*ಕಂದಾಯ ಅಧಿಕಾರಿಗಳ ದೀರ್ಘಕಾಲದ ಕಾಯುವಿಕೆಗೆ ಅಂತ್ಯ: ಅರ್ಹತೆಯ ಮನ್ನಣೆ ಹಾಗೂ ಆಡಳಿತ ಯಂತ್ರದ ಬಲವರ್ಧನೆ*

ಪ್ರಗತಿವಾಹಿನಿ ಸುದ್ದಿ: ಗ್ರೇಡ್-2 ತಹಶೀಲ್ದಾರ್ ಹುದ್ದೆಯಿಂದ ಗ್ರೇಡ್-1 ಹುದ್ದೆಗೆ ಬಡ್ತಿ ನೀಡಬೇಕೆಂಬ ಬಹುಕಾಲದ ಬೇಡಿಕೆ ಕಳೆದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು. ಸರ್ಕಾರವು ಇದನ್ನು ಆದ್ಯತೆಯ ಮೇರೆಗೆ ಪರಿಗಣಿಸಿ, ಅರ್ಹತೆಗೆ ಅನುಸಾರವಾಗಿ ಬಡ್ತಿ ನೀಡಿದೆ ಎಂದು ಡಿಸಿಎಂ ಡಾ. ಜಿ ಪರಮೇಶ್ವರ ಅವರು ತಿಳಿಸಿದ್ದಾರೆ.
ಇಒ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವ ಅವರು, ಇದು ಕೇವಲ ಆಡಳಿತಾತ್ಮಕ ಮೈಲುಗಲ್ಲಷ್ಟೇ ಅಲ್ಲ. ಬದಲಿಗೆ ನ್ಯಾಯಬದ್ಧ, ಪಾರದರ್ಶಕ ಹಾಗೂ ಸಮಯೋಚಿತ ನಿರ್ಧಾರಗಳ ಮೂಲಕ ಆಡಳಿತ ಯಂತ್ರವನ್ನು ಬಲಪಡಿಸುವ ಸರ್ಕಾರದ ದೃಢವಾದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.
ಒಟ್ಟು 232 ಗ್ರೇಡ್-2 ತಹಶೀಲ್ದಾರ್‌ಗಳಿಗೆ ಗ್ರೇಡ್-1 ತಹಶೀಲ್ದಾರ್ ಹುದ್ದೆಗೆ ಬಡ್ತಿ ನೀಡಲಾಗಿದೆ. ಹಲವು ವರ್ಷಗಳಿಂದ ಬಾಕಿ ಉಳಿದಿದ್ದ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಮೂಲಕ, “ಸರ್ಕಾರವು ಅರ್ಹತೆ, ಬದ್ಧತೆ ಮತ್ತು ಪ್ರಾಮಾಣಿಕತೆಯನ್ನು ಗುರುತಿಸಿ ಸದಾ ಪ್ರೋತ್ಸಾಹಿಸುತ್ತದೆ” ಎಂಬ ವಿಶ್ವಾಸವನ್ನು ನೌಕರ ವರ್ಗದಲ್ಲಿ ಮೂಡಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂಬ ನಂಬಿಕೆ ನನಗಿದೆ.
ಬಲಿಷ್ಠ ಮತ್ತು ಸ್ಫೂರ್ತಿದಾಯಕ ಆಡಳಿತ ಯಂತ್ರವೇ ಪರಿಣಾಮಕಾರಿ ಆಡಳಿತದ ಬುನಾದಿ. ಕಂದಾಯ ಇಲಾಖೆಯು ಪ್ರತಿಯೊಬ್ಬ ನಾಗರಿಕರಿಗೂ ಪಾರದರ್ಶಕ, ಉತ್ತರದಾಯಿ ಹಾಗೂ ಕಾಳಜಿಯುಕ್ತ ಸೇವೆಯನ್ನು ಒದಗಿಸಬೇಕೆಂಬ ರಾಜ್ಯ ಸರ್ಕಾರದ ಸಂಕಲ್ಪದ ಭಾಗವೇ ಈ ಮಹತ್ವದ ನಿರ್ಧಾರವಾಗಿದೆ.
ಈ ಕಾರ್ಯವನ್ನು ಸುಗಮವಾಗಿ ಸಾಕಾರಗೊಳಿಸಿದ ಎಲ್ಲಾ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಯ ನಿರಂತರ ಪ್ರಯತ್ನಗಳಿಗೆ ನನ್ನ ಹೃದಯಪೂರ್ವಕ ಕೃತಜ್ಞತೆಗಳು.
ದೀರ್ಘಕಾಲದ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಅವರೆಲ್ಲರ ಶ್ರಮ ಮತ್ತು ಸಹಕಾರವು ಮುಂಬರುವ ದಿನಗಳಲ್ಲಿ ಇಂತಹ ಮತ್ತಷ್ಟು ನಿರ್ಧಾರಗಳನ್ನು ಕೈಗೊಳ್ಳಲು ನಮಗೆ ಸ್ಫೂರ್ತಿದಾಯಕವಾಗಿದೆ. ವರ್ಷಗಳ ನಿರಂತರ ಪರಿಶ್ರಮ ಮತ್ತು ಸಮರ್ಪಣಾಭಾವದಿಂದ ಸೇವೆ ಸಲ್ಲಿಸಿ, ಬಡ್ತಿ ಪಡೆದಿರುವ ಪ್ರತಿ ಅಧಿಕಾರಿಗೂ ನನ್ನ ಆತ್ಮೀಯ ಅಭಿನಂದನೆಗಳು.
ಈ ಬಡ್ತಿಯು ಹೆಚ್ಚಿನ ಜವಾಬ್ದಾರಿಗಳೊಂದಿಗೆ, ನಾಡಿನ ಜನತೆಗೆ ಇನ್ನಷ್ಟು ದಕ್ಷತೆ, ಕಾಳಜಿ ಹಾಗೂ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುವುದರ ಮೂಲಕ ಸದುಪಯೋಗಪಡಿಸಿಕೊಳ್ಳುತ್ತೀರಿ ಎಂಬ ಸಂಪೂರ್ಣ ವಿಶ್ವಾಸ ನನಗಿದೆ.
ಕಂದಾಯ ಇಲಾಖೆಯ ಪ್ರತಿಯೊಬ್ಬ ಅಧಿಕಾರಿಯ ಗಮನಕ್ಕೆ ನಾನು ತರಬಯಸುವ ಪ್ರಮುಖ ವಿಚಾರವೆಂದರೆ, ಸರ್ಕಾರವು ನಿಮ್ಮ ಸೇವಾ ಬದ್ಧತೆಯನ್ನು ಗುರುತಿಸುತ್ತದೆ, ನಿಮ್ಮ ಕಳಕಳಿಯನ್ನು ಆಲಿಸುತ್ತದೆ ಹಾಗೂ ನಿಮ್ಮ ಆಕಾಂಕ್ಷೆಗಳನ್ನು ಸಹ ಪರಿಗಣಿಸುತ್ತದೆ.
ಸ್ವಯಂಸ್ಫೂರ್ತಿಯಿಂದ ಕಾರ್ಯನಿರ್ವಹಿಸುವ ಅಧಿಕಾರಿ ವರ್ಗವು ಯಾವುದೇ ಸರ್ಕಾರಕ್ಕೆ ಅತಿ ದೊಡ್ಡ ಆಸ್ತಿ. ನ್ಯಾಯಯುತವಾದ, ಸಮಾನ ಅವಕಾಶಗಳಿರುವ ಹಾಗೂ ವೃತ್ತಿ ನೈಪುಣ್ಯತೆಗೆ ಒತ್ತು ನೀಡುವ ಆಡಳಿತ ಸಂಸ್ಕೃತಿಯನ್ನು ನಿರ್ಮಿಸಲು ನಾವು ಬದ್ಧರಾಗಿದ್ದೇವೆ.
ಕಂದಾಯ ಇಲಾಖೆಯು ಮುಂಬರುವ ದಿನಗಳಲ್ಲಿ ಮತ್ತಷ್ಟು ವೇಗ, ಪಾರದರ್ಶಕ ಮತ್ತು ಜವಾಬ್ದಾರಿಯುತವಾಗಿ ಸೇವೆ ಒದಗಿಸುವ ‘ಜನಕೇಂದ್ರಿತ’ ಸಂಸ್ಥೆಯಾಗಿ ರೂಪುಗೊಳ್ಳಲಿದೆ ಎಂಬ ಭರವಸೆಯನ್ನು ನಾಡಿನ ಪ್ರತಿಯೊಬ್ಬರಿಗೂ ನೀಡುತ್ತಿದ್ದೇನೆ.
ನಮ್ಮ ಅಧಿಕಾರಿ ವರ್ಗದ ಸಬಲೀಕರಣದ ಮೂಲಕ ಪ್ರತಿಯೊಬ್ಬ ನಾಗರಿಕನ ಅಗತ್ಯಗಳಿಗೂ ಸ್ಪಂದಿಸುವ ಸರ್ಕಾರದ ಕಾರ್ಯವಿಧಾನವನ್ನು ಇನ್ನಷ್ಟು ಪರಿಣಾಮಕಾರಿಯಾಗಿಸುತ್ತಿದ್ದೇವೆ.
ಅಧಿಕಾರಿಗಳಲ್ಲಿ ವಿಶ್ವಾಸ ಹಾಗೂ ಜನಸಾಮಾನ್ಯರಲ್ಲಿ ಭರವಸೆ ಮೂಡಿಸುವ ಅತ್ಯುತ್ತಮ ಕಂದಾಯ ಆಡಳಿತವನ್ನು ನಾವೆಲ್ಲರೂ ಒಟ್ಟಾಗಿ ನಿರ್ಮಿಸೋಣ.
ಉತ್ತರದಾಯಿ, ಪಾರದರ್ಶಕ, ಸಂವೇದನಾಶೀಲ ಮತ್ತು ಸರ್ವರಿಗೂ ಸುಲಭವಾಗಿ ಲಭ್ಯವಾಗುವ ಸೇವಾ ಮಾದರಿಯ ಮೂಲಕ ‘ನವ ಕರ್ನಾಟಕ’ವನ್ನು ಕಟ್ಟೋಣ ಎಂದು ಡಿಸಿಎಂ ಡಾ.ಜಿ ಪರಮೇಶ್ವರ ತಿಳಿಸಿದ್ದಾರೆ.




