*ಕರ್ನಾಟಕ ಸಚಿವರ ಕಾರು ಚಾಲಕ ಗೋವಾದಲ್ಲಿ ಅನುಮಾನಾಸ್ಪದ ಸಾವು: ಪಣಜಿ ರೆಸಾರ್ಟ್‌ನಲ್ಲಿ ಘಟನೆ*

ಪ್ರಗತಿವಾಹಿನಿ ಸುದ್ದಿ,
ಪಣಜಿ/ಬೆಂಗಳೂರು: ಕರ್ನಾಟಕದ ಸಚಿವರೊಬ್ಬರ ಕಾರು ಚಾಲಕ ಸಂದೀಪ್ ಸಲಾಯಂ ಮಲೈ ಅವರು ಗೋವಾದ ಪಣಜಿಯ ರೆಸಾರ್ಟ್‌ವೊಂದರಲ್ಲಿ ಮಂಗಳವಾರ ರಾತ್ರಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಅವರು ಮೂಲತಃ ಉಡುಪಿಯವರು ಎಂಬ ಮಾಹಿತಿ ಲಭ್ಯವಾಗಿದೆ.
ಏನಾಯಿತು?
ಸಿಕ್ಕಿರುವ ಮಾಹಿತಿ ಪ್ರಕಾರ, ಸಂದೀಪ್ ಅವರು ಪಣಜಿಯ ಕ್ಯಾಸಿನೊದ ಮಹಿಳೆಯೊಂದಿಗೆ ಕಲಂಗುಟ್‌ನ ರೆಸಾರ್ಟ್‌ಗೆ ಬಂದಿದ್ದರು. ಅಪರಿಚಿತ ಮಹಿಳೆ ನೀಡಿದ ಸಿಗರೇಟ್ ಸೇವನೆಯ ಬಳಿಕ ಅವರು ಕುಸಿದು ಬಿದ್ದಿದ್ದಾರೆ ಎನ್ನಲಾಗಿದೆ. ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಪೊಲೀಸ್ ತನಿಖೆ ಚುರುಕು:
ಘಟನೆಯ ಮಾಹಿತಿ ಬಂದ ಕೂಡಲೇ ಗೋವಾ ಪೊಲೀಸರು ಸ್ಥಳಕ್ಕೆ ಧಾವಿಸಿ ಪಂಚನಾಮೆ ನಡೆಸಿದ್ದಾರೆ. ಆದರೆ ಸಾವಿಗೆ ನಿಖರವಾದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಗೋವಾ ಪೊಲೀಸರು ಈ ವಿಷಯವನ್ನು ವಿವಿಧ ಕೋನಗಳಿಂದ ತನಿಖೆ ನಡೆಸುತ್ತಿದ್ದು, ಮರಣೋತ್ತರ ಪರೀಕ್ಷೆಯ ವರದಿಯ ಬಳಿಕ ಸಾವಿನ ಕಾರಣ ಸ್ಪಷ್ಟವಾಗುವ ಸಾಧ್ಯತೆಯಿದೆ.
ಸದ್ಯಕ್ಕೆ ಇದನ್ನು ಅಸಹಜ ಸಾವು ಪ್ರಕರಣ ಎಂದು ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ. ಸಂದೀಪ್ ಅವರು ಯಾವ ಸಚಿವರ ಬಳಿ ಕಾರು ಚಾಲಕರಾಗಿದ್ದರು ಎಂಬುದನ್ನು ಪೊಲೀಸರು ಅಧಿಕೃತವಾಗಿ ತಿಳಿಸಿಲ್ಲ.



