Film & EntertainmentKarnataka NewsLatest

*‘ಬಾಸ್’ ಚಿತ್ರಕ್ಕೆ ಮತ್ತೆ ಸಂಕಷ್ಟ; ಬಿಡುಗಡೆ ತಡೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ ದರ್ಶನ್*

ಪ್ರಗತಿವಾಹಿನಿ ಸುದ್ದಿ: ಜೂನ್ 19ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿರುವ ಬಹುಚರ್ಚಿತ ‘ಬಾಸ್’ ಚಲನಚಿತ್ರಕ್ಕೆ ಮತ್ತೆ ಕಾನೂನು ಸಂಕಷ್ಟ ಎದುರಾಗಿದೆ. ನಟ ದರ್ಶನ್ , ಹಾಗೂ ವಿಜಯಲಕ್ಷ್ಮೀ ದರ್ಶನ್ ಅವರು ಚಿತ್ರದ ಬಿಡುಗಡೆಗೆ ತಡೆ ನೀಡುವಂತೆ ಕೋರಿ ಕರ್ನಾಟಕ ಹೈಕೋರ್ಟ್‌ನಲ್ಲಿ MFA No. 4257/2026 ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರೆ.

ನಗರ ಸಿವಿಲ್ ನ್ಯಾಯಾಲಯವು ಈ ಹಿಂದೆ ಚಿತ್ರದ ಬಿಡುಗಡೆಗೆ ವಿಧಿಸಿದ್ದ ಮಧ್ಯಂತರ ತಡೆಯಾಜ್ಞೆಯನ್ನು ತೆರವುಗೊಳಿಸಿ ಬಿಡುಗಡೆಗೆ ಅವಕಾಶ ನೀಡಿತ್ತು. ಅದರ ಬೆನ್ನಲ್ಲೇ ಚಿತ್ರತಂಡವು ಜೂನ್ 19ರಂದು ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡುವುದಾಗಿ ಘೋಷಿಸಿತ್ತು.

ಆದರೆ ಸಿವಿಲ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿರುವ ಅರ್ಜಿದಾರರು, ಚಿತ್ರದ ಬಿಡುಗಡೆಗೆ ತಕ್ಷಣದ ಮಧ್ಯಂತರ ತಡೆಯಾಜ್ಞೆ ನೀಡುವಂತೆ ಮನವಿ ಮಾಡಿದ್ದಾರೆ. ಚಿತ್ರದ ಕಥಾವಸ್ತು, ಪಾತ್ರಗಳ ನಿರೂಪಣೆ ಹಾಗೂ ಇತರ ವಿವಾದಿತ ಅಂಶಗಳಿಗೆ ಸಂಬಂಧಿಸಿದಂತೆ ಗಂಭೀರ ಆಕ್ಷೇಪಣೆಗಳನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.

Home add -Advt

ಚಿತ್ರ ಬಿಡುಗಡೆಯ ದಿನಾಂಕ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಕರಣವು ಮಹತ್ವ ಪಡೆದುಕೊಂಡಿದ್ದು, ಹೈಕೋರ್ಟ್‌ನ ತೀರ್ಪಿನತ್ತ ಚಿತ್ರರಂಗ ಹಾಗೂ ಅಭಿಮಾನಿಗಳ ಚಿತ್ತ ನೆಟ್ಟಿದೆ. ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ನೀಡುತ್ತದೆಯೇ ಅಥವಾ ಚಿತ್ರದ ಬಿಡುಗಡೆಗೆ ಹಸಿರು ನಿಶಾನೆ ತೋರಿಸುತ್ತದೆಯೇ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಜೂನ್ 19ರಂದು ಬಿಡುಗಡೆಯಾಗಬೇಕಿರುವ ‘ಬಾಸ್’ ಚಿತ್ರದ ಭವಿಷ್ಯ ಇದೀಗ ಹೈಕೋರ್ಟ್‌ನ ನಿರ್ಧಾರದ ಮೇಲೆ ಅವಲಂಬಿತವಾಗಿದೆ.

Related Articles

Back to top button