*ವಿಧಾನ ಪರಿಷತ್ ಮಾಜಿ ಸದಸ್ಯನ ಅಪಹರಣ: 3 ಕೋಟಿಗೆ ಡಿಮ್ಯಾಂಡ್*

ಪ್ರಗತಿವಾಹಿನಿ ಸುದ್ದಿ:ವಿಧಾನ ಪರಿಷತ್ ಮಾಜಿ ಸದಸ್ಯ ದಯಾನಂದ ರೆಡ್ಡಿ ಅವರನ್ನು ಅಪಹರಿಸಿ 3 ಕೋಟಿ ಹಣಕ್ಕೆ ಬೇಡಿಕೆ ಇಟ್ಟು, 2 ಕೋಟಿಗೆ ಡೀಲ್ ಮಾಡಿಕೊಂಡಿರುವ ದುಷ್ಕರ್ಮಿಗಳು ಅವರನ್ನು ಬಿಟ್ಟು ಕಳುಹಿಸಿರುವ ಘಟನೆ ತಡರಾತ್ರಿ ಬೆಂಗಳೂರಿನ ಆನೇಕಲ್ ಬಳಿ ನಡೆದಿದೆ.
ತಡರಾತ್ರಿ 12:15ರ ಸುಮಾರಿಗೆ ಗೋಲ್ಡ್ ಕಾಯಿನ್ ಕ್ಲಬ್ನಿಂದ ಹೊರಟಿದ್ದ ಮಾಜಿ ಎಂಎಲ್ಸಿ ದಯಾನಂದರೆಡ್ಡಿ ಅವರ ಕಾರನ್ನು ಹಿಲಲಿಗೆ ಗ್ರಾಮದ ಸಮೀಪ ಬೈಕ್ನಲ್ಲಿ ಬಂದ ಇಬ್ಬರು ಅಡ್ಡಗಟ್ಟಿದ್ದಾರೆ. ನಿಮಗೆ ಗಿಫ್ಟ್ ಬಂದಿದೆ ಎಂದು ಹೇಳಿ ಕಾಟನ್ ಬಾಕ್ಸ್ ತೋರಿಸಿದ್ದಾರೆ.
ಕಾರಿನ ಡೋರ್ ಲಾಕ್ ತೆರೆದ ತಕ್ಷಣ ಓರ್ವ ವ್ಯಕ್ತಿ ಕಾರಿನೊಳಗೆ ನುಗ್ಗಿದ್ದಾನೆ. ಬಳಿಕ ಗನ್ ತೋರಿಸಿ ತಾನು ಹೇಳಿದ ಕಡೆಗೆ ಕಾರು ಚಲಾಯಿಸುವಂತೆ ಸೂಚಿಸಿದ್ದಾನೆ. ಈ ವೇಳೆ ಕೆಂಪು ಬಣ್ಣದ ಕಾರಿನಲ್ಲಿ ಮತ್ತಿಬ್ಬರು ಹಿಂಬಾಲಿಸಿದ್ದಾರೆ. ಬಳಿಕ ಅತ್ತಿಬೆಲೆ ಕೆಹೆಚ್ಬಿ ಬಡಾವಣೆ ಸಮೀಪ ಕರೆದೊಯ್ದು ಬೆದರಿಕೆ ಹಾಕಲಾಗಿದೆ. ನಿನ್ನನ್ನು ಕೊಲ್ಲಲು 10 ಕೋಟಿ ರೂ. ಸುಪಾರಿ ನೀಡಿದ್ದಾರೆ ಎಂದು ಹೇಳಿ ಕುತ್ತಿಗೆಗೆ ಗನ್ ಇಟ್ಟು ಜೀವ ಬೆದರಿಕೆ ಹಾಕಿದ್ದಾರೆ.
ಈ ವೇಳೆ ಹಣ ನಾನೇ ಕೊಡುತ್ತೇನೆ, ಕೊಲ್ಲಬೇಡಿ ಎಂದು ದಯಾನಂದ ರೆಡ್ಡಿ ಮನವಿ ಮಾಡಿಕೊಂಡಿದ್ದಾರೆ. ಮೊದಲು 3 ಕೋಟಿ ರೂ. ಬೇಡಿಕೆ ಇಟ್ಟಿದ್ದ ಅಪಹರಣಕಾರರು, ಬಳಿಕ 2 ಕೋಟಿ ರೂ.ಗೆ ಒಪ್ಪಿಕೊಂಡಿದ್ದಾರೆ. ಸದ್ಯ ಹಣ ಇಲ್ಲ, ಬೆಳಗ್ಗೆ ಬ್ಯಾಂಕ್ ತೆರೆದ ಬಳಿಕ ಹಣ ನೀಡುವುದಾಗಿ ದಯಾನಂದರೆಡ್ಡಿ ಮನವಿ ಮಾಡಿದ್ದಾರೆ. ಹಣ ಡ್ರಾ ಮಾಡಿದ ಬಳಿಕ ಕರೆ ಮಾಡುವಂತೆ ಸೂಚಿಸಿ ಆರೋಪಿಗಳು ಅವರನ್ನು ಬಿಟ್ಟು ಕಳುಹಿಸಿದ್ದಾರೆ.
ಈ ಸಂಬಂಧ ವಿಧಾನ ಪರಿಷತ್ ಮಾಜಿ ಸದಸ್ಯ ದಯಾನಂದರೆಡ್ಡಿ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಶೋಧ ಕಾರ್ಯ ನಡೆಸುತ್ತಿದ್ದಾರೆ.

