Latest

*ಹೈಕಮಾಂಡ್ ಜೊತೆಗಿನ ಸಭೆ ಮುಕ್ತಾಯ: ಸಚಿವರ ಪಟ್ಟಿ ಬರುವುದು ಇನ್ನೂ ವಿಳಂಬ*

ಪ್ರಗತಿವಾಹಿನಿ ಸುದ್ದಿ, ನವದೆಹಲಿ : ರಾಜ್ಯ ಸಚಿವ ಸಂಪುಟ ವಿಸ್ತರಣೆ (Karnataka Cabinet Expansion) ಸಂಬಂಧ ನವದೆಹಲಿಯಲ್ಲಿ ಕಾಂಗ್ರೆಸ್ ವರಿಷ್ಟರ ಜೊತೆಗಿನ ಸಿಎಂ ಡಿ.ಕೆ.ಶಿವಕುಮಾರ, ಸಿದ್ದರಾಮಯ್ಯ ಹಾಗೂ ಬಿ.ಕೆ.ಹರಿಪ್ರಸಾದ ಸಭೆ ಮುಕ್ತಾಯವಾಗಿದೆ. ಆದರೆ ನೂತನ ಸಚಿವರ ಅಂತಿಮ ಪಟ್ಟಿ ಮಾತ್ರ ಕೈಗೆ ಸಿಕ್ಕಿಲ್ಲ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ರಾಹುಲ್ ಗಾಂಧಿ (Rahul Gandhi) ಉಪಸ್ಥಿತಿಯಲ್ಲಿ ಸಭೆ ನಡೆಯಿತು. ರಾಜ್ಯ ನಾಯಕರಲ್ಲದೆ ಕೆ.ಸಿ.ವೇಣುಗೋಪಾಲ ಮತ್ತು ರಣದೀಪ್ ಸಿಂಗ್ ಸುರ್ಜೇವಾಲಾ ಸಹ ಉಪಸ್ಥಿತರಿದ್ದರು. ಕರ್ನಾಟಕ ಸಚಿವಸಂಪುಟ ವಿಸ್ತರಣೆ ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು.

ಡಿಕೆ ಶಿವಕುಮಾರ್, ಸಿದ್ದರಾಮಯ್ಯ, ಬಿಕೆ ಹರಿಪ್ರಸಾದ್ ಸಲ್ಲಿಸಿರುವ ಪಟ್ಟಿಗಳನ್ನು ಪರಿಶೀಲಿಸಿದ ರಾಹುಲ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಕೆಸಿ ವೇಣುಗೋಪಾಲ್, ಸುರ್ಜೆವಾಲ ಅಭಿಪ್ರಾಯ ಪಡೆದರು. ಅಂತಿಮವಾಗಿ, 2-3 ದಿನಗಳಲ್ಲಿ ಪಟ್ಟಿಯನ್ನು ಕಳುಹಿಸಿಕೊಡುವುದಾಗಿ ರಾಹುಲ ಗಾಂಧಿ ತಿಳಿಸಿದರು. ಈ ಹಿನ್ನೆಲೆಯಲ್ಲಿ ರಾಜ್ಯ ನಾಯಕರೆಲ್ಲ ವಾಪಸ್ಸಾಗಿದ್ದಾರೆ.

ರಾಹುಲ್ ಗಾಂಧಿ ಅವರು ರಾಜ್ಯ ನಾಯಕರೊಂದಿಗಿನ ಸಭೆ ಬಳಿಕ ಖರ್ಗೆ, ಸುರ್ಜೆವಾಲ, ವೇಣುಗೋಪಾಲ್ ಜೊತೆ ಚರ್ಚೆ ಮುಂದುವರೆಸಿದ್ದು, ಪಟ್ಟಿ ಫೈನಲ್ ಮಾಡಿ ರವಾನಿಸುವ ಸಾಧ್ಯತೆಗಳಿವೆ. ಅಥವಾ ಕೆಸಿ ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೆವಾಲ ಅವರು  ಅಂತಿಮ ಪಟ್ಟಿಯೊಂದಿಗೆ ಭಾನುವಾರ ಬೆಂಗಳೂರಿಗೆ ಆಗಮಿಸಬಹುದು.  ಹಾಗಾಗಿ ನೂತನ ಸಚಿವ ಪಟ್ಟಿ ಇನ್ನೂ ನಿಗೂಢವಾಗಿದೆ.

Home add -Advt

ನಾಲ್ಕು ದಿನಗಳಿಂದ ದೆಹಲಿಯಲ್ಲೇ ಬೀಡು ಬಿಟ್ಟಿದ್ದ ಸಿಎಂ ಡಿಕೆ ಶಿವಕುಮಾರ್ ರಾತ್ರಿಯೇ ಬೆಂಗಳೂರಿಗೆ ವಾಪಸ್ ಆಗಲಿದ್ದು, ಆಗಸ್ಟ್ 3ರಂದು ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮ ನಡೆಯುವ ಸಾಧ್ಯತೆಗಳಿವೆ.

ಸಚಿವ ಸ್ಥಾನದ ಮೇಲೆ ಕಣ್ಣಿಟ್ಟು ದೆಹಲಿಗೆ ತೆರಳಿದ್ದ ರಾಜ್ಯದ ಶಾಸಕರಿಗೆ ಸಹ ಬೆಂಗಳೂರಿಗೆ ಮರಳುವಂತೆ ಸೂಚಿಸಲಾಗಿದೆ.

Related Articles

Back to top button