*ಸಿದ್ದಸಿರಿ ಬ್ಯಾಂಕ್‌ನಲ್ಲಿ ₹1.41 ಕೋಟಿ ಅವ್ಯವಹಾರ ಆರೋಪ*: *ಮಾಜಿ ಅಧಿಕಾರಿ ವಿರುದ್ಧ FIR*

ಪ್ರಗತಿವಾಹಿನಿ ಸುದ್ದಿ: ಶಾಸಕ ಬಸನಗೌಡ ಪಾಟೀಲ ಯತ್ನಾಳ ಒಡೆತನದ ಸಿದ್ದಸಿರಿ ಮಲ್ಟಿ ಸ್ಟೇಟ್ ಮಲ್ಟಿ ಪರ್ಪಸ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ₹1.41 ಕೋಟಿ ಭದ್ರತಾ ಠೇವಣಿ ಹಣದ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಮಾಜಿ ಜಂಟಿ ವ್ಯವಸ್ಥಾಪಕ ನಿರ್ದೇಶಕ ರಾಘವೇಂದ್ರ ಭೀಮಸೇನರಾವ ಅಣ್ಣಿಗೇರಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ವಿಜಯಪುರದ ಗಾಂಧಿ ಚೌಕ್ ಪೊಲೀಸ್ ಠಾಣೆಯಲ್ಲಿ ಸೆ.23ರಂದು ಸೊಸೈಟಿಯ ಹಾಲಿ ಕಾರ್ಯನಿರ್ವಾಹಕ ಅಧಿಕಾರಿ ಜ್ಯೋತಿಬಾ ಮಾರುತಿ ಖಂಡಾಗಳೆ ದೂರು ನೀಡಿದ್ದಾರೆ.
2019ರಿಂದ 2025ರ ಅವಧಿಯಲ್ಲಿ ಸೊಸೈಟಿಗೆ ನೇಮಕಗೊಂಡ 28 ಸಿಬ್ಬಂದಿಯಿಂದ ಭದ್ರತಾ ಠೇವಣಿ ಹೆಸರಿನಲ್ಲಿ ಹಣ ಪಡೆದು, ಅದನ್ನು ಸಂಸ್ಥೆಗೆ ಜಮಾ ಮಾಡದೆ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸೊಸೈಟಿಯ ಆಂತರಿಕ ನಿಯಮದಂತೆ ಹೊಸದಾಗಿ ನೇಮಕಗೊಳ್ಳುವ ಸಿಬ್ಬಂದಿಯಿಂದ ಭದ್ರತಾ ಠೇವಣಿ ಪಡೆಯಲಾಗುತ್ತಿತ್ತು. ಹುದ್ದೆ ಮತ್ತು ನೇಮಕಾತಿಯ ಅವಧಿಗೆ ಅನುಗುಣವಾಗಿ ಈ ಮೊತ್ತ ಬದಲಾಗುತ್ತಿತ್ತು. 2018-19ರಲ್ಲಿ ಹಿರಿಯ ಅಧಿಕಾರಿಗಳಿಗೆ ₹7 ಲಕ್ಷ, ಕಿರಿಯ ಅಧಿಕಾರಿಗಳಿಗೆ ₹5 ಲಕ್ಷ ಹಾಗೂ ಜವಾನರಿಗೆ ₹3 ಲಕ್ಷ ನಿಗದಿಯಾಗಿತ್ತು. ನಂತರದ ವರ್ಷಗಳಲ್ಲಿ ಈ ಮೊತ್ತದಲ್ಲಿ ಬದಲಾವಣೆ ಮಾಡಲಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ
ರಾಘವೇಂದ್ರ ಅಣ್ಣಿಗೇರಿ 2006ರಲ್ಲಿ ಸೊಸೈಟಿಯಲ್ಲಿ ನೌಕರರಾಗಿ ಸೇರಿದ್ದು, ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ ಬಳಿಕ 2018ರ ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಜಂಟಿ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕಗೊಂಡಿದ್ದರು. ಕೇಂದ್ರ ಕಚೇರಿಯಲ್ಲಿ ಅಧಿಕಾರದಲ್ಲಿದ್ದ ಅವಧಿಯಲ್ಲಿ ಸಿಬ್ಬಂದಿ ನೇಮಕಾತಿಯ ಜವಾಬ್ದಾರಿ ಅವರ ವ್ಯಾಪ್ತಿಯಲ್ಲಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸೊಸೈಟಿಯ ಪ್ರಾಥಮಿಕ ತನಿಖೆಯಲ್ಲಿ 28 ಸಿಬ್ಬಂದಿಯಿಂದ ಭದ್ರತಾ ಠೇವಣಿ ಹಣ ಪಡೆಯಲಾಗಿತ್ತು ಎಂಬುದು ಪತ್ತೆಯಾಗಿದೆ ಎಂದು ದೂರುದಾರರು ಹೇಳಿದ್ದಾರೆ. ಆದರೆ, ಆ ಹಣವನ್ನು ಸಂಸ್ಥೆಗೆ ಜಮಾ ಮಾಡದೆ, ಸಿಬ್ಬಂದಿಯಿಂದ ಹಣ ಪಡೆಯಲಾಗಿಲ್ಲ ಎಂದು ಆಡಳಿತ ಮಂಡಳಿಗೆ ಮಾಹಿತಿ ನೀಡಿ ನೇಮಕಾತಿ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಒಟ್ಟು ₹1.41 ಕೋಟಿ ಹಣವನ್ನು ಸ್ವಂತ ಬಳಕೆಗೆ ಮಾಡಿಕೊಂಡಿರುವುದಲ್ಲದೆ, ಸಂಸ್ಥೆಗೆ ಬರಬೇಕಿದ್ದ ₹90.17 ಲಕ್ಷ ಲಾಭದ ಮೊತ್ತಕ್ಕೂ ನಷ್ಟ ಉಂಟುಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಆರೋಪಗಳ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆದರೆ, ತಮ್ಮ ವಿರುದ್ಧದ ಆರೋಪಗಳನ್ನು ರಾಘವೇಂದ್ರ ಅಣ್ಣಿಗೇರಿ ನಿರಾಕರಿಸಿದ್ದಾರೆ. ತಾವು ಯಾವುದೇ ಹಣ ದುರುಪಯೋಗಪಡಿಸಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ಬ್ಯಾಂಕ್ ಅಧಿಕಾರಿಗಳ ಸೂಚನೆಯಂತೆ ಸಿಬ್ಬಂದಿಯಿಂದ ಹಣ ಪಡೆದು, ಕೇಳಿದಾಗ ಮರಳಿ ನೀಡಿರುವುದಾಗಿ ಹೇಳಿದ್ದಾರೆ.
ಸಿಬ್ಬಂದಿ ನೇಮಕಾತಿ ತಮ್ಮೊಬ್ಬರ ನಿರ್ಧಾರದಿಂದ ನಡೆಯುವುದಿಲ್ಲ. ಆಡಳಿತ ಮಂಡಳಿ ಹಾಗೂ ಸಹಕಾರಿ ಇಲಾಖೆಯ ಅಧಿಕಾರಿಗಳೂ ಈ ಪ್ರಕ್ರಿಯೆಯಲ್ಲಿ ಭಾಗಿಯಾಗಿರುತ್ತಾರೆ. ಹೀಗಾಗಿ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಅಣ್ಣಿಗೇರಿ ಒತ್ತಾಯಿಸಿದ್ದಾರೆ.
2025ರಲ್ಲಿ ತಾವು ಹುದ್ದೆಗೆ ರಾಜೀನಾಮೆ ನೀಡಿದ್ದು, ಬಳಿಕ ತಮ್ಮ ಠೇವಣಿ ಹಣ ಮತ್ತು ಚೆಕ್‌ಗಳನ್ನು ಮರಳಿಸಿ ಎನ್‌ಒಸಿ ನೀಡಲಾಗಿದೆ. ಈಗ ತಮ್ಮ ವಿರುದ್ಧದ ದೂರು ಅಪಪ್ರಚಾರ ಮತ್ತು ತೇಜೋವಧೆ ಮಾಡುವ ಉದ್ದೇಶದಿಂದ ದಾಖಲಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಸೆ.27ರಂದು ನಡೆಯಲಿರುವ ಸಿದ್ದಸಿರಿ ಸಾಮಾನ್ಯ ಸಭೆಗೆ ತಮ್ಮನ್ನು ಆಹ್ವಾನಿಸುವಂತೆ ಆಗ್ರಹಿಸಿರುವ ಅಣ್ಣಿಗೇರಿ, ತಮ್ಮ ಬಳಿ ದಾಖಲೆಗಳಿದ್ದು, ಸಭೆಯಲ್ಲಿ ಎಲ್ಲವನ್ನೂ ಸಾಬೀತುಪಡಿಸುವುದಾಗಿ ತಿಳಿಸಿದ್ದಾರೆ. 28 ಸಿಬ್ಬಂದಿಯ ಭದ್ರತಾ ಠೇವಣಿ ಹಣವನ್ನು ಸೊಸೈಟಿಯ ಹಾಲಿ ಎಂ.ಡಿ. ಜ್ಯೋತಿಬಾ ಖಂಡಾಗಳೆ ಅವರಿಗೆ ನೀಡಿರುವುದಕ್ಕೆ ತಮ್ಮ ಬಳಿ ದಾಖಲೆಗಳಿವೆ ಎಂಬುದೂ ಅವರ ಹೇಳಿಕೆಯಾಗಿದೆ.
ಪ್ರಕರಣದಲ್ಲಿ ಸೊಸೈಟಿ ಮಾಡಿರುವ ಆರೋಪಗಳು ಮತ್ತು ಅಣ್ಣಿಗೇರಿ ನೀಡಿರುವ ಸ್ಪಷ್ಟನೆ ಎರಡೂ ದಾಖಲಾಗಿದ್ದು, ಪೊಲೀಸ್ ತನಿಖೆಯ ಬಳಿಕ ಆರೋಪಗಳ ಕುರಿತ ಹೆಚ್ಚಿನ ವಿವರಗಳು ಹೊರಬರಬೇಕಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




