
ಪ್ರಗತಿವಾಹಿನಿ ಸುದ್ದಿ: ಸ್ವಲ್ಪ ದಿನ ಶಾಂತವಾಗಿದ್ದ ಭೀಮಾತೀರದಲ್ಲಿ ಮತ್ತೆ ಗುಂಡಿನ ಸದ್ದು ಕೇಳಿಸಿದೆ, ಆಸ್ತಿ ವಿವಾದ ಹಿನ್ನೆಲೆ 6 ಜನರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹಾಗೂ ಗುಂಡಿಕ್ಕಿ ಭೀಕರ ಹತ್ಯೆ ಮಾಡಲಾಗಿದೆ.
ವಿಜಯಪುರ ಜಿಲ್ಲೆ ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ಅಮಾನುಷ ಕೃತ್ಯ ನಡೆದಿದೆ. ಕುಟುಂಬಗಳ ನಡುವಿನ ಕಲಹ ವಿಕೋಪಕ್ಕೆ ಹೋದ ಪರಿಣಾಮ ರೇವಣಸಿದ್ದಪ್ಪ ನಿರಾಳೆ, ದುಂಡಪ್ಪ ರೇವಣಸಿದ್ದಪ್ಪ ನಿರಾಳೆ, ಶಿವಪುತ್ರ ರೇವಣಸಿದ್ದಪ್ಪ ನಿರಾಳೆ, ಚಂದ್ರಶೇಖರ್ ನಿರಾಳೆ ಹಾಗೂ ಶಬ್ಬೀರ್ ನದಾಫ್ ಸೇರಿದಂತೆ 6 ಜನರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬಳಿಕ ಗುಂಡಿಟ್ಟು ಹತ್ಯೆ ಮಾಡಲಾಗಿದೆ.
ಜಮಿನು ವಿಚಾರವಾಗಿ ಅಪ್ಪುಗೌಡ ಪಾಟೀಲ್ ಹಾಗೂ ರೇವಣಸಿದ್ದಪ್ಪ ನಿರಾಳೆ ಕುಟುಂಬದ ಮಧ್ಯೆ ಜಗಳವಿತ್ತು. ಕಳೆದ ಕೆಲ ದಿನಗಳ ಹಿಂದೆ ಎರಡೂ ಕುಟುಂಬಗಳ ಮಧ್ಯೆ ಈ ಸಂಬಂಧ ನ್ಯಾಯ ಪಂಚಾಯತಿ ಕೂಡ ಆಗಿತ್ತು.
ಇಂದು ಅದೇ ಜಮೀನಿನ ವಿಚಾರದಲ್ಲಿ ನ್ಯಾಯ ಪಂಚಾಯತಿಗೆಂದು ನಿರಾಳೆ ಕುಟುಂಬ ಮತ್ತು ಇತರರು ತೆರಳಿದ್ದರು. ಈ ವೇಳೆ ನಿರಾಳೆ ಕುಟುಂಬದವರ ಮೇಲೆ ದಾಳಿ ನಡೆಸಲಾಗಿದೆ.
ಚಡಚಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದಿದೆ. ಭೀಕರ ಕೊಲೆ ಕಂಡು ಸ್ಥಳೀಯರು ಬೆಚ್ಚಿ ಬಿದ್ದಿದ್ದು, ಅಮಾನುಷ ಕೃತ್ಯ ಭಾರಿ ಚರ್ಚೆಗೂ ಗ್ರಾಸವಾಗಿದೆ.
ಇನ್ನೂ ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಳ ಪತ್ತೆ ಹಾಗೂ ಬಂಧನಕ್ಕೆ ವಿಶೇಷ ತಂಡಗಳನ್ನು ರಚಿಸಲಾಗಿದೆ. ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಹತ್ಯೆಯ ನಿಖರ ಕಾರಣ ಹಾಗೂ ಘಟನೆಯ ಸಂಪೂರ್ಣ ವಿವರಗಳು ಪೊಲೀಸ್ ತನಿಖೆಯ ಬಳಿಕವೇ ತಿಳಿದುಬರಬೇಕಿದೆ.




