
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಡಿ.ಕೆ.ಶಿವಕುಮಾರ ನೇತೃತ್ವದ ಸಚಿವಸಂಪುಟ ವಿಸ್ತರಣೆಗೆ ಮಂಗಳವಾರವೇ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡುವ ಸಾಧ್ಯತೆ ಇದೆ.
ಮಂಗಳವಾರ ಬೆಳಗ್ಗೆಯೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ದೆಹಲಿಗೆ ತೆರಳುತ್ತಿದ್ದು, ಸಂಪುಟ ವಿಸ್ತರಣೆಗೆ ಹಸಿರುವ ನಿಶಾನೆ ಜೊತೆಗೆ, ನೂತನ ಸಚಿವರ ಪಟ್ಟಿಗೆ ಅಂತಿಮ ಮುದ್ರೆ ಒತ್ತುವ ಸಾಧ್ಯತೆ ಇದೆ.
ಡಿ.ಕೆ.ಶಿವಕುಮಾರ ಅವರ ಜೊತೆ ಕಳೆದ ತಿಂಗಳು 13 ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದು, ಇದೀಗ ಇನ್ನೂ 20 ಜನರು ಸೇರ್ಪಡೆಯಾಗಬೇಕಿದೆ. ಕಳೆದ ವಾರ ದೆಹಲಿಗೆ ಹೋಗಿ ರಾಹುಲ ಗಾಂಧಿ, ವೇಣುಗೋಪಾಲ ಮತ್ತು ಸುರ್ಜೇವಾಲಾ ಜೊತೆಗೆ ಚರ್ಚಿಸಿ ಬಂದಿರುವ ಮುಖ್ಯಮಂತ್ರಗಳು, ಮಂಗಳವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಮ್ಮುಖದಲ್ಲಿ ಎಲ್ಲ ಮುಖಂಡರೊಂದಿಗೆ ಚರ್ಚಿಸಿ ಅಂತಿಮ ಪಟ್ಟಿ ಪಡೆಯಲಿದ್ದಾರೆ.
ಮಂಗಳವಾರ ಬೆಳಗ್ಗೆ 8 ಗಂಟೆಗೆ ದೆಹಲಿ ವಿಮಾನ ಏರಲಿರುವ ಡಿ.ಕೆ.ಶಿವಕುಮಾರ ವಾಪಸ್ ಬರುವ ಕುರಿತು ಪ್ರವಾಸ ಪಟ್ಟಿಯಲ್ಲಿ ಉಲ್ಲೇಖಿಸಿಲ್ಲ. ಸಭೆಗಳು ಪೂರ್ಣಗೊಂಡರೆ ಸಂಜೆಯೇ ವಾಪಸ್ಸಾಗಲಿದ್ದಾರೆ. ಹಾಗಾದಲ್ಲಿ ಗುರುವಾರ ಅಥವಾ ಶುಕ್ರವಾರವೇ ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ.
ಒಟ್ಟಾರೆ, ಸಚಿವ ಸಂಪುಟ ಸೇರಲು ಬಹಳ ದಿನಗಳಿಂದ ಕಾಯುತ್ತಿರುವವರಿಗೆ ಮಂಗಳವಾರ ಸಂಜೆ ಇಲ್ಲವೇ ಬುಧವಾರ ಬೆಳಗ್ಗೆ ಶುಭ ಸುದ್ದಿ ಸಿಗುವ ಸಾಧ್ಯತೆ ಕಾಣುತ್ತಿದೆ.



