Kannada NewsKarnataka NewsLatest

*ಆತ್ಮಹತ್ಯೆ ಪತ್ರ ಬರೆದಿಟ್ಟು ಕೆಆರ್​ಐಡಿಎಲ್ ಎಇಇ ನಾಪತ್ತೆ*

ಪ್ರಗತಿವಾಹಿನಿ ಸುದ್ದಿ: ಸರ್ಕಾರಿ ಅನುದಾನ ಬರದೇ ಗುತ್ತುಗೆದಾರರ ಕಿರುಕುಳಕ್ಕೆ ಬೇಸತ್ತ ಕೆಆರ್‌ಐಡಿಎಲ್ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರೊಬ್ಬರು ಆತ್ಮಹತ್ಯೆ ಪತ್ರ ಬರೆದಿಟ್ಟು ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ಫರ್ವೀಜ್ ಧಾರವಾಡ ನಾಪತ್ತೆಯಾಗಿರುವ ಎಇಇ. ಅನುದಾನದ ವಿಚಾರ ಚರ್ಚಿಸಲು ಬೆಂಗಳೂರಿಗೆ ಹೋಗುತ್ತೇನೆ ಎಂದು ಹೇಳಿ ಹೋದವರು ಈವರೆಗೂ ಮನೆಗೆ ವಾಪಸ್ ಆಗಿಲ್ಲ. ಅವರ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿದೆ. ಇದರಿಂದ ಕಂಗಾಲಾದ ಕುಟುಂಬ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಫರ್ವೇಜ್ ನನ್ನು ಹುಡುಕಿಕೊಡುವಂತೆ ಮನವಿ ಮಾಡಿದ್ದಾರೆ.

ಪತ್ರದಲ್ಲಿ ದೂರಿನಲ್ಲಿ ಸೆಪ್ಟೆಂಬರ್ 12ರಂದು ಬೆಂಗಳೂರಿನ ಕೆಆರ್​ಐಡಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿರುವ ಫರ್ವೀಜ್, ಕೋಟಿಗಟ್ಟಲೆ ಅನುದಾನ ಬಾರದ ಕಾರಣ ನಿತ್ಯ ಸಬ್ ಗುತ್ತಿಗೆದಾರರು ಮನೆ ಮುಂದೆ ಬಂದು ಕೂಗಾಟ ನಡೆಸುತ್ತಿದ್ದಾರೆ. ಫೋನ್ ಮಾಡಿ ಕಿರುಕುಳ ನೀಡುತ್ತಿದ್ದಾರೆ. ಇದರಿಂದ ನನ್ನ ಮಾನಸಿಕ ಆರೋಗ್ಯ ಸಂಪೂರ್ಣ ಹದಗೆಟ್ಟಿದೆ. ಪರಿಸ್ಥಿತಿ ನಿಭಾಯಿಸಲು ಸಾಧ್ಯವಾಗದೆ ಜೀವನ ಕೊನೆಗಾಣಿಸುತ್ತಿದ್ದೇನೆ. ನನ್ನ ಸಾವಿಗೆ ನಾನೇ ಕಾರಣ. ಉಪವಿಭಾಗಕ್ಕೆ ಅನುದಾನ ನೀಡಿ ಸಮಸ್ಯೆ ಬಗೆಹರಿಸಿ, ದಯವಿಟ್ಟು ನನ್ನ ಕುಟುಂಬಕ್ಕೆ ಕಿರುಕುಳ ನೀಡಬೇಡಿ ಎಂದು ಉಲ್ಲೇಖಿಸಿದ್ದಾರೆ.

ಸೆಪ್ಟೆಂಬರ್ 13ರಂದು ಬೆಂಗಳೂರಿನಲ್ಲಿ ಸಭೆ ಇದೆ ಎಂದು ಹೊರಟಿದ್ದ ಫರ್ವೀಜ್, ಪತ್ನಿ ಸೆಗುಪ್ತಾರಿಗೆ ಕರೆ ಮಾಡಿ ಬೆಂಗಳೂರು ತಲುಪಿರುವುದಾಗಿ ಹೇಳಿದ್ದರು. ನಂತರ ಗಂಡನ ಫೋನ್ ಸ್ವಿಚ್ ಆಫ್ ಆಗಿದ್ದರಿಂದ ಗಾಬರಿಗೊಳಗಾದ ಪತ್ನಿ, ಅತ್ತೆ ಮಾವನಿಗೆ ವಿಷಯ ತಿಳಿಸಿದ್ದರು. ಮಗನ ಕುರಿತು ವಿಚಾರಿಸಲು ಇಲಾಖೆಯ ಎಕ್ಸಿಕ್ಯೂಟಿವ್ ಇಂಜಿನಿಯರ್​ಗೆ ಕರೆ ಮಾಡಿದಾಗ, ಫರ್ವೀಜ್ ಆಫೀಸಿಗೆ ಬಂದಿಲ್ಲವೆಂಬುದು ಗೊತ್ತಾಗಿದೆ.

ಆತಂಕಕ್ಕೊಳಗಾದ ಕುಟುಂಬಸ್ಥರು, ಗದಗ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ಸೆಪ್ಟೆಂಬರ್ 16ರಂದು ಪ್ರಕರಣ ದಾಖಲಿಸಿದ್ದಾರೆ. ವಿಶೇಷ ಪಡೆ ರಚಿಸಿ ನಾಪತ್ತೆಯಾಗಿರುವ ಅಧಿಕಾರಿಯನ್ನು ಶೀಘ್ರವೇ ಪತ್ತೆ ಹಚ್ಚುವಂತೆ ಒತ್ತಾಯಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button