*ಪೋಕ್ಸೋ ಆರೋಪಿಯ ಅಟ್ಟಹಾಸ: ದೂರು ನೀಡಿದ್ದಕ್ಕೆ ಸಂತ್ರಸ್ತೆ ಸೇರಿ 6 ಜನರನ್ನು ಬರ್ಬರವಾಗಿ ಹತ್ಯೆಗೈದು ಪರಾರಿಯಾದ ಕಿರಾತಕ*

ಪ್ರಗತಿವಾಹಿನಿ ಸುದ್ದಿ: ಪೋಕ್ಸೋ ಪ್ರಕರಣದಲ್ಲಿ ಜೈಲು ಸೇರಿ ಜಾಮೀನು ಪಡೆದು ಬಿಡುಗಡೆಯಾಗಿ ಬಂದಿದ್ದ ಆರೋಪಿಯೊಬ್ಬ ಸಂತ್ರಸ್ತ ಬಾಲಕಿ ಹಾಗೂ ಆಕೆಯ ಕುಟುಂಬ ಮತ್ತು ತನ್ನ ಹೆಂಡತಿ, ಇಬ್ಬರು ಮಕ್ಕಳು ಸೇರಿದಂತೆ 6 ಜನರನ್ನು ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿರುವ ಘಟನೆ ನಡೆದಿದೆ.
ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ನಲ್ಲಿ ಈ ಘಟನೆ ನಡೆದಿದೆ. ರಾಜ್ಕುಮಾರ್ (35) ಕೊಲೆ ಮಾಡಿರುವ ಪೋಕ್ಸೋ ಆರೋಪಿ. ಈತ ತನ್ನ ಪತ್ನಿ ಪಾರ್ವತಿ ಸರಿತಾ (30) ಹಾಗೂ 4 ಮತ್ತು 1 ವರ್ಷದ ಇಬ್ಬರು ಗಂಡು ಮಕ್ಕಳ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ. ಬಳಿಕ ಪೋಕ್ಸೊ ಕಾಯ್ದೆಯಡಿ ದೂರು ದಾಖಲಿಸಿದ್ದ 17 ವರ್ಷದ ಬಾಲಕಿಯ ಮನೆಗೆ ತೆರಳಿ, ಬಾಲಕಿಯ ತಾಯಿ ಹಾಗೂ ಅಜ್ಜಿಯನ್ನು ಹತ್ಯೆ ಮಾಡಿದ್ದಾನೆ. ಬಳಿಕ ಬಾಲಕಿಯನ್ನು ಕಾರಿನಲ್ಲಿ ನಿರ್ಜನ ಸ್ಥಳಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿ, ಹಲ್ಲೆ ನಡೆಸಿ ಕೊಲೆ ಮಾಡಿ ಶವ ಬಿಸಾಕಿ ಎಸ್ಕೇಪ್ ಆಗಿದ್ದಾನೆ.
ಬಾಲಕಿಯ ಮನೆಯಲ್ಲಿದ್ದ ಅಂಗವಿಕಲಳಾದ ಆಕೆಯ 20 ವರ್ಷದ ಸಹೋದರಿಗೆ ಯಾವುದೇ ಹಾನಿ ಮಾಡಿಲ್ಲ. ಕೊಲೆಗಳ ಬಳಿಕ ರಾಜ್ಕುಮಾರ್ ತನ್ನ ತಂದೆಗೆ ಕರೆ ಮಾಡಿ ಹತ್ಯೆಗಳ ಬಗ್ಗೆ ಮಾಹಿತಿ ನೀಡಿದ್ದಾನೆ. ಅಲ್ಲದೇ ತಾನೂ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದ. ಬಳಿಕ ತನ್ನ ಫೋನ್ ಸ್ವಿಚ್ ಆಫ್ ಮಾಡಿದ್ದು, ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನಾ? ಅಥವಾ ಇಲ್ಲವೇ ಎಂಬುದು ಇನ್ನೂ ದೃಢಪಟ್ಟಿಲ್ಲ.
ಆರೋಪಿ ಇರುವ ಸ್ಥಳದ ಬಗ್ಗೆ ಸುಳಿವು ಸಿಕ್ಕಿದೆ, ಶೀಘ್ರದಲ್ಲೇ ಅವನನ್ನು ಬಂಧಿಸುತ್ತೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತರುಣ್ ಜೋಶಿ ಮಾಹಿತಿ ನೀಡಿದ್ದಾರೆ.
ರಾಜ್ಕುಮಾರ್ ಮತ್ತು ಪಾರ್ವತಿ 2018 ರಲ್ಲಿ ಪ್ರೇಮ ವಿವಾಹವಾಗಿದ್ದರು. ದಂಪತಿ ಆರಂಭದಲ್ಲಿ ಗ್ರಾಮದ ಹೊರಗೆ ವಾಸಿಸುತ್ತಿದ್ದರು. ನಂತರ ಶಾಬಾದ್ ಮತ್ತು ದೇವಲಗುಡದಲ್ಲಿ ಹೊಂದಿದ್ದ ಮನೆಗಳಲ್ಲಿ ನೆಲೆಸಿದ್ದರು.
ಈ ವರ್ಷ ಮೇ ತಿಂಗಳಲ್ಲಿ ಅಪ್ರಾಪ್ತ ಬಾಲಕಿಯನ್ನು ಹಿಂಬಾಲಿಸಿ, ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ರಾಜ್ಕುಮಾರ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾದ ನಂತರ ಆರೋಪಿ ಪರಾರಿಯಾಗಿದ್ದ.
7 ವರ್ಷಗಳಿಗಿಂತ ಕಡಿಮೆ ಅವಧಿಯ ಶಿಕ್ಷೆಯ ಸೆಕ್ಷನ್ಗಳಲ್ಲಿ ಪ್ರಕರಣ ದಾಖಲಾಗಿದ್ದರಿಂದ, ಆರೋಪಿ 20,000 ರೂ. ವೈಯಕ್ತಿಕ ಬಾಂಡ್ ಮೇಲೆ ನಿರೀಕ್ಷಣಾ ಜಾಮೀನು ಪಡೆದಿದ್ದ. ರಾಜ್ಕುಮಾರ್ ವರ್ತನೆಯಲ್ಲಿ ಸಮಸ್ಯೆಗಳಿದ್ದವು. ಕುಟುಂಬದ ಸದಸ್ಯರು ಆತನ ಮಾನಸಿಕ ಸ್ಥಿತಿ ಸ್ಥಿರವಾಗಿಲ್ಲ ಎಂದು ಹೇಳಿದ್ದರು. ಆತನಿಗೆ ಜೂಜಾಟದ ಅಭ್ಯಾಸವೂ ಇತ್ತು. ಅಲ್ಲದೇ ಸಾಲದ ಸುಳಿಯಲ್ಲಿ ಸಿಲುಕಿದ್ದ. ಆತನನ್ನು ಹಲವು ಬಾರಿ ಕೌನ್ಸೆಲಿಂಗ್ಗಾಗಿ ಕರೆಯಾಲಾಗಿತ್ತು. ಆದರೆ ಆತ ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.




