*ಭ್ರಷ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ: ವಿವಿಧ ಜಿಲ್ಲೆಗಳಲ್ಲಿ ಏಕಕಾಲಕ್ಕೆ ದಾಳಿ*

ಪ್ರಗತಿವಾಹಿನಿ ಸುದ್ದಿ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ಬೆಂಗಳೂರು, ದಾವಣಗೆರೆ, ಕಲಬುರಗಿ, ಚಿಕ್ಕಮಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.
ಬೆಂಗಳೂರು:
ಬೆಂಗಳೂರಿನ ಎರಡು ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಕರ್ನಾಟಕ ಹೌಸಿಂಗ್ ಬೋರ್ಡ್ ಅಡಿಷನಲ್ ಡೈರೆಕ್ಟರ್ ರಾಜಣ್ಣ ಮತ್ತು ಬೆಸ್ಕಾಂ ಯಲಹಂಕ ವಲಯದ ಎಇಇ ಉದಯ್ ಕುಮಾರ್ ನಿವಾಸಗಳ ಮೇಲೆ ರೇಡ್ ಮಾಡಿದ್ದಾರೆ. ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಹಿನ್ನೆಲೆಯಲ್ಲಿ ಈ ದಾಳಿ ನಡೆದಿರುವ ಮಾಹಿತಿ ಇದೆ.
ಕಲಬುರಗಿ:
ಕಲಬುರಗಿಯಲ್ಲಿ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ಪಂಚಾಯತ್ರಾಜ್ ನಿವೃತ್ತ ಸೂಪರಿಡೆಂಟ್ ಇಂಜಿನಿಯರ್ ಎಸ್.ಇ.ಮಾಣಿಕ್ ಕನಕಟ್ಟಿ ನಿವಾಸದ ಮೇಲೆ ರೇಡ್ ನಡೆದಿದೆ. ಗೋದುತಾಯಿ ನಗರದ ಮನೆ ಸೇರಿ ಐದು ಕಡೆ ದಾಳಿ ನಡೆಸಲಾಗಿದೆ. ಬೀದರ್ ಜಿಲ್ಲೆಯ ಹಳ್ಳಿಖೇಡ ಗ್ರಾಮದ ನಿವಾಸ, ತೋಟದ ಮನೆ, ಹುಮ್ನಾಬಾದ್ನ ಎರಡು ಕಾಂಪ್ಲೆಕ್ಸ್ ಮೇಲೆ ಲೋಕಾಯುಕ್ತ ಎಸ್ಪಿ ಸಿದ್ದರಾಜು ನೇತೃತ್ವದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ.
ದಾವಣಗೆರೆ:
ದಾವಣಗೆರೆಯ ಹಲವೆಡೆಯೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮೂವರು ಅಧಿಕಾರಿಗಳ ಮನೆ, ಕಚೇರಿಗಳು ಸೇರಿ 12 ಕಡೆ ದಾವಣಗೆರೆ ಲೋಕಾಯುಕ್ತ ಎಸ್ಪಿ ಎಂ.ಎಸ್.ಕೌಲಾಪುರೆ ನೇತೃತ್ವದಲ್ಲಿ ರೇಡ್ ನಡೆದಿದೆ.
ಹುಬ್ಬಳ್ಳಿಯ KSRTC(ವಾಯವ್ಯ) ಚೀಫ್ ಮೆಕ್ಯಾನಿಕ್ ಸಿದ್ದೇಶ್ವರ ಅವರ ಆಂಜನೇಯ ಬಡಾವಣೆಯ ಮನೆ, ಹುಬ್ಬಳ್ಳಿ ಕಚೇರಿ ಸೇರಿದಂತೆ ನಾಲ್ಕು ಕಡೆ ದಾಳಿ ನಡೆದಿದೆ. ದಾಳಿ ವೇಳೆ ಸಿದ್ದೇಶ್ವರ ಮನೆಯಲ್ಲಿ 40 ಲಕ್ಷ ರೂ. ಪತ್ತೆಯಾದ ಮಾಹಿತಿ ಇದೆ. ಚಿತ್ರದುರ್ಗ ಬಯಲು ಸೀಮೆ ಪ್ರಾಧಿಕಾರದ ಕಾರ್ಯದರ್ಶಿ ಕೃಷ್ಣ ನಾಯ್ಕ್ ಅವರ ಸಿದ್ದವೀರಪ್ಪ ಬಡಾವಣೆಯ ಕೃಷ್ಣನಾಯ್ಕ್ ಮನೆ, ಕಚೇರಿ ಸೇರಿದಂತೆ ಐದು ಕಡೆ ದಾಳಿ ನಡೆದಿದ್ದು, ಬೆಳಗಾವಿ KRIDL ಅಧೀಕ್ಷಕ ಇಂಜಿನಿಯರ್ ಸಣ್ಣ ಕೆಂಚಪ್ಪಗೆ ಸೇರಿದ ಮನೆ ಸೇರಿದಂತೆ ಐದು ಕಡೆಯೂ ದಾಳಿ ನಡೆದಿದೆ.
ಚಿಕ್ಕಮಗಳೂರು:
ಚಿಕ್ಕಮಗಳೂರು ACF ಮೋಹನ್ಗೆ ಸೇರಿದ ಮನೆ, ಕಚೇರಿ, ನಿರ್ಮಾಣ ಹಂತದ ಮನೆ ಸೇರಿದಂತೆ 5 ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನಗರದ ಕಲ್ಯಾಣನಗರದ ನಿವಾಸದಲ್ಲಿ ದಾಖಲೆ ಪರಿಶೀಲನೆ ನಡೆಸಲಾಗಿದ್ದು, ACF ಮೋಹನ್ ವಿರುದ್ಧ ದೂರುಗಳು ಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ಡಿವೈಎಸ್ ಪಿ ತಿರುಮಲೇಶ್ ನೇತೃತ್ವದಲ್ಲಿ ದಾಳಿ ನಡೆದಿದೆ.


