
ಪ್ರಗತಿವಾಹಿನಿ ಸುದ್ದಿ: ಹುಲ್ಲಿನ ಮನೆಗೆ ಬಿದ್ದ ಬೆಂಕಿಯನ್ನು ನಂದಿಸಲು ಯತ್ನಿಸುತ್ತಿದ್ದಾಗ ಎಲ್‌ಪಿಜಿ ಸಿಲಿಂಡರ್ ಸ್ಫೋಟಗೊಂಡು, 15 ವರ್ಷದ ಬಾಲಕಿ ಸೇರಿದಂತೆ 10 ಜನರಿಗೆ ಗಂಭೀರವಾದ ಸುಟ್ಟ ಗಾಯಗಳಾಗಿವೆ.
ತಮಿಳುನಾಡಿನ ತಂಜಾವೂರು ಜಿಲ್ಲೆಯ ತಿರುಓಣಂ ಬಳಿಯ ಲಕ್ಷ್ಮಿಪುರಂ ಗ್ರಾಮದಲ್ಲಿ ಭೀಕರ ಅಗ್ನಿ ಅನಾಹುತ ಸಂಭವಿಸಿದೆ. ರೈತ ಮುರುಗಯನ್ ಎಂಬುವವರ ಕುಟುಂಬವು ತಮ್ಮ ಹುಲ್ಲಿನ ಮನೆಯಲ್ಲಿ ಮಲಗಿದ್ದಾಗ ಬೆಳಗಿನ ಜಾವ ಸುಮಾರು 2 ಗಂಟೆಯ ವೇಳೆಗೆ ಮನೆಗೆ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಯನ್ನು ಗಮನಿಸಿದ ನೆರೆಹೊರೆಯವರು ತಕ್ಷಣವೇ ಕುಟುಂಬಸ್ಥರನ್ನು ಮನೆಯಿಂದ ಸುರಕ್ಷಿತವಾಗಿ ಹೊರತರಲು ಸಹಾಯ ಮಾಡಿದ್ದಾರೆ. ಅಗ್ನಿಶಾಮಕ ವಾಹನ ಬರುವುದು ತಡವಾಗುತ್ತದೆ ಎಂದು ಸ್ಥಳೀಯರು ಬಕೆಟ್‌ಗಳಲ್ಲಿ ನೀರು ತಂದು ಬೆಂಕಿ ನಂದಿಸಲು ಮುಂದಾಗಿದ್ದಾರೆ. ಆದರೆ, ಅಡುಗೆಮನೆಯೊಳಗೆ ಸಿಲಿಂಡರ್ ಇರುವುದು ಯಾರಿಗೂ ತಿಳಿದಿರಲಿಲ್ಲ. ಜನರು ಬೆಂಕಿ ನಂದಿಸಲು ಯತ್ನಿಸುತ್ತಿದ್ದಾಗ ಸಿಲಿಂಡರ್ ಸ್ಫೋಟಗೊಂಡಿದೆ.
ಸ್ಫೋಟದ ತೀವ್ರತೆಗೆ ರೈತ ಮುರುಗಯನ್ ಹಾಗೂ ಅವರ 15 ವರ್ಷದ ಮಗಳು ಅಭಿನಯ ಸೇರಿದಂತೆ ಕಾಸಿನಾಥನ್, ರಾಜಶೇಖರ್, ಪಳನಿವೇಲ್, ವೆಂಬಯ್ಯನ್, ಕಲೈಯರಸಿ, ಭುವನೇಶ್ವರನ್, ಸೆಲ್ವರಾಜ್ ಮತ್ತು ಕಲಿಯಮ್ಮಾಳ್ ಸುಟ್ಟ ಗಾಯಗಳಿಂದ ನರಳಿದ್ದಾರೆ. ಕೆಲವರ ದೇಹ ಶೇಕಡಾ 80 ಕ್ಕಿಂತ ಹೆಚ್ಚು ಸುಟ್ಟುಹೋಗಿದೆ.
ಗಾಯಾಳುಗಳನ್ನು ತಕ್ಷಣವೇ ರಕ್ಷಿಸಿ ಮೂವರನ್ನು ಪಟ್ಟುಕೊಟ್ಟೈ ಸರ್ಕಾರಿ ಆಸ್ಪತ್ರೆಗೆ ಹಾಗೂ ತೀವ್ರ ಸುಟ್ಟ ಗಾಯಗಳಾಗಿರುವ 7 ಜನರನ್ನು ತಂಜಾವೂರು ವೈದ್ಯಕೀಯ ಕಾಲೇಜು ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿದೆ.
ತಿರುಓಣಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.



