Belagavi NewsBelgaum NewsKannada NewsKarnataka NewsPolitics

*ನಿಪ್ಪಾಣಿಯಲ್ಲಿ ಮನೆಗಳ ಹಂಚಿಕೆ ಪಾರದರ್ಶಕವಾಗಿ ನಡೆಯಲಿದೆ: ಶಾಸಕಿ ಶಶಿಕಲಾ ಜೊಲ್ಲೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಬಡ, ನಿರಾಶ್ರಿತ ಮತ್ತು ಅಗತ್ಯವಿರುವ ನಾಗರಿಕರಿಗೆ ಸ್ವಂತ ಮನೆ ಒದಗಿಸಲು ನಾವು ಬದ್ಧರಾಗಿದ್ದು, ಯಾವುದೇ ಅರ್ಹ ಫಲಾನುಭವಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ‘ಪ್ರತಿಯೊಬ್ಬರಿಗೂ ಮನೆ’ ಎಂಬ ಕನಸನ್ನು ನನಸು ಮಾಡಲು ನಿಪ್ಪಾಣಿ ಕ್ಷೇತ್ರದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ ಎಂದು ನಿಪ್ಪಾಣಿ ಕ್ಷೇತ್ರದ ಶಾಸಕಿ ಶಶಿಕಲಾ ಜೊಲ್ಲೆ ಅವರು ತಿಳಿಸಿದರು.

ನಿಪ್ಪಾಣಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ನಿಪ್ಪಾಣಿ ನಗರಸಭೆ ಮತ್ತು ಕಂದಾಯ ಇಲಾಖೆ ವತಿಯಿಂದ ಅರ್ಜಿದಾರರ ಪರಿಶೀಲನೆ ಪ್ರಕ್ರಿಯೆ ಪೂರ್ಣಗೊಂಡಿದ್ದು, 1021 ಅರ್ಹ ಫಲಾನುಭವಿಗಳ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಈ ಎಲ್ಲಾ ಫಲಾನುಭವಿಗಳಿಗೆ ಶೀಘ್ರದಲ್ಲೇ ಲಾಟರಿ ಪದ್ಧತಿಯ ಮೂಲಕ ಮನೆಗಳನ್ನು ವಿತರಿಸಲಾಗುವುದು ಎಂದು ಹೇಳಿದರು.

Home add -Advt

ಮನೆಗಳ ಹಂಚಿಕೆಯನ್ನು ಸಂಪೂರ್ಣ ಪಾರದರ್ಶಕವಾಗಿ ಮಾಡಲಾಗುವುದು. ಸರ್ಕಾರದ ನಿಯಮಾವಳಿಗಳ ಪ್ರಕಾರ ವೃದ್ಧರು ಮತ್ತು ದಿವ್ಯಾಂಗ ಫಲಾನುಭವಿಗಳಿಗೆ ನೆಲಮಹಡಿಯ ಮನೆಗಳನ್ನು ಆದ್ಯತೆಯ ಮೇರೆಗೆ ನೀಡಲಾಗುವುದು. ಸಂಬಂಧಪಟ್ಟ ಫಲಾನುಭವಿಗಳು ಅಗತ್ಯ ದಾಖಲೆಗಳನ್ನು ಸಮಯಕ್ಕೆ ಸರಿಯಾಗಿ ಸಲ್ಲಿಸಬೇಕು. ಇದಲ್ಲದೆ, ಇನ್ನೂ ಸುಮಾರು 200 ಮನೆಗಳು ಲಭ್ಯವಿದ್ದು, ಮನೆ ಪಡೆಯಲು ಇಚ್ಚಿಸುವ ನಾಗರಿಕರು ಅರ್ಜಿ ಸಲ್ಲಿಸಿ ಅಗತ್ಯ ಶುಲ್ಕವನ್ನು ಪಾವತಿಸಬೇಕು ಎಂದರು.

ವಿರೋಧ ಪಕ್ಷದವರು ನಿಪ್ಪಾಣಿಯ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಬಾರದು. ನಿಪ್ಪಾಣಿಯ ಜನತೆಗೆ ನಮ್ಮ ಮೇಲೆ ನಂಬಿಕೆಯಿದೆ ಮತ್ತು ಮುಂಬರುವ ದಿನಗಳಲ್ಲಿ ಸಾರ್ವಜನಿಕರೇ ವಿರೋಧ ಪಕ್ಷದವರಿಗೆ ಸೂಕ್ತ ಉತ್ತರ ನೀಡಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು, ತಾಯಿ-ಸಹೋದರಿಯರು ಸೇರಿದಂತೆ ಎಲ್ಲಾ ಅರ್ಹ ಕುಟುಂಬಗಳಿಗೆ ಅವರ ಹಕ್ಕಿನ ಮನೆಗಳನ್ನು ಒದಗಿಸಿಕೊಡಲು ತಾವು ವಚನಬದ್ಧರಾಗಿರುವುದಾಗಿ ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಸುರೇಶ್ ಮುಂಜೆ, ಬಿಜೆಪಿ ನಗರಾಧ್ಯಕ್ಷ ರಾಜು ಗುಂದೇಶಾ, ಮಾಜಿ ನಗರಾಧ್ಯಕ್ಷ ಜಯವಂತ ಭಾಟ್ಲಿ, ಹಾಲ್ ಶುಗರ್ಸ್‌ ಉಪಾಧ್ಯಕ್ಷೆ ಸುನಿತಾ ಪಾಟೀಲ್, ಮಾಜಿ ನಗರಸಭೆ ಸದಸ್ಯರಾದ ಸಂತೋಷ್ ಸಾಂಗಾತ್ಕರ್, ಸುನಿಲ್ ಪಾಟೀಲ್‌, ಬಂಡಾ ಘೋರ್ಪಡೆ, ದತ್ತಾತ್ರೇಯ ಜೋತ್ರೆ, ಸಾಗರ ಮಿರ್ಜೆ, ವಿಜಯ್ ತವಳೆ ಸೇರಿದಂತೆ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.

Related Articles

Back to top button