*ಕಾಳಿ ಹುಲಿ ಸಂರಕ್ಷಿತಾರಣ್ಯದಲ್ಲಿ ವನ್ಯಜೀವಿ ಬೇಟೆ: ಗೋವಾ ಸರ್ಕಾರದ ಸಾರಿಗೆ ಸಂಸ್ಥೆಯ ಉದ್ಯೋಗಿ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಕಾಳಿ ಹುಲಿ ಸಂರಕ್ಷಿತಾರಣ್ಯದಲ್ಲಿ ಅಕ್ರಮವಾಗಿ ವನ್ಯಜೀವಿ ಬೇಟೆಯಾಡುತ್ತಿದ್ದ ಗೋವಾ ಸರ್ಕಾರದ ಸಾರಿಗೆ ಸಂಸ್ಥೆಯ ಉದ್ಯೋಗಿಯೊಬ್ಬನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿರುವ ಘಟನೆ ನಡೆದಿದೆ.
ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ ಕಾಳಿ ಹುಲಿ ಸಂರಕ್ಷಿತಾರಣ್ಯದಲ್ಲಿ ಬೇಟೆಯಾಡುತ್ತಿದ್ದ ವೇಳೆ ಬಂಧಿಸಲಾಗಿದೆ. ಬಂಧಿತ ಆರೋಪಿಯನ್ನು ಗೋವಾ ಸರ್ಕಾರಿ ಸ್ವಾಮ್ಯದ ಕದಂಬ ಸಾರಿಗೆ ಸಂಸ್ಥೆಯಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿರುವ ಜಯೇಂದ್ರ ದಿಗಂಬರ್ ಗಾವ್ಡೆ (45) ಎಂದು ಗುರುತಿಸಲಾಗಿದೆ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯ ಸಿಬ್ಬಂದಿ ಈತನನ್ನು ಬಂಧಿಸಿದ್ದಾರೆ. ಇದೇ ವೇಳೆ ಕುಂಬಾರವಾಡ ವಲಯದ ಅರಣ್ಯ ಸಿಬ್ಬಂದಿ, ಬೇಟೆಗೆ ಬಳಸಲಾದ ಬಂದೂಕಿನ ಮಾಲೀಕ ಎನ್ನಲಾದ ಸುಭಾಷ್ ಮಿರಾಶಿ, ಗೋವಾದ ಮೂವರು ಸೇರಿದಂತೆ ನಾಲ್ವರು ಆರೋಪಿಗಳು ಸದ್ಯ ತಲೆಮರೆಸಿಕೊಂಡಿದ್ದು, ಅರಣ್ಯ ಸಿಬ್ಬಂದಿ ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ.
ದಾಳಿಯ ವೇಳೆ ಅಧಿಕಾರಿಗಳು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಶೆಡ್ಯೂಲ್-II ರ ಅಡಿಯಲ್ಲಿ ಸಂರಕ್ಷಿತ ಪ್ರಭೇದವಾಗಿರುವ ಮರಬೆಕ್ಕಿನ (Palm Civet) ಕಳೇಬರವನ್ನು ವಶಪಡಿಸಿಕೊಂಡಿದ್ದಾರೆ. ಇದನ್ನು ಬಂದೂಕಿನಿಂದ ಶೂಟ್ ಮಾಡಿ ಕೊಲ್ಲಲಾಗಿತ್ತು. ಇದರೊಂದಿಗೆ ಉಡ ಹಾಗೂ ಕಸ್ತೂರಿ ಜಿಂಕೆ ಎಂದು ಶಂಕಿಸಲಾದ ಮತ್ತೊಂದು ಪ್ರಾಣಿಯ ಮಾಂಸವನ್ನು ವಶಕ್ಕೆ ಪಡೆಯಲಾಗಿದ್ದು, ನಿಖರ ಮಾಹಿತಿ ಪತ್ತೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಬೇಟೆಗೆ ಬಳಸಿದ್ದ ಬಂದೂಕನ್ನು ಸಹ ಜಪ್ತಿ ಮಾಡಲಾಗಿದೆ.



