Karnataka NewsLatestPolitics

*ಸಚಿವ ಈಶ್ವರ ಖಂಡ್ರೆಗೆ ತಿರುಗೇಟು ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ*

ಹೆಚ್ಎಂಟಿ ಜಾಗಕ್ಕೆ ಬನ್ನಿ, ಪರಿಸರ ಎಂದು ಸವಾಲು ಹಾಕಿದ ಹೆಚ್ಡಿಕೆ

ಪ್ರಗತಿವಾಹಿನಿ ಸುದ್ದಿ: ಹೆಚ್ಎಂಟಿ ಜಾಗಕ್ಕೂ ಅರಣ್ಯ ಇಲಾಖೆಗೂ ಯಾವುದೇ ಸಂಬಂಧ ಇಲ್ಲ. ಆ ಜಮೀನನ ಮೇಲೆ ಅರಣ್ಯ ಇಲಾಖೆಗೆ ಯಾವುದೇ ರೀತಿಯ ಹಕ್ಕು ಇರುವುದಿಲ್ಲ. ಬೇಕಿದ್ದರೆ ಈ ಬಗ್ಗೆ ಮಾತನಾಡುತ್ತಿರುವವರು ದಾಖಲೆಗಳನ್ನು ಪರಿಶೀಲನೆ ಮಾಡಲಿ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.

ಹೆಚ್ಎಂಟಿ ಭೂಮಿ ವಶಕ್ಕೆ ಸಂಬಂಧಿಸಿ ಅರಣ್ಯಾಧಿಕಾರಿ ಒಬ್ಬರು ನೀಡಿರುವ ನೋಟಿಸ್ ವಿಚಾರದಲ್ಲಿ ಸಚಿವ ಈಶ್ವರ ಖಂಡ್ರೆ ನೀಡಿರುವ ಹೇಳಿಕೆಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕೇಂದ್ರ ಸಚಿವರು; ಹೆಚ್ಎಂಟಿ ಭೂಮಿಯ ಮೇಲೆ ಹಿಂದಿನ ಅರಣ್ಯ ಸಚಿವರಿಗೆ ಯಾಕೋ ವಿಪರೀತ ಆಸಕ್ತಿ ಇದೆ. ಯಾವ ಕಾರಣಕ್ಕೆ ಅವರು ಈ ಪರಿಯ ಆಸಕ್ತಿ ತೋರುತ್ತಿದ್ದಾರೆ ಎನ್ನುವುದು ನನಗೆ ಅರ್ಥವಾಗುತ್ತಿಲ್ಲ ಎಂದು ಹೇಳಿದರು.

ಬೆಂಗಳೂರಿನಲ್ಲಿ ಗುರುವಾರ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವರು; ಹೆಚ್‌ಎಂಟಿ ಭೂಮಿಗೆ ಸಂಬಂಧಿಸಿದಂತೆ ಹಿಂದಿನ ಅರಣ್ಯ ಸಚಿವ ಈಶ್ವರ್ ಖಂಡ್ರೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

Home add -Advt

ಹೆಚ್‌ಎಂಟಿ ಭೂಮಿಯ ಬಗ್ಗೆ ಇಷ್ಟೆಲ್ಲಾ ಮಾತನಾಡುವ ಖಂಡ್ರೆ, ಹೆಚ್‌ಎಂಟಿ ಜಮೀನಿನ ಪಕ್ಕದಲ್ಲಿಯೇ ಜಕ್ಕೂರು ವಿಮಾನ ಚಾಲನಾ ತರಬೇತಿ ಕೇಂದ್ರವಿದೆ. ಅದರ ಎದುರಿಗೆ ಇರುವ ಜಕ್ಕೂರು ಪ್ಲಾಂಟೇಶನ್ ನಲ್ಲಿ ಅನೇಕರು ಮನೆಗಳನ್ನು ಕಟ್ಟಿದ್ದಾರೆ ಕೊಂಡಿದ್ದಾರೆ. ಅಲ್ಲಿ ಸಾಕಷ್ಟು ಅರಣ್ಯ ಭೂಮಿ ಗುಳುಂ ಆಗಿದೆ. 444 ಎಕರೆ ಭೂಮಿಯಲ್ಲಿ ಜೈವಿಕ ಉದ್ಯಾನ ಮಾಡುವುದು ನಮ್ಮ ಗುರಿ ಎಂದು ಹೇಳಿದ್ದೀರಿ. ಅರಮನೆ ಜಾಗವನ್ನು ವಶಕ್ಕೆ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದೆ ಹೇಳಿದ್ದು. ಅಲ್ಲಿ ನೋಡಿದರೆ ಉದ್ದಕ್ಕೂ ಕಲ್ಯಾಣಿ ಮಂಟಪಗಳು ತಲೆ ಎತ್ತಿ ನಿಂತಿವೆ. ಆ ಕಲ್ಯಾಣ ಮಂಟಪಗಳಿಗೆ ಯಾವ ಆಧಾರದ ಮೇಲೆ ಅನುಮತಿ ಕೊಟ್ಟಿದ್ದೀರಿ? ಜೈವಿಕ ಉದ್ಯಾನವನ ಮಾಡುವುದು ಅಂದರೆ ಇದೇನಾ ಖಂಡ್ರೆ ಅವರೇ? ಇಂದು ಕೇಂದ್ರ ಸಚಿವರು ಕೇಳಿದರು.

ಹೆಚ್‌ಎಂಟಿ ಜಾಗದ ಬಗ್ಗೆ ರಾಜ್ಯ ಸರ್ಕಾರದ ನಡುವೆ ವ್ಯಾಜ್ಯವಿದೆ. ಅದು ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ. ಅದರ ಜತೆಗೆ ರಾಷ್ಟ್ರದ ಹೆಮ್ಮೆಯಾಗಿದ್ದ ಹೆಚ್ಎಂಟಿ ಪುನಶ್ಚೇತನಕ್ಕೆ ಪ್ಯಾಕೇಜ್ ಘೋಷಣೆ ಆಗುವ ಪ್ರಕ್ರಿಯೆಗಳು ಅಂತಿಮ ಹಂತದಲ್ಲಿದೆ. ಇಂತಹ ಸಂದರ್ಭದಲ್ಲಿ ರಾಜ್ಯ ಅರಣ್ಯ ಇಲಾಖೆ ಭೂಮಿ ತೆರವು ಮಾಡಿ ಎಂದು ಆದೇಶ ನೀಡಿದೆ. ಸರಕಾರಿ ಸೇವೆಯಿಂದ ನಿವೃತ್ತಿ ಆಗುವುದಕ್ಕೆ ಕೇವಲ 15 ದಿನಗಳ ಹಿಂದೆ ಭೂಮಿ ಬಿಟ್ಟುಕೊಡುವಂತೆ ಕಾನೂನುಬಾಹಿರವಾಗಿ ಆದೇಶ ಹೊರಡಿಸಿದ್ದಾರೆ ಎಂದು ಕೇಂದ್ರ ಸಚಿವರು ಆಕ್ರೋಶ ವ್ಯಕ್ತಪಡಿಸಿದರು.

ಈಶ್ವರ ಖಂಡ್ರೆ ಎಷ್ಟು ಅರಣ್ಯ ಭೂಮಿಯನ್ನು ಉಳಿಸಿದ್ದಾರೆ?:

ಹೆಚ್ಎಂಟಿ ಜಾಗದ ಬಗ್ಗೆ ಯಾವುದೇ ಗೊಂದಲಗಳಿಲ್ಲ. ಅದಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳು ನಮ್ಮ ಬಳಿ ಇವೆ. ಯಾವುದೇ ಕಾರಣಕ್ಕೂ ಹೆಚ್‌ಎಂಟಿ ಭೂಮಿಯನ್ನು ಮುಟ್ಟಲು ಆಗುವುದಿಲ್ಲ. ನ್ಯಾಯಾಲಯದ ತಡೆಯಾಜ್ಞೆ ಕೂಡ ನೀಡಿದೆ. ಇಷ್ಟೆಲ್ಲಾ ಮಾತನಾಡುವ ಈಶ್ವರ್ ಖಂಡ್ರೆ ಅವರು ಅರಣ್ಯ ಸಚಿವರಾಗಿದ್ದಾಗ ಎರಡು ವರ್ಷಗಳಿಂದ ಎಲ್ಲೆಲ್ಲಿ ಭೂಮಿ ಉಳಿಸಿದ್ದಾರೆ? ಅರಣ್ಯ ಭೂಮಿ ದೊಡ್ಡ ಮಟ್ಟದಲ್ಲಿ ಅರಣ್ಯ ಭೂಮಿಯನ್ನು ಲೂಟಿ ಮಾಡಿದ್ದಾರೆ. ಅದನ್ನೆಲ್ಲಾ ವಾಪಸ್ ಪಡೆಯುವುದು ಯಾವಾಗ ಎಂದು ಸ್ವಲ್ಪ ಹೇಳುವಿರಾ ಖಂಡ್ರೆ ಅವರೇ? ಎಂದು ಕುಮಾರಸ್ವಾಮಿ ಅವರು ಪ್ರಶ್ನಿಸಿದರು.

ಒಕ್ಕೂಟ ವ್ಯವಸ್ಥೆ ಬಗ್ಗೆ ಕಿಂಚಿತ್ತೂ ಪರಿಜ್ಞಾನ ಇಲ್ಲದ ಇವರು ಕೇವಲ ಹೆಚ್‌ಎಂಟಿ ಮತ್ತು ಕುದುರೆಮುಖ ಬಗ್ಗೆ ಮಾತ್ರ ಯಾಕೆ ಮಾತನಾಡುತ್ತಿದ್ದಾರೆ? ಬೇರೆಯವರಿಗೆ ಕೊಟ್ಟ ಜಮೀನನ್ನು ವಾಪಸ್ ಪಡೆಯುವ ಕೆಲಸವನ್ನು ಮೊದಲು ರಾಜ್ಯ ಸರ್ಕಾರ ಮಾಡಲಿ ಎಂದು ಸವಾಲು ಹಾಕಿದರು.

ಪದೇಪದೇ ಈಗಿನ ಪಂಚಾಯತ್ ರಾಜ್ ಸಚಿವರು ನನಗೆ ಸಲಹೆ ಕೊಡುತ್ತಿದ್ದಾರೆ. ಅವರು ಸಲಹೆ ಕೊಡುತ್ತಾರೆ. ಆದರೆ, ಹೆಚ್ಎಂಟಿ ಉಳಿಸಲು ನನಗೆ ಸಹಕಾರ ಕೊಡಲಿಲ್ಲ. ಆದರೆ ಮಾಧ್ಯಮಗಳ ಮೂಲಕ ಪುಕ್ಕಟೆ ಸಲಹೆಗಳನ್ನು ಕೊಡುತ್ತಿದ್ದಾರೆ. ಉಕ್ಕಿನ ಕಾರ್ಖಾನೆ ಪುನಶ್ಚೇತನ ಮಾಡಲು ಹೇಳಿದ್ದಾರೆ. ರಾಜ್ಯ, ದೇಶಕ್ಕೆ ಕುಮಾರಸ್ವಾಮಿ ಕೊಡುಗೆ ಏನು ಎಂದು ಕೇಳಿದ್ದಾರೆ! ಆ ಮಾಹಿತಿ ಇಲ್ಲ. ನನ್ನ ಪ್ರವಾಸದ ವೇಳಾಪಟ್ಟಿ, ದೆಹಲಿಯಲ್ಲಿ ನಾನು ಮಾಡಿರುವ ಸಭೆಗಳ ಬಗ್ಗೆ ಮಾಹಿತಿ ಪಡೆದುಕೊಂಡರೆ ಹೆಚ್ಎಂಟಿ ಮತ್ತು ಭದ್ರಾವತಿ ಉಕ್ಕು ಕಾರ್ಖಾನೆ ಪುನಶ್ಚೇನಕ್ಕೆ ನಾನು ಮಾಡಿರುವ ಪ್ರಯತ್ನಗಳು ಏನೇನು ಎಂಬುದು ಅರ್ಥವಾಗುತ್ತದೆ. ಮಾತೆತ್ತಿದರೆ ಹೆಚ್ಎಂಟಿ ಕಾರ್ಖಾನೆ ಬಗ್ಗೆ ಮಾತನಾಡುತ್ತಾರೆ. ಅದು ಕನ್ನಡಿಗರ ಆಸ್ತಿ ಎನ್ನುತ್ತಾರೆ. ಅದು ನನ್ನ ಆಸ್ತಿಯೂ ಅಲ್ಲ. ಖಂಡ್ರೆ ಆಸ್ತಿಯೂ ಇಲ್ಲ. ಅದು ಕನ್ನಡಿಗರ ಆಸ್ತಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಅದೇ ಕನ್ನಡಿಗರ ಆಸ್ತಿಯಲ್ಲಿ ಸುಮಾರು 175 ಎಕರೆ ನುಂಗಿದ್ದಾರೆ. ಅದನ್ನು ವಾಪಸ್ ಪಡೆಯೋದಕ್ಕೆ ಮೂರು ವರ್ಷ ಅರಣ್ಯ ಸಚಿವರಾಗಿ ನೀವು ಮಾಡಿದ ಕೆಲಸವೇನು ಖಂಡ್ರೆ ಅವರೇ? ಎಂದು ಸಚಿವ ಕುಮಾರಸ್ವಾಮಿ ತೀಕ್ಷ್ಣವಾಗಿ ಪ್ರಶ್ನೆ ಮಾಡಿದರು.

ಈಶ್ವರ ಖಂಡ್ರೆ ಅವರೇ, ನಿಮ್ಮಿಂದ ನಾನು ಕಲಿಯಬೇಕಿಲ್ಲ. ಎಚ್ಎಂಟಿಯ ಜಾಗದಲ್ಲಿ ದೊಡ್ಡ ದೊಡ್ಡ ಕಟ್ಟಡಗಳು ಅಪಾರ್ಟ್ಮೆಂಟ್’ಗಳು ತಲೆಯೆತ್ತಿ ನಿಂತಿವೆ. ಅಪಾರ್ಟ್ಮೆಂಟ್’ಗಳಲ್ಲಿ ಯಾರು ಯಾರು ವಾಸ ಮಾಡುತ್ತಿದ್ದಾರೆ ಎನ್ನುವುದು ಗೊತ್ತಿದೆ. ಇದರ ಬಗ್ಗೆ ಮೂರು ವರ್ಷಗಳಲ್ಲಿ ಏನೇನು ಪರಿಶೀಲನೆ ಮಾಡಿದ್ದೀರಿ ಎಂದು ಕುಮಾರಸ್ವಾಮಿ ಅವರು ಕೇಳಿದರು.

ಮೊದಲು ಖಾಸಗಿಯವರು ಲೂಟಿ ಮಾಡಿರುವ ಜಮೀನನ್ನು ವಾಪಸ್ ಪಡೆದುಕೊಳ್ಳಿ. ಬಹುಶಃ ಈಶ್ವರ ಖಂಡ್ರೆ ಅವರನ್ನು ಯಾರೋ ಪುಸಲಾಯಿಸಿ ಮಾತನಾಡಿಸುತ್ತಿರಬಹುದು. ಈಗ ಬೇರೆ ಇಲಾಖೆ ಸಚಿವರಾದರೂ.ಹೆಚ್ಎಂಟಿ ಮತ್ತು ಕುದುರೆಮುಖ ಉಕ್ಕಿನ‌ ಕಾರ್ಖಾನೆ ಬಗ್ಗೆ ವಿಪರೀತ ಮುತುವರ್ಜಿ ವಹಿಸಿ ಮಾತನಾಡುತ್ತಿದ್ದಾರೆ. ಇದರ ಒಳಮರ್ಮ ಏನೆಂದು ನನಗೂ ಅರ್ಥವಾಗುತ್ತಿಲ್ಲ ಎಂದು ಸಚಿವರು ಟಾಂಗ್ ನೀಡಿದರು.

ಈ ಕಾರ್ಖಾನೆಯನ್ನು ಉಳಿಸಲು ನಾನು ಎಷ್ಟೆಲ್ಲ ಪ್ರಯತ್ನ ಮಾಡಿದ್ದೇನೆ ಎನ್ನುವುದು ನನಗೇ ಗೊತ್ತು. ಪ್ರಧಾನಿಗಳ ಮನವೊಲಿಕೆ ಮಾಡಿ ಪುನಶ್ಚೇತನಕ್ಕಾಗಿ ಕೆಲಸ ಮಾಡುತ್ತಿದ್ದೇನೆ. ರಾಜ್ಯಕ್ಕೆ ಒಳ್ಳೆಯದು ಮಾಡುತ್ತಿರುವ ನನಗೆ ಬೆಂಬಲ ಕೊಡುವುದು ಬಿಟ್ಟು, ಈ ರೀತಿ ಬೀದಿಯಲ್ಲಿ ಟೀಕೆ ಟಿಪ್ಪಣಿ ಮಾಡಿಕೊಂಡು ಅಡ್ಡಿ ಮಾಡುವುದು ಸರಿಯೇ? ಎಂದು ಕೇಳಿದರು ಕೇಂದ್ರ ಸಚಿವರು.

ಸ್ಥಳಕ್ಕೆ ಬನ್ನಿ ಖಂಡ್ರೆ ಅವರೇ!

ಹೆಚ್ಎಂಟಿ ಜಾಗದಲ್ಲಿ 280 ಎಕರೆ ನೆಡುತೋಪು ಇದೆ ಎಂದು ಖಂಡ್ರೆ ಅವರು ಹೇಳಿದ್ದಾರೆ. ಬನ್ನಿ, ನೆಡುತೋಪು ಎಲ್ಲಿದೆ ಎಂದು ಹೋಗಿ ನೋಡೋಣ. ರಾಜ್ಯದ ಎಲ್ಲಾ ಮಾಧ್ಯಮಗಳನ್ನು ಕರೆದುಕೊಂಡು ಅವರ ಸಮಕ್ಷಮದಲ್ಲಿಯೇ ವೀಕ್ಷಣೆ ಮಾಡೋಣ. ಅಲ್ಲಿ ಏನಾದರೂ ಹೆಚ್ಎಂಟಿ ದುರ್ಬಳಕೆ ಮಾಡುತ್ತಿದ್ದೀಯಾ ಅಥವಾ ಬೇರೆ ಪಟ್ಟಭದ್ರರು ಅಲ್ಲಿನ ಜಾಗವನ್ನು ಕಬ್ಬಳಿಸಿದ್ದಾರಾ? ಎನ್ನುವುದು ತಿಳಿಯುತ್ತದೆ. ಕಬಳಿಕೆಯಲ್ಲಿ ಯಾರ ಯಾರ ಪಾಲು ಎಷ್ಟು ಇದೆ ಎನ್ನುವುದು ಆಗ ಬಯಲಿಗೆ ಬರುತ್ತದೆ. ಈಗ ರಾಜ್ಯದಲ್ಲಿ ಈಶ್ವರ ಖಂಡ್ರೆ ಅವರ ಪಕ್ಷದ್ದೇ ಸರ್ಕಾರ ಇದೆಯಲ್ಲ, ತನಿಖೆ ಮಾಡಲಿ. ನಮಗೇನು ಆಕ್ಷೇಪ ಇಲ್ಲ. 130 ಎಕರೆ ಪರಭಾರೆ ಮಾಡಿದ್ದೀರಲ್ಲ, ಅದರಿಂದ ಯಾವ ಯಾವ ಕೈ ತನ್ನ ಚಳಕವನ್ನು ತೋರಿಸಿದೆ ಎಂಬುದು ಅಲ್ಲಿಯೇ ಆಚೆಗೆ ಬರುತ್ತದೆ. ಬನ್ನಿ ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡೋಣ ಎಂದು ಕೇಂದ್ರ ಸಚಿವರು ಖಂಡ್ರೆ ಅವರಿಗೆ ಸವಾಲು ಹಾಕಿದರು.

ಮೂರು ವರ್ಷ ಅರಣ್ಯ ಮಂತ್ರಿಯಾಗಿ ಕೆಲಸ ಮಾಡಿದ್ದೀರಿ. ಆ ಸಂದರ್ಭದಲ್ಲಿ ಏನು ಕಡೆದು ಕಟ್ಟಿ ಹಾಕಿದ್ದೀರಿ? ನೀವು ಅರಣ್ಯ ಮಂತ್ರಿಯಾಗಿ ಎಷ್ಟು ಅರಣ್ಯ ಭೂಮಿಯನ್ನು ವಾಪಸ್ ಪಡೆದು ಉಳಿಸಿದ್ದೀರಿ? ಕಾನ್ ಕಾರ್ಡ್ ಇಂಡಿಯಾ ಕೇಸ್ ಇನ್ನು ಕೋರ್ಟ್’ನಲ್ಲಿ ನಡೆಯುತ್ತಿದೆ. ಇದು ಗೊತ್ತಿಲ್ಲವಾ ನಿಮಗೆ? ಹೆಚ್ಎಂಟಿ ಒಟ್ಟು ಜಾಗದಲ್ಲಿ ಸ್ವಲ್ಪ ಜಾಗವನ್ನು ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೊಗೆ ಕೊಡಲಾಗಿದೆ. ರಾಷ್ಟ್ರಕ್ಕೆ ದೊಡ್ಡ ಪ್ರಮಾಣದಲ್ಲಿ ಕೊಡುಗೆ ನೀಡುತ್ತಿರುವ ಇಸ್ರೋಗೆ ಜಾಗ ನೀಡಿರುವುದರಲ್ಲಿ ಅರ್ಥವಿದೆ. ರಾಷ್ಟ್ರಕ್ಕೆ ಒಳ್ಳೆಯದಾಗುವ ರೀತಿಯಲ್ಲಿ ಏನೇ ಕಾರ್ಯಕ್ರಮ ಇದ್ದರೂ ನಾನು ಸ್ವಾಗತಿಸುತ್ತೇನೆ. ಆದರೆ ಸರ್ಕಾರವೇ ರಿಯಲ್ ಎಸ್ಟೇಟ್ ಮಾಡಲು ಬಂದರೆ ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಸಚಿವ ಕುಮಾರಸ್ವಾಮಿ ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದರು.

ಅನಗತ್ಯವಾಗಿ ಹೇಳಿಕೆಗಳನ್ನು ಕೊಡುವುದು ಬೇಡ. ಈ ಬಗ್ಗೆ ಏನೇ ಗೊಂದಲಗಳು ಇದ್ದರೂ ಪರಿಹರಿಸಿಕೊಳ್ಳೋಣ. ದಾಖಲೆಗಳನ್ನು ತೆಗೆದುಕೊಂಡು ನಾನೇ ಬರುತ್ತೇನೆ. ಬನ್ನಿ ಪರಸ್ಪರ ಕುರಿತು ಸಮಸ್ಯೆಯನ್ನು ಬಗೆಹರಿಸೋಣ. ಹಿಂದಿನ ಮುಖ್ಯಮಂತ್ರಿಗೆ ನಾನು ಮನವಿಯನ್ನೂ ಮಾಡಿದ್ದೆ. ನಾನು ರಾಜ್ಯಕ್ಕೆ ಒಳ್ಳೆಯದನ್ನೇ ಮಾಡುವುದಕ್ಕೆ ಹೊರಟಿದ್ದರೆ ರಾಜ್ಯ ಸರ್ಕಾರ ಅಡ್ಡಿ ಮಾಡುವುದು ಬೇಡ. ಮುಕ್ತವಾಗಿ ಬೆಂಬಲ ಕೊಡಿ. ಎಲ್ಲರೂ ಸೇರಿ ಒಟ್ಟಾಗಿ ರಾಜ್ಯಕ್ಕೆ ಅನುಕೂಲ ಆಗುವ ಕೆಲಸಗಳನ್ನು ಮಾಡೋಣ. ಪಕ್ಷದ ಆಂಧ್ರ ಪ್ರದೇಶದ ಅಭಿವೃದ್ಧಿಯನ್ನು ಒಮ್ಮೆ ನೋಡಿ. ₹1,30,000 ಕೋಟಿ ವೆಚ್ಚದಲ್ಲಿ ಆರ್ಸೆಲರ್ ಮಿತ್ತಲ್ ಮತ್ತು ನಿಫಾನ್ ಸ್ಟೀಲ್ ನವರು ಉಕ್ಕು ಕಾರ್ಖಾನೆ ಸ್ಥಾಪನೆ ಮಾಡುತ್ತಿದ್ದಾರೆ. ನಮ್ಮ ರಾಜ್ಯಕ್ಕೆ ಏನಾಗಿದೆ? ಕೇಂದ್ರ ಸರ್ಕಾರ ಕೊಡುತ್ತೇವೆ ಎಂದು ಮುಂದೆ ಬಂದರೂ ಇವರು ತೆಗೆದುಕೊಳ್ಳುತ್ತಿಲ್ಲ ಎಂದು ಕೇಂದ್ರ ಸಚಿವರು ಬೇಸರ ವ್ಯಕ್ತಪಡಿಸಿದರು.

ಬೆಂಗಳೂರು ನಗರಕ್ಕೆ 1.5 ಲಕ್ಷ ಕೋಟಿ ಎಲ್ಲಿಂದ ಬರುತ್ತೆ?

ಬೆಂಗಳೂರು ಅಭಿವೃದ್ಧಿಗೆ ₹1.5 ಲಕ್ಷ ಕೋಟಿ ಹಂಚಿಕೆ ಮಾಡುತ್ತೇವೆ ಎಂದು ಸಿಎಂ ಡಿಕೆಶಿ ಘೋಷಣೆ ಮಾಡಿದ್ದಾರೆ. ಆದರೆ, ಈ ಸರ್ಕಾರದಲ್ಲಿ ಹಣ ಎಲ್ಲಿದೆ? ಯಾರ ತಲೆ ಮೇಲೆ ಸಾಲ ಹೇರುತ್ತೀರಿ? ಜನರ ಮೇಲೆ ಸಾಲದ ಹೊರೆ ಹಾಕಿ ಬೆಂಗಳೂರು ಉದ್ದಾರ ಮಾಡುತ್ತೀರಾ? 15 ಲಕ್ಷ ಸಸಿ ನೆಟ್ಟು ಗಿನ್ನೆಸ್ ದಾಖಲೆ ಮಾಡಿದ್ದೇವೆ ಎಂದು ಹೇಳುತ್ತಿದ್ದಾರೆ. 15 ಲಕ್ಷ ಸಸಿ ನೆಟ್ಟು ಚೊಂಬಿನಲ್ಲಿ ನೀರು ಬಿಡುತ್ತಿದ್ದಾರೆ. ಗಿನ್ನೆಸ್ ದಾಖಲೆ ಮಾಡುವುದಕ್ಕೆ ಭತ್ತ ನಾಟಿ ಮಾಡುವವರನ್ನು ಕರೆದುಕೊಂಡು ಬಂದು ಸಸಿಗಳನ್ನು ನೆಡಿಸಿದ್ದಾರೆ ಎಂದು ಕೇಂದ್ರ ಸಚಿವರು ಲೇವಡಿ ಮಾಡಿದರು.

ಸಿದ್ದರಾಮಯ್ಯ ಕಾಲದ ಟೆಂಡರ್’ಗಳ ರದ್ದು ಬಗ್ಗೆ ಮುಂದೆ ಮಾತನಾಡುತ್ತೇನೆ:

ಹಿಂದಿನ ಸಿಎಂ ಸಿದ್ದರಾಮಯ್ಯ ಅವರ ಕಾಲದ ವಿವಿಧ ಟೆಂಡರ್ ಗಳನ್ನು ರದ್ದು ಮಾಡಿರುವ ಸಿಎಂ ಡಿಕೆಶಿ ಅವರು ಮರು ಟೆಂಡರ್ ಮಾಡಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಲು ಸಚಿವ ಕುಮಾರಸ್ವಾಮಿ ಅವರು ನಿರಾಕರಿಸಿದರು. ಇವತ್ತು ನಾನು ಈ ಬಗ್ಗೆ ಏನನ್ನೂ ಮಾತನಾಡಲ್ಲ. ಅದಕ್ಕೆ ಸೂಕ್ತ ಸಮಯ ಬರಲಿ, ಆಗ ಎಲ್ಲವನ್ನೂ ಬಯಲಿಗೆ ತರುತ್ತೇನೆ ಎಂದು ಸಚಿವರು ಹೇಳಿದರು.

ಈ ಬಗ್ಗೆ ನನಗೆ ಮಾಹಿತಿ ಇದೆ. ಇದು ಸರಿಯಾದ ಕ್ರಮ ಅಲ್ಲ. ಯಾಕೆ ಟೆಂಡರ್ ಗಳನ್ನು ರದ್ದು ಮಾಡುತ್ತಿದ್ದಾರೆ ಎಂಬುದು ಗೊತ್ತಿಲ್ಲ. ಶಿಗ್ರದಲ್ಲಿಯೇ ಆ ಬಗ್ಗೆ ಮಾತನಾಡುತ್ತೇನೆ ಎಂದು ಅವರು ಹೇಳಿದರು.

ರಾಜ್ಯ ರಾಜಕಾರಣದಲ್ಲಿಯೇ ಇದ್ದೇನೆ:

ನಾನು ನಮ್ಮ ಪಕ್ಷದ ರಾಜ್ಯಾಧ್ಯಕ್ಷ. ಹೀಗಾಗಿ ಪಕ್ಷದ ಸಂಘಟನೆಯ ಜವಾಬ್ದಾರಿ ನನಗಿದೆ. ರಾಜ್ಯಕ್ಕೆ ವಾಪಸ್ ಬಂದೇ ಬರುತ್ತೇನೆ. ಆದರೆ ಈಗಲೇ ಅಲ್ಲ ಎಂದ ಅವರು; ನಾನು ರಾಜ್ಯಕ್ಕೆ ವಾಪಸ್ ಬರುತ್ತೇನೆ ಎಂದರೆ ಅದು ಈಗಲೇ ಎಂದಲ್ಲ. ಸದ್ಯಕ್ಕೆ ನಾನು ಕೇಂದ್ರ ಸಚಿವನಾಗಿದ್ದೇನೆ, ಇನ್ನೂ ಮೂರು ವರ್ಷ ಸಂಸದನಾಗಿ ಅಧಿಕಾರಾವಧಿ ಇದೆ. ಹಾಗಾಗಿ ಇವತ್ತೇ, ನಾಳೆ ದಿನವೇ ಬರುತ್ತೇನೆ ಎಂದಲ್ಲ. ಕೇಂದ್ರದಲ್ಲಿ ನನಗೆ ಜವಾಬ್ದಾರಿ ನೀಡಲಾಗಿದೆ, ಅದನ್ನು ನಿಭಾಯಿಸುತ್ತಲೇ ರಾಜ್ಯದಲ್ಲಿ ಪಕ್ಷ ಸಂಘಟನೆಯನ್ನೂ ಮಾಡುತ್ತೇನೆ. ಕೇಂದ್ರ ಮತ್ತು ರಾಜ್ಯ ಎರಡೂ ಕಡೆಗಳಲ್ಲಿ ನಾನು ಸಕ್ರಿಯವಾಗಿ ಕೆಲಸ ಮಾಡುತ್ತೇನೆ ಎಂದು ಅವರು ಪ್ರಶ್ನೆ ಒಂದಕ್ಕೆ ಉತ್ತರ ನೀಡಿದರು.

ಹಿರಿಯೂರು ಉಪ ಚುನಾವಣೆಗೆ ಜೆಡಿಎಸ್ ಸಿದ್ಧತೆ:

ಹಿರಿಯೂರು ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು; ಹಿರಿಯೂರು ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂದು ನಮ್ಮ ಪಕ್ಷದಲ್ಲಿ ಒತ್ತಡ ಇದೆ. ಈ ಬಗ್ಗೆ ಬಿಜೆಪಿ ಉನ್ನತ ನಾಯಕರ ಜತೆ ಚರ್ಚೆ ನಡೆಸಿದ್ದೇನೆ. ಹಿರಿಯೂರು ಕ್ಷೇತ್ರದ ಮುಖಂಡರ ಜತೆ ಎರಡು ಮೂರು ಸಭೆಗಳನ್ನು ನಡೆಸಿದ್ದೇನೆ. ಸಮಯ ಇದೆ, ನೋಡೋಣ ಎಂದರು.

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಕೋರ್ ಕಮಿಟಿ ಅಧ್ಯಕ್ಷ ಕೃಷ್ಣಾರೆಡ್ಡಿ, ಶಾಸಕ ಎಂ.ಟಿ. ಕೃಷ್ಣಪ್ಪ, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ರಶ್ಮಿ ರಾಮೇಗೌಡ, ಮಾಜಿ ಶಾಸಕ ಚೌಡರೆಡ್ಡಿ ತೂಪಲ್ಲಿ, ಮುಖಂಡ ಶಾಂತಕುಮಾರ್ ಮುಂತಾದವರು ಉಪಸ್ಥಿತರಿದ್ದರು.

35 ಬಿಇಓಗಳಿಗೆ ಯಾಕೆ ನೋಟಿಸ್ ಕೊಟ್ಟರು?

ರಾಜ್ಯದಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣಿ ಪ್ರಕ್ರಿಯೆಯಲ್ಲಿ ಗುಂಪು ಗುಂಪಾಗಿ ಪರಿಷ್ಕರಣೆ ನಡೆದಿಲ್ಲ ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತರು ಹೇಳಿಕೆ ಗಮನಿಸಿದ್ದೇನೆ. ನಾನು, ಪ್ರಹ್ಲಾದ್ ಜೋಶಿ ಸೇರಿ ನಿಯೋಗ ಹೋಗಿ ದಾಖಲೆ ಸಮೇತ ದೂರು ಕೊಟ್ಟಿದ್ದೇವೆ. ರಾಮನಗರ, ಯಶವಂತಪುರ ಸೇರಿ ವಿವಿಧೆಡೆ ಗುಂಪು ಗುಂಪಾಗಿ ಎಸ್ ಐಆರ್ ಮಾಡಿರುವ ದಾಖಲೆಗಳನ್ನು ಸೇರಿಸಿ ಕೊಟ್ಟಿದ್ದೇವೆ. ಸರಿಯಾಗಿ ಎಸ್ ಐಆರ್ ನಡೆದಿದ್ದರೆ 35 ಬಿಇಓ ಗಳಿಗೆ ಯಾಕೆ ನೋಟಿಸ್ ಕೊಟ್ಟರು? ಎಂದು ಕೇಂದ್ರ ಸಚಿವರು ಪ್ರಶ್ನೆ ಮಾಡಿದರು.

Related Articles

Back to top button