Belagavi NewsBelgaum NewsKarnataka NewsLatest

*ಜ್ಞಾನೋಬಾ–ತುಕಾರಾಂ ಪಾಯಿ ದಿಂಡಿ ಸೋಹಳಾಗೆ ಚಾಲನೆ: ಭಕ್ತರ ಪಾದಯಾತ್ರೆ ಯಶಸ್ವಿಯಾಗಲಿ ಎಂದ ಲಕ್ಷ್ಮೀ ಹೆಬ್ಬಾಳಕರ್*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ಆಷಾಢ ಏಕಾದಶಿ ಅಂಗವಾಗಿ ಶ್ರೀಕ್ಷೇತ್ರ ಪಂಢರಪುರಕ್ಕೆ ತೆರಳುವ ವಾರಕರಿ ಭಕ್ತರ ಸಂಪ್ರದಾಯಿಕ ಪಾದಯಾತ್ರೆಯ ಅಂಗವಾಗಿ ಬೆಳಗಾವಿ ಗ್ರಾಮೀಣ ಭಾಗದ ವಾಘವಾಡೆ–ಸಾವಗಾಂವ ವ್ಯಾಪ್ತಿಯ ‘ಜಯ ರಾಮಕೃಷ್ಣ ಹರಿ ಸಾಂಪ್ರದಾಯಿಕ ವಾರಕರಿ ಸೇವಾ ಸಂಘ’ ವತಿಯಿಂದ ಆಯೋಜಿಸಲಾಗಿರುವ ಜ್ಞಾನೋಬಾ–ತುಕಾರಾಂ ಪಾಯಿ ದಿಂಡಿ ಸೋಹಳಾ ಹಾಗೂ ಭವ್ಯ ಪಾಲ್ಕಿ ಉತ್ಸವಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿಕಟಪೂರ್ವ ಸಚಿವೆ ಹಾಗೂ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರು ಶನಿವಾರ ಚಾಲನೆ ನೀಡಿದರು.


ಶ್ರೀ ಭುಜಂಗ ಮಹಾರಾಜ ಪಾಟೀಲ ಅವರ ದಿವ್ಯ ಸಾನ್ನಿಧ್ಯದಲ್ಲಿ, ನೂರಾರು ವಾರಕರಿ ಭಕ್ತರು, ಕೀರ್ತನಕಾರರು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಕಾರ್ಯಕ್ರಮ ನೆರವೇರಿತು. ಈ ಸಂದರ್ಭದಲ್ಲಿ ಶ್ರೀ ವಿಠ್ಠಲ–ರುಕ್ಮಿಣಿ ಅವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ, ಭಜನೆ, ಕೀರ್ತನೆ ಹಾಗೂ ನಾಮಸಂಕೀರ್ತನೆಯೊಂದಿಗೆ ಪಾಲ್ಕಿ ಉತ್ಸವಕ್ಕೆ ಚಾಲನೆ ನೀಡಲಾಯಿತು.


ಬಳಿಕ ಮಾತನಾಡಿದ ಲಕ್ಷ್ಮೀ ಹೆಬ್ಬಾಳಕರ್, ವಾರಕರಿ ಸಂಪ್ರದಾಯವು ಭಕ್ತಿ, ಶಿಸ್ತು, ಸಮಾನತೆ ಹಾಗೂ ಮಾನವೀಯ ಮೌಲ್ಯಗಳನ್ನು ಸಾರುವ ಶ್ರೇಷ್ಠ ಪರಂಪರೆಯಾಗಿದೆ. ಜ್ಞಾನೇಶ್ವರ ಮಹಾರಾಜರು ಮತ್ತು ಸಂತ ತುಕಾರಾಂ ಮಹಾರಾಜರ ಸಂದೇಶಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ. ಇಂತಹ ಆಧ್ಯಾತ್ಮಿಕ ಪಾದಯಾತ್ರೆಗಳು ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಭಕ್ತಿಭಾವವನ್ನು ಮತ್ತಷ್ಟು ಬಲಪಡಿಸುತ್ತವೆ ಎಂದು ಹೇಳಿದರು.


ಇಂದಿನಿಂದ ಶ್ರೀಕ್ಷೇತ್ರ ಪಂಢರಪುರದತ್ತ ಹೊರಟಿರುವ ಎಲ್ಲ ಭಕ್ತರ ಪಾದಯಾತ್ರೆ ಯಾವುದೇ ಅಡೆತಡೆಯಿಲ್ಲದೆ ಸುಖಕರವಾಗಿ ಹಾಗೂ ಮಂಗಳಕರವಾಗಿ ಪೂರ್ಣಗೊಳ್ಳಲಿ. ಶ್ರೀ ವಿಠ್ಠಲನ ಕೃಪೆ ಎಲ್ಲರ ಮೇಲೂ ಸದಾ ಇರಲಿ ಎಂದು ಅವರು ಶುಭ ಹಾರೈಸಿದರು.

Home add -Advt


ಕಾರ್ಯಕ್ರಮದಲ್ಲಿ ವಾರಕರಿ ಸಂತರು, ಭಕ್ತಾದಿಗಳು, ವಾಘವಾಡೆ, ಸಾವಗಾಂವ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಹಿರಿಯರು, ಜನಪ್ರತಿನಿಧಿಗಳು, ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಅಪಾರ ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು. ಭಜನೆ, ಕೀರ್ತನೆ ಮತ್ತು ವಿಠ್ಠಲ ನಾಮಸ್ಮರಣೆಯ ನಡುವೆ ನಡೆದ ಈ ಕಾರ್ಯಕ್ರಮ ಭಕ್ತಿಭಾವದಿಂದ ಕೂಡಿದ ಆಧ್ಯಾತ್ಮಿಕ ವಾತಾವರಣಕ್ಕೆ ಸಾಕ್ಷಿಯಾಯಿತು.

Related Articles

Back to top button