*ವಿಡಿಯೋ ಮಾಡಿ ಸಲಹೆ ನೀಡಿದರೆ ಏನೂ ಆಗಲ್ಲ; ಪ್ರಧಾನ್ ವಜಾವೊಂದೇ ಎಲ್ಲದಕ್ಕೂ ಪರಿಹಾರ ಎಂದ ರಾಹುಲ್ ಗಾಂಧಿ*

ಪ್ರಗತಿವಾಹಿನಿ ಸುದ್ದಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ವಿದ್ಯಾಅರ್ಥಿಗಳ ಭವಿಷ್ಯದ ನಾಶದ ಪ್ರತೀಕ. ಅವರ ರಾಜೀನಾಮೆ ಮಾತ್ರವಲ್ಲ ಸಚಿವ ಸಂಪುಟದಿಂದಲೇ ಅವರನ್ನು ವಜಾಗೊಳಿಸಬೇಕು ಎಂದು ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ರಾಹುಲ್ ಗಾಂಧಿ, ನೀಟ್ ಪರೀಕ್ಷಾ ಅಕ್ರಮ ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದರೆ ಅವರ ಮೇಲೆ ಲಾಠಿಚಾರ್ಜ್ ಮಾಡಲಾಗಿದೆ. ಪೆಲೆಟ್ ಗನ್ ದಾಳಿ ನಡೆಸಲಾಗಿದೆ. ವಿದ್ಯಾರ್ಥಿಗಳ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದಿಂದ ವಿದ್ಯಾರ್ಥಿಗಳ ಭವಿಷ್ಯವೇ ಹಾಳಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ವಿದ್ಯಾರ್ಥಿಗಳ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಮೂರು ಬೇಡಿಕೆಗಳನ್ನು ಇಟ್ಟಿದ್ದಾರೆ. ಬೇಡಿಕೆಗಳಲ್ಲಿ ಯಾವುದೇ ರಾಜಿಯಿಲ್ಲ. ಧರ್ಮೇಂದ್ರ ಪ್ರಧಾನ್ ಅವರನ್ನು ಕೇಂದ್ರ ಸಚಿವ ಸಂಪುಟದಿಂದ ವಜಾಗೊಳಿಸಬೇಕು. ಅವರನ್ನು ಶಿಕ್ಷಣ ಇಲಾಖೆಯಿಂದ ತೆಗೆದು ಹಾಕಿ ಬೇರೆ ಇಲಾಖೆಯಲ್ಲಿ ಮತ್ತೆ ಸಚಿವ ಸ್ಥಾನ ನೀಡಿದರೆ ಸಹಿಸಲ್ಲ. ಕೇಬಿನೆಟ್ ನಿಂದಲೇ ಅವರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಗಾಯಗೊಂಡ ವಿದ್ಯಾರ್ಥಿಗಳಿಗೆ ಚಿಕಿತ್ಸಾ ವೆಚ್ಚ, ಪರಿಹಾರ ನೀಡಬೇಕು ಎಂದು ಹೇಳಿದರು. ಇನ್ನು ಪ್ರಧಾನಿ ನರೇಂದ್ರ ಮೋದಿ ಮಧ್ಯ ರಾತ್ರಿ ವಿಡಿಯೋ ಸಂದೇಶ ಬಿಡುಗಡೆ ಮಾಡುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ನಿಮ್ಮ ಸಲಹೆಯಿಂದ ಏನೂ ಆಗುವುದಿಲ್ಲ. ವಿಡಿಯೋ ಮಾಡಿ ಸಲಹೆಗಳನ್ನು ಕೊಡಬೇಡಿ. ಮೊದಲು ಧರ್ಮೇಂದ್ರ ಪ್ರಧಾನ್ ಪ್ರಧಾನ್ ವಿರುದ್ಧ ಕ್ರಮ ಕೈಗೊಳ್ಳಿ. ಅವರನ್ನು ವಜಾಗೊಳಿಸುವುದೊಂದೇ ಎಲ್ಲದಕ್ಕೂ ಪರಿಹಾರ ಎಂದು ತಿಳಿಸಿದ್ದಾರೆ.




