*ಕಂದಾಯ ಸೇವೆಗಳು ಸಕಾಲದಲ್ಲಿ ತಲುಪಬೇಕು: ಡಾ.ಜಿ ಪರಮೇಶ್ವರ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕಂದಾಯ ಇಲಾಖೆಯ ಸಾರ್ವಜನಿಕ ಸೇವೆಗಳು ಅರ್ಹ ನಾಗರಿಕರಿಗೆ ಯಾವುದೇ ವಿಳಂಬವಿಲ್ಲದೆ, ಸಕಾಲದಲ್ಲಿ ತಲುಪಬೇಕು. ಕಚೇರಿಯಲ್ಲಿರುವ ಕಡತಗಳನ್ನು ಅನಗತ್ಯವಾಗಿ ಬಾಕಿ ಉಳಿಸಿಕೊಳ್ಳಬಾರದು ಎಂದು ಉಪ ಮುಖ್ಯಮಂತ್ರಿ ಡಾ.ಜಿ ಪರಮೇಶ್ವರ ಅವರು ಹೇಳಿದರು.
ಜಿಲ್ಲಾಡಳಿತ ವತಿಯಿಂದ ಬುಧವಾರ (ಜುಲೈ.೦೧) ಬೆಳಗಾವಿ ಸುವರ್ಣ ವಿಧಾನಸೌಧ ಸೆಂಟ್ರಲ್ ಸಭಾಂಗಣದಲ್ಲಿ ನಡೆದ ಪತ್ರಿಕಾ ದಿನಾಚರಣೆ, ಕಂದಾಯ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ಪತ್ರಿಕಾ ದಿನಾಚರಣೆ, ಕಂದಾಯ ದಿನಾಚರಣೆ, ವೈದ್ಯರ ದಿನಾಚರಣೆ ಆಚರಿಸಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ರಾಜ್ಯದಲ್ಲಿ ಬರ ಪರಿಸ್ಥಿತಿಗಳು ನಿರ್ಮಾಣವಾಗುವ ಸಾಧ್ಯತೆಯಿದೆ. ಇಡೀ ದೇಶದಲ್ಲಿ ಬರಗಾಲದ ಪರಿಸ್ಥಿತಿ ಎದುರಿಸುವ ಜವಾಬ್ದಾರಿ ಕಂದಾಯ ಇಲಾಖೆಯ ಮೇಲಿದೆ ಎಂದು ಹೇಳಿದರು.
ಕೆಲವು ಹಟ್ಟಿಗಳಲ್ಲಿ ಸರ್ಕಾರದ ಯಾವುದೇ ಅನುಕೂಲವಿಲ್ಲ. ಕಂದಾಯ ಇಲಾಖೆಯ ಮೇಲೆ ಬಹಳ ದೊಡ್ಡ ಜವಾಬ್ದಾರಿಯಿದೆ. ಸುಮಾರು ೧೧ ವರ್ಷಗಳ ಹಿಂದೆ ಕಾಗೋಡು ತಿಮ್ಮಪ್ಪನವರು ಕಂದಾಯ ದಿನಾಚರಣೆ ಮಾಡಬೇಕು ಎಂದು ಜಾರಿಗೆ ತಂದರು.
ಆದರೆ ಕಂದಾಯ ದಿನಾಚರಣೆ ಕೇವಲ ಆಚರಣೆಗೆ ಸೀಮಿತವಾಗಿದೆ ಜನ ಸಮುದಾಯದ ಹತ್ತಿರವಿದ್ದು, ಅವರಿಗೆ ಉತ್ತಮ ಸೇವೆ ಒದಗಿಸಬೇಕು ಎಂದು ಪ್ರತಿ ಕಂದಾಯ ದಿನಾಚರಣೆ ದಿನ ಆತ್ಮ ಅವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು.
ವೃದ್ಧರು, ಅಂಗವಿಕಲರು, ವಿಧವಾ ವೇತನ ಸೇರಿದಂತೆ ಪಿಂಚಣಿಗಳಿಗೆ ಸಾಕಷ್ಟು ಜನ ದಿನನಿತ್ಯ ಡಿಸಿ ಕಚೇರಿ, ತಹಶೀಲ್ದಾರ್ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿಗಳು ಇದ್ದು ಇವೆಲ್ಲವೂ ಬದಲಾಗಬೇಕು. ಕಂದಾಯ ಇಲಾಖೆಯ ಸೇವೆ ಸಕಾಲದಲ್ಲಿ ಸರಳವಾಗಿ ಅರ್ಹರಿಗೆ ತಲುಪಬೇಕು ಎಂದರು.
ಜುಲೈ ೧, ೧೮೪೩ರಲ್ಲಿ ಮೊದಲು ಮಂಗಳೂರು ಸಮಾಚಾರ ಪತ್ರಿಕೆ ಹರ್ಮನ್ ಮೊಗ್ಲಿನ್ ಎಂಬುವರು ಪ್ರಾರಂಭಿಸಿ, ಇಂದು ನಾವೆಲ್ಲರೂ ಪತ್ರಿಕಾ ದಿನಾಚರಣೆ ಆಚರಣೆ ಮಾಡುತ್ತಿದ್ದೇವೆ. ಪತ್ರಿಕಾ ವರದಿಗಳು ಪಾರದರ್ಶಕವಾಗಿ ಇರಬೇಕು. ತೀರ್ಮಾನಿತ ವರದಿ ನೀಡದೇ ಜನ ಸಮುದಾಯಕ್ಕೆ ಅನುಕುವಾಗುವ ನಿಟ್ಟಿನಲ್ಲಿ ಪೂರ್ವಾಪರ ಅವಲೋಕನ ಮಾಡಿಕೊಂಡು ವರದಿ ಮಾಡಬೇಕು. ಒಂದು ಲೇಖನ, ವರದಿ ಇಡೀ ಸಮುದಾಯವನ್ನು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಕಿವಿಮಾತು ಹೇಳಿದರು.
ನಮ್ಮ ಆರೋಗ್ಯವನ್ನು ಸುಧಾರಿಸಿ ಮತ್ತೆ ನಮ್ಮನು ಗುಣಮುಖರಾಗಿ ಮಾಡುವ ಕಾರ್ಯ ವೈದ್ಯರು ಮಾಡುತ್ತಾರೆ ಅವರ ಸೇವೆ ಶ್ಲಾಘನೀಯ ಎಂದು ಉಪ ಮುಖ್ಯಮಂತ್ರಿಗಳಾದ ಡಾ.ಜಿ.ಪರಮೇಶ್ವರ್ ಹೇಳಿದರು.
ಇದಕ್ಕೂ ಮುಂಚೆ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಕಂದಾಯ ಇಲಾಖೆಯ ವಿವಿಧ ಪಿಂಚಣಿ, ಹಕ್ಕು ಪತ್ರಗಳನ್ನು ಫಲಾನುಭವಿಗಳಿಗೆ ವಿತರಿಸಿದರು.
ಕಂದಾಯ ಇಲಾಖೆ ಕ್ರೀಡಾ ಸಾಧಕರು, ನಿವೃತ್ತ ನೌಕರರು ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲಿ ಉತ್ತಮ ಸೇವೆ ನೀಡಿದವರಿಗೆ ಸನ್ಮಾನಿಸಿ ಗೌರವಿಸಿದರು.
ಮೀಡಿಯಾ ಕಿಟ್ ವಿತರಣೆ;
ಹಿಂದುಳಿದ ವರ್ಗಗಳ ಮಾಧ್ಯಮ ಪ್ರತಿನಿಧಿಗಳಿಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ರಾಜ್ಯದ ಒಟ್ಟು ೧೮೦ ಪತ್ರಕರ್ತರಿಗೆ ಲ್ಯಾಪಟಾಪ್ ಹಾಗೂ ಕ್ಯಾಮೆರಾ ಒಳಗೊಂಡ ಮೀಡಿಯಾ ಕಿಟ್ ನೀಡಲಾಗುತ್ತಿದೆ.
ಪತ್ರಿಕಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿಯವರಿಂದ ಐದು ಜನರಿಗೆ ಸಾಂಕೇತಿಕವಾಗಿ ಮೀಡಿಯಾ ಕಿಟ್ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾದ ರಾಜೇಂದ್ರ ಕುಮಾರ್ ಕಟಾರಿಯಾ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ನವೀನ್ ರಾಜ್ ಸಿಂಗ್, ವಿಪತ್ತು ನಿರ್ವಹಣಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾದ ಮನೋಜ್ ಕುಮಾರ್ ಮೀನಾ, ಪಶುಸಂಗೋಪನ ಇಲಾಖೆಯ ಕಾರ್ಯದರ್ಶಿಗಳಾದ ವಿನೋದ್ ಪ್ರಿಯ, ಕಂದಾಯ ಇಲಾಖೆಯ ಆಯುಕ್ತರಾದ ಮೀನಾ ನಾಗರಾಜ್, ಭೂಮಾಪನ ಮತ್ತು ಭೂ ದಾಖಲೆಗಳ ಆಯುಕ್ತರಾದ ವೆಂಕಟರಾಜಾ, ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತರಾದ ಹೊನ್ನಾಂಬ, ಕಂದಾಯ ಇಲಾಖೆಯ ಬೆಳಗಾವಿ ವಿಭಾಗ ಪ್ರಾದೇಶಿಕ ಆಯುಕ್ತರಾದ ಜಾನಕಿ ಕೆ.ಎಂ., ಪಶುಸಂಗೋಪನಾ ಇಲಾಖೆಯ ಆಯುಕ್ತರಾದ ಶಿಲ್ಪಾ ನಾಗರಾಜ್ ಅವರು ಹಾಗೂ ಬೆಳಗಾವಿ ವಿಭಾಗದ ಎಲ್ಲ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ಉಪಸ್ಥಿತರಿದ್ದರು.



