Belagavi NewsBelgaum NewsKannada NewsKarnataka NewsLatest

*ಮಹಾರಾಷ್ಟ್ರ ದಾವೆ ಆರಂಭದಲ್ಲೇ ಕಿತ್ತು ಹಾಕುವಂತೆ ಮಾಡಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬುಧವಾರ ದಿನಾಂಕ ೦೧-೦೭-೨೦೨೬ ರಂದು ಮುಂಜಾನೆ ೧೧ ಗಂಟೆಗೆ ಬೆಳಗಾವಿಯ ರಾಣಿ ಕಿತ್ತೂರು ಚನ್ನಮ್ಮ ವೃತ್ತದಲ್ಲಿರುವ ಕನ್ನಡ ಸಾಹಿತ್ಯ ಭವನದಲ್ಲಿ ಬೆಳಗಾವಿಯ ಸಮಾನ ಮನಸ್ಕ ಕನ್ನಡ ಸಂಘಟನೆಗಳ ಸಭೆ ನಡೆಯಿತು. ಗಡಿ ವಿವಾದಕ್ಕೆ ಸಂಬಂಧಿಸಿದಂತೆ ನಡೆದಿರುವ ಬೆಳವಣಿಗೆಗಳ ಬಗ್ಗೆ ಹಾಗೂ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕರ್ನಾಟಕ ಪರವಾದ ಗೊತ್ತುವಳಿ ಅಂಗೀಕಾರ ವಿಳಂಬವಾಗುತ್ತಿರುವ ಬಗ್ಗೆ ಸುರ್ದೀಘವಾದ ಚರ್ಚೆ ನಡೆಯಿತು.
ಈ ಸಭೆಯ ಅಧ್ಯಕ್ಷತೆಯನ್ನು ಕಿತ್ತೂರು ಕರ್ನಾಟಕ ಸೇನೆಯ ರಾಜ್ಯಾಧ್ಯಕ್ಷ ಮಹಾದೇವ ತಳವಾರ ಅವರು ವಹಿಸಿದ್ದರು.

ಸಭೆಯಲ್ಲಿ ಸರ್ವಾನುಮತದಿಂದ ಕೈಕೊಂಡ ನಿರ್ಣಯಗಳು ಕೆಳಗಿನಂತಿವೆ:

೧) ೨೦೦೪ ರಲ್ಲಿ ಮಹಾರಾಷ್ಟ್ರ ಸರಕಾರ ಸುಪ್ರೀಮ್ ಕೋರ್ಟಿನಲ್ಲಿ ಸಲ್ಲಿಸಿರುವ ಗಡಿ ವಿವಾದ ದಾವೆಯು ಇನ್ನೂ ವಿಚಾರಣೆಗೆ ಅಂಗೀಕಾರವಾಗಿಲ್ಲ. ಈ ದಾವೆಯನ್ನು ಪ್ರಾಥಮಿಕ ಹಂತದಲ್ಲಿಯೇ ನ್ಯಾಯಾಲಯವು ತಿರಸ್ಕರಿಸುವಂತೆ ಸೂಕ್ತ ಕಾನೂನು ಕ್ರಮವನ್ನು ರಾಜ್ಯ ಸರಕಾರ ಕೈಕೊಳ್ಳಬೇಕು. ಬೆಳಗಾವಿ ಗಡಿಗೆ ಸಂಬಂಧಿಸಿದಂತೆ ರಚಿಸಲಾದ ಗಡಿ ಸಂರಕ್ಷಣಾ ಆಯೋಗ ಬೆಂಗಳೂರಿನ ಬಹುಮಹಡಿ ಕಟ್ಟಡದಲ್ಲಿದ್ದು ಅದನ್ನು ಬೆಳಗಾವಿಯ ಸುವರ್ಣ ಸೌಧಕ್ಕೆ ಸ್ಥಳಾಂತರಿಸಬೇಕು. ಆಯೋಗದ ಅಧ್ಯಕ್ಷರನ್ನಾಗಿ ಕಿತ್ತೂರು ಕರ್ನಾಟಕದ ನಿವೃತ್ತ ನ್ಯಾಯಮೂರ್ತಿಯೊಬ್ಬರನ್ನು ನೇಮಿಸಬೇಕು. ಗಡಿ ವಿವಾದ ವಿಷಯದಲ್ಲಿ ಸುಪ್ರೀಮ್ ಕೋರ್ಟಿನ ಹಿರಿಯ ನ್ಯಾಯವಾದಿ ಮೋಹನ ಕಾತರಕಿ ಹಾಗೂ ಬೆಳಗಾವಿಯ ಹಿರಿಯ ಕನ್ನಡ ಹೋರಾಟಗಾರ ಅಶೋಕ ಚಂದರಗಿ ಅವರನ್ನು ರಾಜ್ಯ ಸರಕಾರ ವಿಶ್ವಾಸಕ್ಕೆ ತೆಗೆದುಕೊಂಡು ಸೂಕ್ತ ಎಚ್ಚರಿಕೆಯ ಹೆಜ್ಜೆಗಳನ್ನು ಇಡಬೇಕು.

೨) ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ, ವಿರೋಧಿ ಪಕ್ಷಗಳ ನಾಯಕರನ್ನೊಳಗೊಂಡ, ಉನ್ನತಾಧಿಕಾರ ಸಮಿತಿಯನ್ನು ರಚಿಸಲಾಗಿದೆ. ಇಬ್ಬರು ಸಂಪುಟ ದರ್ಜೆಯ ಸಚಿವರನ್ನು ಗಡಿ ಉಸ್ತುವಾರಿ ಸಚಿವರನ್ನಾಗಿ ನೇಮಿಸಲಾಗಿದೆ. ಓರ್ವ ಸಂಸದರ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿಯನ್ನು ರಚಿಸಲಾಗಿದೆ. ಕರ್ನಾಟಕದಲ್ಲಿ ಎಚ್.ಕೆ. ಪಾಟೀಲರು ಗಡಿ ಉಸ್ತುವಾರಿ ಸಚಿವರಾಗಿದ್ದರು. ಮಹಾರಾಷ್ಟ್ರದ ಮಾದರಿಯಲ್ಲಿ ಕರ್ನಾಟದಲ್ಲೂ ಸಹ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಉನ್ನತಾಧಿಕಾರ ಸಮಿತಿ ರಚನೆಯಾಗಬೇಕು. ಪೂರ್ಣ ಪ್ರಮಾಣದ ಸಂಪುಟ ರಚನೆಯ ನಂತರ ಗಡಿ ಉಸ್ತುವಾರಿ ಸಚಿವರನ್ನು ನೇಮಕ ಮಾಡಬೇಕು. ಅಲ್ಲದೇ ಬೆಳಗಾವಿ ಹಾಗೂ ಚಿಕ್ಕೋಡಿ ಲೋಕಸಭಾ ಸದಸ್ಯರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸುವ ಮೂಲಕ ಗಡಿ ವಿವಾದ ಸಂಬಂಧ ಕೇಂದ್ರ ಸರಕಾರದ ಮೇಲೆ ನಿರಂತರ ಒತ್ತಡ ತರುವ ಕೆಲಸ ಮಾಡಬೇಕು.

Home add -Advt

೩) ಗಡಿ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ಉನ್ನತ ಮಟ್ಟದ ಸಭೆಯನ್ನು ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಸುವ ಮೂಲಕ ಮಹಾರಾಷ್ಟ್ರಕ್ಕೆ ತಕ್ಕ ಸಂದೇಶವನ್ನು ಕಳಿಸಬೇಕು. ೨೦೧೪ ಅಕ್ಟೋಬರ್ ೧೦ ರಂದು ಅಂದಿನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಬೆಂಗಳೂರಿನ ವಿಧಾನ ಸೌಧದಲ್ಲಿ ೧೦ ಸಚಿವರ, ಹಿರಿಯ ಅಧಿಕಾರಿಗಳ, ಚಿಂತಕರ, ಹಿರಿಯ ಹೋರಾಟರರ, ಹಿರಿಯ ನ್ಯಾಯವಾದಿಗಳ ಸಭೆ ನಡೆಸಿದ್ದರು. ಗಡಿ ಸಂರಕ್ಷಣಾ ಆಯೋಗದ ಅಧ್ಯಕ್ಷರನ್ನಾಗಿ ನಿವೃತ್ತ ನ್ಯಾಯಮೂರ್ತಿ ದಿ. ವ್ಹಿ.ಎಸ್. ಮಳಿಮಠ ಅವರನ್ನು ಹಾಗೂ ಗಡಿ ಉಸ್ತುವಾರಿ ಸಚಿವರನ್ನಾಗಿ ಎಚ್.ಕೆ. ಪಾಟೀಲ ಅವರನ್ನು ನೇಮಿಸುವ ನಿರ್ಧಾರ ಕೈಕೊಳ್ಳಲಾಗಿತ್ತು.

೪) ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕರ್ನಾಟಕ ಪರವಾದ ಗೊತ್ತುವಳಿಯನ್ನು ಅಂಗೀಕರಿಸುವ ಬಗ್ಗೆ ರಾಜ್ಯ ಸರಕಾರದ, ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳ ಅಭಿಪ್ರಾಯ ಕೋರಿ ಪಾಲಿಕೆಯ ಮಹಾಪೌರರು ಪತ್ರ ಬರೆದಿದ್ದರು. ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಿಗೆ ಅಭಿಪ್ರಾಯ ಕೇಳಿದ್ದರು. ನಿರ್ದೇಶಕರು ತಮ್ಮ ಅಭಿಪ್ರಾಯ ನೀಡದೇ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ವರದಿ ಕೇಳಿದರು. ಬೆಳಗಾವಿ ಜಿಲ್ಲಾಧಿಕಾರಿಗಳು ತಮ್ಮ ಅಭಿಪ್ರಾಯ ನೀಡದೆ ಪಾಲಿಕೆಯ ಆಯುಕ್ತರಿಗೆ ಪತ್ರ ಬರೆದು ವರದಿ ಕೇಳಿದರು. ಕನ್ನಡ ಸಂಘಟನೆಗಳು ನೂರು ದಿನಗಳಿಂದ ಯಾರ ವಿರುದ್ಧ ಹೋರಾಟ ನಡೆಸುತ್ತ ಬಂದಿವೆಯೋ ಅದೇ ಪಾಲಿಕೆಯ ಅಭಿಪ್ರಾಯ ಕೇಳಿರುವುದು ಅಧಿಕಾರಿಗಳ ಕುಚೇಷ್ಠೆ ಹಾಗೂ ನಿಯಮ ಬಾಹಿರವಾಗಿದೆಯೆಂದು ಸುಪ್ರೀಮ್ ಕೋರ್ಟಿನ ಹಿರಿಯ ನ್ಯಾಯವಾದಿ ಮೋಹನ ಕಾತರಕಿ ಅವರು ಸ್ಪಷ್ಟ ಅಭಿಪ್ರಾಯ ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಸಭೆಯು ಕುಂಟ ನೆಪಗಳನ್ನು ತಿರಸ್ಕರಿಸಲು ನಿರ್ಧರಿಸಿತು. ಈ ಮೊದಲು ಯಾವುದೇ ಗೊತ್ತುವಳಿ ಸ್ವೀಕರಿಸುವ ಮೊದಲು ರಾಜ್ಯ ಸರಕಾರದ ಅಭಿಪ್ರಾಯ ಕೇಳಿರಲಿಲ್ಲ. ೨೦೦೫ ರ ಅಕ್ಟೋಬರ್ ೨೭ ರಂದು ಮಹಾರಾಷ್ಟ್ರ ಪರವಾದ ಗೊತ್ತುವಳಿ ಸ್ವೀಕರಿಸುವ ಮುನ್ನ ಸರಕಾರದ ಅಭಿಪ್ರಾಯವನ್ನು ಕೇಳಲಾಗಿಲ್ಲ. ಆ ಗೊತ್ತುವಳಿಯನ್ನು ರಾಜ್ಯ ಸರಕಾರ ರದ್ದುಗೊಳಿಸಿದರೂ ಸಹ ಅದನ್ನು ಸುಪ್ರೀಮ್ ಕೋರ್ಟಿನ ಪ್ರಕರಣದಲ್ಲಿ ಸೇರಿಸಲಿಲ್ಲ. ಈಗ ಬಹುಮತದಲ್ಲಿರುವ ಬಿಜೆಪಿ ನಾಯಕರು, ಶಾಸಕರು, ಮಹಾಪೌರರು ಹಾಗೂ ಉಪಮಹಾಪೌರರು ಆದಷ್ಟು ಬೇಗನೆ ಪಾಲಿಕೆಯ ಸಭೆ ಕರೆದು ಗೊತ್ತುವಳಿ ಪಾಸು ಮಾಡುವಲ್ಲಿ ವಿಫಲರಾದರೆ. ಪಾಲಿಕೆಯ ಎದಿರು ಬಿಡಾರ ಹಾಕಿ ಪ್ರತಿನಿತ್ಯ ಸತ್ಯಾಗ್ರಹ ಆರಂಭಿಸಲು ಸಭೆ ತಿರ್ಮಾನಿಸಿತು.

೬) ಭಾಷಾ ಅಲ್ಪಸಂಖ್ಯಾತರಾದ ಮರಾಠಿಗರಿಗೆ ಸಾಕಷ್ಟು ಸೌಲಭ್ಯಗಳನ್ನು ರಾಜ್ಯ ಸರಕಾರ ಒದಗಿಸುತ್ತಲೇ ಬಂದಿದೆ. ರಾಜಕೀಯ ಕಾರಣಗಳಿಗಾಗಿ ಎಮ್‌ಇಎಸ್ ನಾಯಕರು ಪದೇಪದೇ ಕಾಲು ಕೆದರಿ ಜಗಳ ತೆಗೆಯುವ ಪ್ರವೃತ್ತಿ ಹೊಂದಿದ್ದಾರೆ. ಅವರ ಸಮಸ್ಯೆಗಳ ಪರಿಹಾರಕ್ಕೆ ಜಿಲ್ಲಾ ಮಟ್ಟದಲ್ಲಿ ಸಮಿತಿಯೊಂದನ್ನು ರಚಿಸುವುದಾಗಿ ಜಿಲ್ಲಾಧಿಕಾರಿಗಳು ಎಮ್‌ಇಎಸ್ ನಾಯಕರಿಗೆ ಭರವಸೆ ನೀಡಿದ್ದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಇದನ್ನು ಸಭೆಯೂ ತೀವ್ರವಾಗಿ ಖಂಡಿಸಿತು.

ಸಭೆಯಲ್ಲಿ ಉಪಸ್ಥಿತರಿದ್ದ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಅವರು ಗಡಿ ವಿವಾದ ಪ್ರಕರಣ ಹಾಗೂ ಬೆಳಗಾವಿ ಪಾಲಿಕೆಯ ಗೊತ್ತುವಳಿ ಸಂಬಂಧ ನಡೆದ ಬೆಳವಣಿಗೆಗಳನ್ನು ಸವಿಸ್ತಾರವಾಗಿ ವಿವರಿಸಿದರು,
ಗಡಿನಾಡು ಕನ್ನಡಿಗರ ಸೇನೆಯ ರಾಜ್ಯಾಧ್ಯಕ್ಷ ಬಲರಾಮ ಮಾಸೇನಟ್ಟಿ, ಕಿತ್ತೂರು ಕರ್ನಾಟಕ ಸೇನೆಯ ಯುವ ಘಟಕದ ರಾಜ್ಯಾಧ್ಯಕ್ಷ ಮಹೇಶ ಶೀಗಿಹಳ್ಳಿ, ಸರ್ವೋದಯ ಸಂಘದ ಅಧ್ಯಕ್ಷ ಶ್ರೀನಿವಾಸ ತಾಳೂಕರ, ಕರ್ನಾಟಕ ರಕ್ಷಣಾ ವೇದಿಕೆಯ (ಶಿವರಾಮೆಗೌಡ ಬಣ) ಜಿಲ್ಲಾಧ್ಯಕ್ಷ ವಾಜೀದ ಹಿರೇಕೊಡಿ, ಕರುನಾಡ ವೇದಿಕೆ ಜಿಲ್ಲಾಧ್ಯಕ್ಷ ಮಲ್ಲಪ್ಪ ಗುಡಗೇನಟ್ಟಿ, ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ರಾಜೂ ಕೋಲಾ, ಜಯ ಕರ್ನಾಟಕ ಜನಪರ ವೇದಿಕೆಯ ಜಿಲ್ಲಾಧ್ಯಕ್ಷ ಶಿವರೆಡ್ಡಿ ಹುಚ್ಚರೆಡ್ಡಿ, ಕನ್ನಡ ಹೋರಾಟಗಾರರಾದ ಶರೀಫ್ ಸನದಿ, ನಾಗೇಶ ಕೊಪ್ಪದ ಕರ್ನಾಟಕ ರಕ್ಷಣಾ ವೇದಿಕೆ (ಯುವ ಸೇನೆ) ಅಧ್ಯಕ್ಷ ಬಾಳಪ್ಪ ಗುಡಗೇನಟ್ಟಿ, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷರು (ಸ್ವಾಭಿಮಾನಿ ಬಣ) ಈಶ್ವರಗೌಡ ಪಾಟೀಲ, ಗಡಿನಾಡು ಕನ್ನಡಿಗರ ಸೇನೆಯ ಜಿಲ್ಲಾಧ್ಯಕ್ಷ ಎಸ್.ಎಸ್. ಮೂಕನವರ, ನೃಪತುಂಗ ಯುವಕ ಸಂಘದ ಅಧ್ಯಕ್ಷ ಸಾಗರ ಬೋರಗಲ್ಲ, ಗಡಿನಾಡು ಕನ್ನಡಿಗರ  ಸೇನೆಯ ಶಿವಾಜಿ ಗೊರವ, ಸಂಗೀತಾ ಕಾಂಬಳೆ ಮುಂತಾದವರು ಉಪಸ್ಥಿತರಿದ್ದು ಸಲಹೆ ಸೂಚನೆ ನೀಡಿದರು. 

ಮಹೇಶ ಶೀಗಿಹಳ್ಳಿ ಆರಂಭದಲ್ಲಿ ಸ್ವಾಗತಿಸಿ ಕೊನೆಗೆ ವಂದಿಸಿದರು.

Related Articles

Back to top button