Kannada NewsKarnataka NewsLatestPolitics

*ಬೈರಮಂಗಲಕ್ಕೆ ಹೋಗಲು ಡಿ ಕೆ ಶಿವಕುಮಾರ್ ಶನಿವಾರ ಅಂದರೆ ನಾಳೆ ನಿಗದಿ ಮಾಡಿಲ್ಲ*

ಪ್ರಗತಿವಾಹಿನಿ ಸುದ್ದಿ,

ಬೆಂಗಳೂರು, ಜೂ. 26 – ಬಿಡದಿ ಟೌನ್‌ಶಿಪ್ ವಿವಾದದ ಹಿನ್ನೆಲೆಯಲ್ಲಿ ಬೈರಮಂಗಲದಲ್ಲಿ ನಾಳೆ ನಡೆಯಬೇಕೆಂದು ನಿರೀಕ್ಷಿಸಲಾಗಿದ್ದ ಬಹಿರಂಗ ಚರ್ಚೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಜರಾಗುವ ಸಾಧ್ಯತೆಗಳು ಕ್ಷೀಣವಾಗಿವೆ. ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು “ನಾನು ಬೈರಮಂಗಲದಲ್ಲಿ ಮಧ್ಯಾಹ್ನದವರೆಗೂ ಕಾಯುತ್ತೇನೆ, ಮುಖ್ಯಮಂತ್ರಿಗಳು ಬಂದರೆ ಸಂತೋಷ” ಎಂದು ಘೋಷಿಸಿದ್ದರೂ, ಶನಿವಾರದ ಅಧಿಕೃತ ಕಾರ್ಯಕ್ರಮಗಳ ಪ್ರಕಾರ ಶಿವಕುಮಾರ್ ಅವರಿಗೆ ಬೈರಮಂಗಲಕ್ಕೆ ಸಮಯವೇ ನಿಗದಿಯಾಗಿಲ್ಲ.

ಮುಖ್ಯಮಂತ್ರಿಯವರ ದಿನಚರಿಯಲ್ಲಿ ನಾಡಪ್ರಭು ಕೆಂಪೇಗೌಡರ 517ನೇ ಜಯಂತಿ ಕಾರ್ಯಕ್ರಮಗಳು, ಪ್ರತಿಮೆಗಳಿಗೆ ಮಾಲಾರ್ಪಣೆ, ಸ್ಮಾರಕ ಅನಾವರಣ, ಹಸಿರು ಅಭಿಯಾನ ಉದ್ಘಾಟನೆ, ಸಾರ್ವಜನಿಕ ಸಭೆ ಸೇರಿದಂತೆ ಬೆಳಿಗ್ಗೆಯಿಂದ ಸಂಜೆವರೆಗೂ ನಿರಂತರ ಕಾರ್ಯಕ್ರಮಗಳು ನಿಗದಿಯಾಗಿವೆ. ಜೊತೆಗೆ ಉಪ ರಾಷ್ಟ್ರಪತಿಯನ್ನು ಬರಮಾಡಿಕೊಳ್ಳುವ ಕಾರ್ಯಕ್ರಮ ಹಾಗೂ ಸಂಜೆ ರಾಜ್‌ದೀಪ್ ಸರ್ದೇಸಾಯಿ ಅವರ ಭೇಟಿ ಕೂಡಾ ಅವರ ವೇಳಾಪಟ್ಟಿಯಲ್ಲಿ ಸೇರಿದೆ.

ಈ ಹಿನ್ನೆಲೆಯಲ್ಲಿ ಬೈರಮಂಗಲದಲ್ಲಿ ನಡೆಯಬೇಕೆಂದು ನಿರೀಕ್ಷಿಸಲಾಗಿದ್ದ ಚರ್ಚೆ ನಡೆಯುವ ಸಾಧ್ಯತೆಗಳು ಕಡಿಮೆ. ಕುಮಾರಸ್ವಾಮಿ ರೈತರ ಮಧ್ಯೆ ನಿಂತು ಚರ್ಚೆ ಮಾಡಲು ಸಿದ್ಧತೆ ತೋರಿದ್ದರೆ, ಶಿವಕುಮಾರ್ ವಿಧಾನಸೌಧವೇ ಸೂಕ್ತ ವೇದಿಕೆ ಎಂದು ಹೇಳಿ ಆಹ್ವಾನ ನೀಡಿದ್ದರು. ಆದರೆ ನಾಳಿನ ಅಧಿಕೃತ ಕಾರ್ಯಕ್ರಮಗಳು ಅವರ ಹಾಜರಾತಿಗೆ ಅಡ್ಡಿಯಾಗುತ್ತಿದ್ದು, ರಾಜ್ಯದ ಜನರ ಕುತೂಹಲ ಇನ್ನಷ್ಟು ಹೆಚ್ಚಾಗಿದೆ.

Home add -Advt

ಬಿಡದಿ ಟೌನ್‌ಶಿಪ್ ವಿವಾದ ಈಗ ರಾಜಕೀಯ ಮುಖಾಮುಖಿ ರೂಪ ಪಡೆದುಕೊಂಡಿದ್ದು, ಬೈರಮಂಗಲವೇ ವೇದಿಕೆ ಆಗುತ್ತದೆಯೇ ಅಥವಾ ವಿಧಾನಸೌಧವೇ ವೇದಿಕೆ ಆಗುತ್ತದೆಯೇ ಎಂಬ ಪ್ರಶ್ನೆ ರಾಜ್ಯದ ಜನರ ಗಮನ ಸೆಳೆದಿದೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಶನಿವಾರದ ಅಧಿಕೃತ ಕಾರ್ಯಕ್ರಮಗಳು ಈಗಾಗಲೆ ನಿಗದಿಯಾಗಿವೆ. ನಾಡಪ್ರಭು ಕೆಂಪೇಗೌಡರ 517ನೇ ಜಯಂತಿ ಅಂಗವಾಗಿ ಅವರು ಬೆಳಿಗ್ಗೆಯಿಂದಲೇ ವಿವಿಧ ಸ್ಥಳಗಳಲ್ಲಿ ಭಾಗವಹಿಸಲಿದ್ದಾರೆ.

ಬೆಳಿಗ್ಗೆ 9 ಗಂಟೆಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರತಿಮೆಗೆ ಮಾಲಾರ್ಪಣೆ ಮಾಡುವುದರಿಂದ ದಿನದ ಕಾರ್ಯಕ್ರಮ ಆರಂಭವಾಗಲಿದೆ. ನಂತರ ಯಲಹಂಕದ ಹೊಯ್ಸಳ ಕ್ರೀಡಾಂಗಣ, ವಿಧಾನಸೌಧ ಪೂರ್ವ ದಿಕ್ಕು ಸೇರಿದಂತೆ ಹಲವು ಸ್ಥಳಗಳಲ್ಲಿ ಕೆಂಪೇಗೌಡರ ಪ್ರತಿಮೆಗಳಿಗೆ ಮಾಲಾರ್ಪಣೆ ನಡೆಯಲಿದೆ.

ಬೆಳಿಗ್ಗೆ 11 ಗಂಟೆಯಿಂದ 11.45ರವರೆಗೆ ಶ್ರೀ ಎಸ್.ಎಂ. ಕೃಷ್ಣ ದಶಪಥ ರಸ್ತೆಯ ಲೋಕಾರ್ಪಣೆ, ಕೆಂಪೇಗೌಡರ ಸ್ಮಾರಕ ಅನಾವರಣ, ಹಸಿರು ಅಭಿಯಾನ ಉದ್ಘಾಟನೆ ಹಾಗೂ 7 ಪುರಜ್ಯೋತಿಗಳ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ. ನಂತರ 11.45ಕ್ಕೆ ಸಾರ್ವಜನಿಕ ಸಭೆ ಆರಂಭವಾಗಲಿದೆ.

ಸಂಜೆ 5.15ಕ್ಕೆ ಉಪ ರಾಷ್ಟ್ರಪತಿಯನ್ನು ಬರಮಾಡಿಕೊಳ್ಳುವ ಕಾರ್ಯಕ್ರಮ ನಿಗದಿಯಾಗಿದೆ. ಸಂಜೆ 7ಕ್ಕೆ ಇಂಡಿಯಾ ಟುಡೇ ಪತ್ರಕರ್ತ ರಾಜ್‌ದೀಪ್ ಸರ್ದೇಸಾಯಿ ಅವರ ಭೇಟಿ ಕೂಡಾ ಕಾರ್ಯಕ್ರಮದಲ್ಲಿ ಸೇರಿದೆ. ಜೊತೆಗೆ ಬೆಳಿಗ್ಗೆ 11ಕ್ಕೆ ಭಾರತ್ ಜೋಡೋ ಭವನದಲ್ಲಿ INTUC ರಾಷ್ಟ್ರೀಯ ಮಹಾಸಭೆ ಮತ್ತು ರಾಜ್ಯ ಅಧಿವೇಶನದಲ್ಲಿ ಭಾಗವಹಿಸುವುದೂ ಮುಖ್ಯಮಂತ್ರಿಯವರ ದಿನಚರಿಯಲ್ಲಿ ಇದೆ.

ಈ ನಿಗದಿಯಾದ ವೇಳಾಪಟ್ಟಿಯಿಂದಾಗಿ ಬೈರಮಂಗಲದಲ್ಲಿ ನಡೆಯಬೇಕೆಂದು ನಿರೀಕ್ಷಿಸಲಾಗಿದ್ದ ಬಿಡದಿ ಟೌನ್‌ಶಿಪ್ ಕುರಿತ ಬಹಿರಂಗ ಚರ್ಚೆಗೆ ಅವರು ಹಾಜರಾಗುವ ಸಾಧ್ಯತೆಗಳು ಕಡಿಮೆ.

Related Articles

Back to top button