸಂದರ್ಭದಲ್ಲಿ ಸಾವುಗಳು ಸಂಭವಿಸಿದರೆ ವೈದ್ಯರು ಮತ್ತು ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಯುತ್ತವೆ. ಅವುಗಳನ್ನು ಎದುರಿಸಬೇಕಾಗಿದೆ. ತುರ್ತು ಸಂದರ್ಭದಲ್ಲಿ ಶೀಘ್ರವೇ ಆಸ್ಪತ್ರೆಗೆ ಹೋಗಬೇಕು. ಆದರೆ ನಿರ್ಲಕ್ಷಿಸುತ್ತಾರೆ ಎಂದ ಅವರು, ಇಂದು ಮಾರ್ಕೆಟಿಂಗ ದಿನಾಚರಣೆ ಕೂಡ ಇದ್ದು, ಮಾರಕಟ್ಟೆ ವಿಸ್ತರಣೆ ಕೂಡ ಇಂದು ಅತ್ಯವಶ್ಯ. ಅದಕ್ಕಾಗಿ ಶ್ರಮಿಸುತ್ತಿರುವ ಮಾರ್ಕೆಟಿಂಗ ಪ್ರತಿನಿಧಿಗಳ ಕಾರ್ಯವನ್ನು ಶ್ಲಾಘಿಸಿದರು.
ಕಾಹೆರನ ಹೊಸ ಯೋಜನೆಗಳ ನಿರ್ದೇಶಕರಾದ ವಿ ಡಿ ಪಾಟೀಲ ಅವರು ಮಾತನಾಡಿ, ಆಸ್ಪತ್ರೆಯ ತುರ್ತು ವಿಭಾಗವೇ ಹೊರಗಿನ ಜನರಿಗೆ ಆಸ್ಪತ್ರೆಯ ಮೊದಲ ಮುಖ. ರೋಗಿಗಳು ಆಸ್ಪತ್ರೆಗೆ ಬಂದಾಗ ಮೊದಲ ಅನುಭವ ಇದೇ ವಿಭಾಗದಿಂದ ಬರುತ್ತದೆ. ಇತ್ತೀಚೆಗೆ ವೈದ್ಯರು ಮತ್ತು ಆಸ್ಪತ್ರೆಗಳ ಮೇಲೆ ಹಿಂಸಾಚಾರ ಹೆಚ್ಚುತ್ತಿದೆ. ಸರ್ಕಾರ ಹಲವು ಕಾನೂನುಗಳನ್ನು ತರಿದರೂ ಅವುಗಳ ಅನುಷ್ಠಾನ ಸಮರ್ಪಕವಾಗಿಲ್ಲ ಎಂದ ಅವರು ರೋಗಿಗಳು ಮತ್ತು ಅವರ ಬಂಧುಗಳು ಮಾನಸಿಕ ಒತ್ತಡದಲ್ಲಿರುತ್ತಾರೆ. ಅವರ ಮನಸ್ಥಿತಿಯನ್ನು ಸರಿಯಾಗಿ ನಿರ್ವಹಿಸುವ ಜವಾಬ್ದಾರಿ ವೈದ್ಯರ ಮೇಲಿದ್ದು, ಸಂವಹನ, ಪಾರದರ್ಶಕತೆ ಮತ್ತು ನಂಬಿಕೆ ಮೂಡಿಸುವುದು ಅತ್ಯಂತ ಮುಖ್ಯ ಎಂದು ತಿಳಿಸಿದರು.
ಆಸ್ಪತ್ರೆಯ ಕ್ಲಿನಿಕಲ್ ನಿರ್ದೇಶಕರಾದ ಡಾ. ಮಾಧವ ಪ್ರಭು ಅವರು ಮಾತನಾಡಿ, ಯಾರಿಗಾದರೂ ತುರ್ತು ಪರಿಸ್ಥಿತಿ ಬಂದರೆ “ಕೆಲವರು ಭಾವನಾತ್ಮಕವಾಗಿ ಪ್ರತಿಕ್ರಿಯಿಸುತ್ತಾರೆ, ಇನ್ನೂ ಕೆಲವರು ಅಹಂಕಾರದಿಂದ ವರ್ತಿಸುವದು ಕೂಡ ಹಿಂಸಾಚಾರಕ್ಕೆ ಕಾರಣ. ಅದನ್ನು ನಿರ್ವಹಿಸಲು ಮೃದು ಕೌಶಲ್ಯ ತರಬೇತಿ ನೀಡಿ ವೈದ್ಯರನ್ನು ರಕ್ಷಿಸುವ ಕಾರ್ಯ ಮಾಡಲಾಗುತ್ತದೆ. ರೋಗಿಗಳಿಗೆ ಉತ್ತಮ ಅನುಭವ ಮತ್ತು ಉತ್ತಮ ಚಿಕಿತ್ಸೆ ನೀಡುವ ಸುರಕ್ಷಿತ ವಾತಾವರಣ ನಿರ್ಮಿಸಬೇಕು ಎಂದು ಹೇಳಿದರು.
ಸಮಾರಂಭದಲ್ಲಿ ಎಮರ್ಜೆನ್ಸಿ ಮೆಡಿಸಿನ್ ವಿಭಾಗದ ಮುಖ್ಯಸ್ಥರಾದ ಡಾ. ಶೈಲೇಶ ಉದಪುಡಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಎಂ ವಿ ಜಾಲಿ, ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಉಪಪ್ರಾಚಾರ್ಯರಾದ ಡಾ. ಶಿವಾನಂದ ಬುಬನಾಳೆ, ಡಾ. ಆರ್ ಎಸ್ ಮುಧೋಳ, ಡಾ. ರವಿ ಜತ್ತಿ, ಡಾ. ರೇಖಾ ಪಾಟೀಲ, ಡಾ. ಜ್ಞಾನೇಶ ಕಾಂಬಳೆ, ಡಾ. ಬಸವರಾಜ ಬಿಜ್ಜರಗಿ, ಡಾ. ಮಹೇಶ ಹಟ್ಟಿ ಡಾ. ಸಚೀನ ವಾಲಿ, ಜನಸಂಪರ್ಕಾಧಿಕಾರಿ ಗಂಗಾಧರ( ವಿನೋದ) ದೇಶನೂರ, ಮಾರ್ಕೆಟಿಂಗ ವಿಭಾಗದ ನಿಖಿಲ ಸಾವಂತ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಡಾ. ಅಜಯ ಪವಾರ ವಂದಿಸಿದರು.



