
ಜವಾಬ್ದಾರಿ ನೀಡುವ ಜಿಲ್ಲೆಗಳಿಗೆ ಹೋಗಿ ಅತಿವೃಷ್ಟಿ, ಅನಾವೃಷ್ಟಿ ಬಗ್ಗೆ ಪರಿಶೀಲಿಸಿ ವರದಿ ನೀಡಲು ನೂತನ ಸಚಿವರಿಗೆ ಸೂಚನೆ: ಸಿಎಂ ಡಿ ಕೆ ಶಿವಕುಮಾರ್
ಸಚಿವ ಸಂಪುಟ ಸಭೆಯಲ್ಲಿ ನಮ್ಮ ಮುಂದಿರುವ ಸವಾಲುಗಳ ಬಗ್ಗೆ ಚರ್ಚೆ
ಎಲ್ಲ ಪಕ್ಷದ ಜನಪ್ರತಿನಿಧಿಗಳನ್ನು ಕರೆದುಕೊಂಡು ಹೋಗಿ ಪರಿಶೀಲಿಸಲು ಸೂಚನೆ
ಹೊಸ ಮುಖಗಳಿಗೆ ಅವಕಾಶ
ಮಹಿಳೆಯರಿಗೂ ಅವಕಾಶ ನೀಡುತ್ತೇವೆ, ಮಹಿಳೆಯರಿಲ್ಲದೇ ನಮ್ಮ ಪಕ್ಷವಿಲ್ಲ
ಸಿದ್ದರಾಮಯ್ಯ ಅವರಿಗೆ ಯಾವುದೇ ಅಸಮಾಧಾನವಿಲ್ಲ, ನಾವೆಲ್ಲ ಒಂದಾಗಿ ಕೆಲಸ ಮಾಡುತ್ತಿದ್ದೇವೆ
ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ತಮಿಳುನಾಡಿಗೆ ಕಾನೂನು ಮೂಲಕವೇ ಉತ್ತರ
ಬೆಂಗಳೂರು :
“ಬುಧವಾರದಿಂದಲೇ ನೂತನ ಸಚಿವರುಗಳು ತಮಗೆ ಜವಾಬ್ದಾರಿ ವಹಿಸುವ ಜಿಲ್ಲೆಗಳಿಗೆ ಹೋಗಿ ಅತಿವೃಷ್ಟಿ ಹಾಗೂ ಅನಾವೃಷ್ಟಿ ಬಗ್ಗೆ ಅಲ್ಲಿನ ಸ್ಥಳಗಳಿಗೆ ಹೋಗಿ, ಪರಿಶೀಲನೆ ಮಾಡಬೇಕು. ನಂತರ ಕಂದಾಯ ಸಚಿವರಿಗೆ ವರದಿ ಸಲ್ಲಿಸಬೇಕು ಎಂದು ಸಚಿವ ಸಂಪುಟ ಸಭೆಯಲ್ಲಿ ನಿರ್ದೇಶನ ನೀಡಲಾಗಿದೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಮಾಹಿತಿ ನೀಡಿದರು.
ವಿಧಾನಸೌಧದಲ್ಲಿ ಸೋಮವಾರ ನಡೆದ ಸಚಿವ ಸಂಪುಟ ಸಭೆ ಬಳಿಕ ಶಿವಕುಮಾರ್ ಅವರು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.
ನಮ್ಮ ಮುಂದಿರುವ ಸವಾಲುಗಳ ಬಗ್ಗೆ ಚರ್ಚೆ:
“ನಮ್ಮ ಮುಂದಿರುವ ಸವಾಲು, ಎದುರಾಗಬಹುದಾದ ಸಮಸ್ಯೆಗಳ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ. ಬರಗಾಲ ಹಾಗೂ ಕಾವೇರಿ ಭಾಗದ ಪ್ರದೇಶದಲ್ಲಿ ನೀರಿನ ಸಮಸ್ಯೆ ಬಗ್ಗೆ ಚರ್ಚೆ ಮಾಡಿದ್ದೇವೆ. ಈಗ ತಾತ್ಕಾಲಿಕವಾಗಿ ಮಳೆಯಿಂದ ಸಮಸ್ಯೆ ನಿವಾರಣೆಯಾಗಿರಬಹುದು. ಭೀಕರವಾದ ಕಂಟಕ ಎದುರಾಗಿತ್ತು. ದೇವರ ಕೃಪೆಯಿಂದ ಇದು ಸಧ್ಯಕ್ಕೆ ನಿವಾರಣೆಯಾಗಿದೆ. ತಮಿಳುನಾಡಿಗೆ 3,50 ಕ್ಯೂಸೆಕ್ ನೀರು ಹರಿಸುವಂತೆ ಹೇಳಿದ್ದು, ನಾವು 30 ಸಾವಿರ ಕ್ಯೂಸೆಕ್ಸ್ ನೀರು ಹರಿಸುವಂತಾಗಿದೆ. ಕೆಆರ್ ಎಸ್, ಹೇಮಾವತಿ ತುಂಬಿಲ್ಲ, ಒಳಹರಿವು ಹೆಚ್ಚಿದೆ. ಮಲೆನಾಡಿನಲ್ಲಿ ಮಳೆ ಬೀಳುತ್ತಿದ್ದು, ತುಂಗಭದ್ರಾಗೆ ಇನ್ನು ನೀರು ಬರಬೇಕು. ಆಲಮಟ್ಟಿಯಲ್ಲಿ ನೀರಿನ ಹರಿವು ಇದೆ. ಬರಗಾಲದ ಛಾಯೆ ಇನ್ನು ಇದೆ. ಮಳೆಯಿಂದಾಗಿ ಶಿವಮೊಗ್ಗ, ತೀರ್ಥಹಳ್ಳಿ ಭಾಗದಲ್ಲಿ ಅನಾಹುತಗಳು ಆಗಿವೆ. ನಾನು ವರದಿ ತರಿಸಿಕೊಂಡು ಪರಿಹಾರ ನೀಡಲಾಗುವುದು” ಎಂದು ತಿಳಿಸಿದರು.
ಎಲ್ಲ ಪಕ್ಷದ ಜನಪ್ರತಿನಿಧಿಗಳನ್ನು ಕರೆದುಕೊಂಡು ಹೋಗಿ ಪರಿಶೀಲಿಸಲು ಸೂಚನೆ
“ಸಚಿವ ಸಂಪುಟ ವಿಸ್ತರಣೆಯಾಗುವ ಹಿನ್ನೆಲೆಯಲ್ಲಿ ಸ್ಥಳೀಯ ನಾಯಕರಿಂದ ಪರಿಹಾರ ಘೋಷಣೆ ಮಾಡಿಸಲು ತೀರ್ಮಾನಿಸಿದ್ದೇವೆ. ನಾಳೆ ಒಂದು ದಿನ ಹೊರತುಪಡಿಸಿ ನಾಡಿದ್ದಿನಿಂದ ನೀವುಗಳು ನಿಮಗೆ ಜವಾಬ್ದಾರಿ ವಹಿಸುವ ಜಿಲ್ಲೆಗಳಿಗೆ ಹೋಗಿ, ಅತಿವೃಷ್ಟಿ ಹಾಗೂ ಅನಾವೃಷ್ಟಿ ಬಗ್ಗೆ ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಬೇಕು. ನಂತರ ಕಂದಾಯ ಸಚಿವರಿಗೆ ವರದಿ ನೀಡಬೇಕು. ವಿರೋಧ ಪಕ್ಷದ ನಾಯಕರು ಅಧಿವೇಶನ ನಡೆಸಲು ಬಿಡುವುದಿಲ್ಲ ಎಂದು ಹೇಳುತ್ತಿದ್ದಾರೆ. ಅವರು ಕಂದಾಯ ಸಚಿವರಾಗಿದ್ದವರು. ಸಾಕಷ್ಟು ಅನುಭವಸ್ಥರು. ಅವರಿಗೆ ಸಮಯ ಬಂದಾಗ ಉತ್ತರ ನೀಡೋಣ. ನಾನು ಈಗಾಗಲೇ ಬೆಳಗಾವಿ, ಚಿತ್ರದುರ್ಗ, ಕಲಬುರ್ಗಿ ವಿಭಾಗಗಳಲ್ಲಿ ಸಭೆ ಮಾಡಿದ್ದು, ಮೈಸೂರು ವಿಭಾಗದ ಸಭೆಯನ್ನು ಶೀಘ್ರವೇ ಮಾಡಲಾಗುವುದು. ಎಲ್ಲರ ಸಲಹೆ ಪಡೆಯಲಾಗಿದ್ದು, ಕುಡಿಯುವ ನೀರಿನ ಉದ್ದೇಶಕ್ಕೆ ಪ್ರತಿ ವಿಧಾನಸಭೆಗೆ 1 ಕೋಟಿ ಅನುದಾನ ನೀಡಲಾಗಿದೆ. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಹೋಗಿ ವರದಿ ನೀಡಬೇಕು. ನಂತರ ಸರ್ಕಾರ ತೀರ್ಮಾನ ಮಾಡಲಿದೆ. ಎಲ್ಲಾ ಪಕ್ಷದ ಜನಪ್ರತಿನಿಧಿಗಳನ್ನು ಕರೆದುಕೊಂಡು ಹೋಗಿ ಪರಿಶೀಲನೆ ಮಾಡಬೇಕು ಎಂದು ಸೂಚನೆ ನೀಡಲಾಗಿದೆ” ಎಂದು ಮಾಹಿತಿ ನೀಡಿದರು.
ಹೊಸ ಮುಖಗಳಿಗೆ ಅವಕಾಶ
“ಸುಮಾರು 2 ಗಂಟೆಗಳ ಕಾಲ ಸಚಿವ ಸಂಪುಟದ ನೂತನ ಸದಸ್ಯರಿಗೆ ಮಾರ್ಗದರ್ಶನ ನೀಡಿದ್ದೇವೆ. ನಮ್ಮಲ್ಲಿ ಸಾಕಷ್ಟು ಹಿರಿಯ ನಾಯಕರಿದ್ದರೂ ನಾವು ಈ ಬಾರಿ ಹೊಸ ಮುಖಗಳಿಗೆ ಅವಕಾಶ ನೀಡಿದ್ದೇವೆ. ನಾನು ಹಾಗೂ ಪರಮೇಶ್ವರ್ ಅವರು ಮೊದಲ ಬಾರಿಗೆ ಶಾಸಕರಾಗಿ ಮಂತ್ರಿಯಾಗಿದ್ದೇವೆ. ಕೆಲವು ಸಂದರ್ಭದಲ್ಲಿ ನಮ್ಮನ್ನು ಸಚಿವರನ್ನಾಗಿ ಮಾಡಿದ್ದಾರೆ. ಕೆಲವೊಮ್ಮೆ ಮಾಡಿಲ್ಲ. ನಾವು ಅಲ್ಲಿಂದ ಇಲ್ಲಿಯವರೆಗೆ ಬಂದು ಈ ಸ್ಥಾನ ತಲುಪಿದ್ದೇವೆ. ಇಂದು 19 ಸದಸ್ಯರು ಸಂಪುಟ ಸೇರ್ಪಡೆಯೊಂದಿಗೆ ವಿಸ್ತರಣೆಯಾಗಿದೆ. ನಮ್ಮಲ್ಲಿ ಅನೇಕ ಅರ್ಹರು ಇದ್ದರು. ನಮ್ಮಲ್ಲಿ ಅರ್ಹತೆ ಇಲ್ಲದವರು ಯಾರೂ ಇಲ್ಲ. ನಮ್ಮ ಪಕ್ಷ ತೀರ್ಮಾನ ಮಾಡಿ ಒಂದು ನಿರ್ಧಾರಕ್ಕೆ ಬಂದಿದ್ದಾರೆ. ನಾನು ಹಾಗೂ ಪರಮೇಶ್ವರ್ ಅವರು ಬಂದಾಗ, ವೀರೇಂದ್ರ ಪಾಟೀಲ್ ಅವರು ಸಿಎಂ ಆಗಿದ್ದರು. ಆಗ ಬಂಗಾರಪ್ಪನವರು ಸಚಿವ ಸಂಪುಟದಲ್ಲಿ ಇರಲಿಲ್ಲ. ಮಲ್ಲಿಕಾರ್ಜುನ ಖರ್ಗೆ, ಧರಂ ಸಿಂಗ್, ಲಕ್ಕಪ್ಪನವರು ಇರಲಿಲ್ಲ. ಎಸ್ ಎಂ ಕೃಷ್ಣ ಅವರ ಕಾಲದಲ್ಲಿ ಅಜೀಜ್ ಸೇಠ್ ಅವರು ಸಂಪುಟದಲ್ಲಿ ಸ್ಥಾನ ಪಡೆಯಲು ಆಗಿರಲಿಲ್ಲ. ಆಸೆ ಎಲ್ಲರಿಗೂ ಇರುತ್ತದೆ, ತಾಳ್ಮೆಯಿಂದ ಇದ್ದರೆ ನಾವು ಎಲ್ಲೆಲ್ಲಿ ಸಾಧ್ಯವೋ ಅಲ್ಲಿ ಅವಕಾಶ ನೀಡಲಾಗುವುದು. ನಾನು ಹಾಗೂ ಪರಮೇಶ್ವರ್ ಅವರು ನಮ್ಮ ಶಾಸಕರ ಜೊತೆ ಚರ್ಚೆ ಮಾಡುತ್ತೇವೆ. ಎಲ್ಲರಿಗೂ ಗೌರವ ನೀಡುತ್ತೇವೆ” ಎಂದು ವಿವರಿಸಿದರು.
ಮಹಿಳೆಯರಿಗೂ ಅವಕಾಶ ನೀಡುತ್ತೇವೆ
“ನಂತರ ಧರಂ ಸಿಂಗ್ ಅವರ ಕಾಲದಲ್ಲಿ ನನ್ನನ್ನು ಹಾಗೂ ಪರಮೇಶ್ವರ್ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡಿರಲಿಲ್ಲ. ನಾವು ಬಹಳ ತಾಳ್ಮೆಯಿಂದ ಇದ್ದೆವು. ನಮ್ಮ ತಾಳ್ಮೆಗೆ ಇಂದು ಪಕ್ಷ ನನ್ನನ್ನು ಮುಖ್ಯಮಂತ್ರಿ ಮಾಡಿದೆ, ಪರಮೇಶ್ವರ್ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಿದೆ.ಇರೋದು 33 ಸ್ಥಾನ ಮಾತ್ರ. ಕೃಷ್ಣಾ ಅವರ ಕಾಲದಲ್ಲೇ ಎಷ್ಟು ಜನ ಬೇಕೋ ಅಷ್ಟು ಜನರನ್ನು ಮಂತ್ರಿ ಮಾಡುವ ಕಾಲ ಮುಗಿದಿದೆ. ಕೇವಲ 15%ಗೆ ಮಿತಿ ಹಾಕಲಾಗಿದೆ. ಮೇಲ್ಮನೆಯಿಂದ ಒಬ್ಬರು ಕಡ್ಡಾಯವಾಗಿ ಇರಲಿದೆ. ಮಹಿಳೆಯರಿಗೆ ಸ್ಥಾನ ಸಿಕ್ಕಿಲ್ಲ ಎಂಬ ಪ್ರಶ್ನೆಯೂ ನಿಮ್ಮಲ್ಲಿ ಮೂಡಬಹುದು. ಆ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಅದನ್ನು ನಾವು ಮಾಡುತ್ತೇವೆ. ನಮ್ಮ ಪಕ್ಷದ ಸಿದ್ಧಾಂತ ಮಹಿಳೆಗೆ ಆದ್ಯತೆ ನೀಡುವುದು. ಈ ಹಿಂದೆಯೂ ಮಹಿಳೆಯರು ಇದ್ದರು, ಈಗ ಮಹಿಳೆಗೆ ಉಪಸಭಾಪತಿ ಸ್ಥಾನ ನೀಡಿದ್ದೇವೆ. ಸಚಿವ ಸಂಪುಟದಲ್ಲೂ ಒಂದು ಸ್ಥಾನ ಮಹಿಳೆಯರಿಗೆ ನೀಡಲಾಗುವುದು” ಎಂದು ಭರವಸೆ ನೀಡಿದರು.
ಪ್ರಶ್ನೋತ್ತರ:
ಸಿದ್ದರಾಮಯ್ಯ ಅವರಿಗೆ ಯಾವುದೇ ಅಸಮಾಧಾನವಿಲ್ಲ
ಸಚಿವ ಸಂಪುಟ ವಿಸ್ತರಣೆಗೆ ಸಿದ್ದರಾಮಯ್ಯ ಅವರ ಗೈರಾಗಿದ್ದು, ಅವರಿಗೆ ಅಸಮಾಧಾನವಾಗಿದೆಯೇ ಎಂದು ಕೇಳಿದಾಗ, “ನಾನು, ಸಿದರಾಮಯ್ಯ ಅವರು ಸೇರಿ ಚರ್ಚೆ ಮಾಡಿ ತೀರ್ಮಾನ ಮಾಡಿದ್ದೇವೆ. ಇಂದು ಅವರ ಜನ್ಮದಿನ. ಅವರಿಗೆ ಅನೇಕ ಅತಿಥಿಗಳು ಶುಭಕೋರುತ್ತಿದ್ದಾರೆ. ನಾನು ಶುಭ ಕೋರಿದ್ದೇನೆ. ನಾವೆಲ್ಲರೂ ಒಂದು ತಂಡ 139 ಶಾಸಕರೂ ಒಂದು ತಂಡವಾಗಿ ಕೆಲಸ ಮಾಡುತ್ತಿದ್ದೇವೆ. ಸಿದ್ದರಾಮಯ್ಯ ಅವರು ಯಾಕೆ ಅಸಮಾಧಾನಗೊಳ್ಳುತ್ತಾರೆ? ನಾನು ಸೇರಿದಂತೆ ಎಲ್ಲರೂ ಸಿದ್ದರಾಮಯ್ಯನವರ ಕಡೆಯವರೆ. ನಾವು ಒಂದಾಗಿದ್ದೇವೆ, ಒಂದಾಗಿರುತ್ತೇವೆ, ಒಂದಾಗಿ ಹೋರಾಟ ಮಾಡುತ್ತೇವೆ. ನೀವುಗಳು ಹೊಸದಾಗಿ ಹುಡುಕುತ್ತಿದ್ದೀರಿ. ಅನೇಕರು ಅವರನ್ನು ಭೇಟಿ ಮಾಡುತ್ತಿರುತ್ತಾರೆ. ಸಚಿವ ಸ್ಥಾನ ಸಿಗದವರ ಜತೆಗೂ ಅವರು ಮಾತನಾಡುತ್ತಿರುತ್ತಾರೆ. ಅವರು ನಮ್ಮ ಪಕ್ಷದ ಕೆಲಸವನ್ನು ಮಾಡುತ್ತಿದ್ದಾರೆ” ಎಂದು ಪ್ರಶ್ನಿಸಿದರು.
ನೀವು ಸಿದ್ದರಾಮಯ್ಯ ಅವರೊಂದಿಗೆ ಮಾತನಾಡಿದ್ದೀರಾ ಎಂದು ಕೇಳಿದಾಗ, “ಖಂಡಿತವಾಗಿ ಮಾತನಾಡಿದ್ದೇನೆ. ಒಟ್ಟು ಐದು ಬಾರಿ ಚರ್ಚೆ ಮಾಡಿದ್ದೇನೆ” ಎಂದರು.
ಪಟ್ಟಿ ಬದಲಾವಣೆ ಮಾಡಿದ್ದೇಕೆ ಎಂದು ಕೇಳಿದಾಗ, “ಹೈಕಮಾಂಡ್ ನಿಂದ ಬಂದ ಮಾರ್ಗದರ್ಶನವನ್ನು ನಾವು ಪಾಲಿಸುತ್ತೇವೆ” ಎಂದು ತಿಳಿಸಿದರು.
ಗಾಯತ್ರಿ ಅವರ ವಿಚಾರವಾಗಿ ಕೇಳಿದಾಗ, “ನಮ್ಮ ಪಕ್ಷದಲ್ಲಿ ಕೆಲವು ತಾಂತ್ರಿಕ ವಿಚಾರಗಳಿವೆ. ಅವರು ಇನ್ನು ಪ್ರಮಾಣವಚನ ಸ್ವೀಕರಿಸಬೇಕಾಗಿದೆ. ನಿಮಗೆ ಬಂದಿರುವ ಎಲ್ಲಾ ಪಟ್ಟಿ ಅಧಿಕೃತವಲ್ಲ. ನಾನು ಸಹಿ ಹಾಕಿ ರಾಜ್ಯಪಾಲರಿಗೆ ಕೊಟ್ಟ ಪಟ್ಟಿ ಮಾತ್ರ ಅಧಿಕೃತ. ಹೈಕಮಾಂಡ್ ನನಗೆ ತಿಳಿಸುವ ಪಟ್ಟಿ ಅಂತಿಮ. ನಮ್ಮಲ್ಲಿ ಕೆಲವು ಮಾಹಿತಿ ಲೀಕ್ ಮಾಡಿದ್ದು, ಅಂತಿಮವಲ್ಲ” ಎಂದರು.
“ನಾವು ಎಷ್ಟು ಬಾರಿ ಬೇಕಾದರೂ ಹೆಸರು ಬದಲಾಯಿಸಬಹುದು. ಕಳೆದ 20 ದಿನಗಳಿಂದ ಸಚಿವರ ಪಟ್ಟಿಯಲ್ಲಿ ಎಷ್ಟು ಜನರನ್ನು ತೋರಿಸಿದ್ದೀರಿ. ನಾಲ್ಕು ಸಚಿವಸಂಪುಟ ಮಾಡುವಷ್ಟು ಜನರನ್ನು ತೋರಿಸಿದ್ದೀರಿ” ಎಂದರು.
ವೈದ್ಯ ಅವರು ಸೇರಿದಂತೆ ಅಸಮಾಧಾನಿತರನ್ನು ಹೇಗೆ ಸಮಾಧಾನ ಮಾಡುತ್ತೀರಿ ಎಂದು ಕೇಳಿದಾಗ, “ವೈದ್ಯ ಬಹಳ ಹಿಂದಿನಿಂದಲೂ ನನ್ನ ಜೊತೆಯಲ್ಲಿದ್ದಾರೆ” ಎಂದರು.
ಯಶವಂತರಾಯಗೌಡ ಅವರು ರಾಜೀನಾಮೆ ಸಲ್ಲಿಸಿದ್ದು, ನಾಳೆ ಬೇಳೂರು ಗೋಪಾಲ ಕೃಷ್ಣಾ ಅವರು ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ ಎಂದು ಕೇಳಿದಾಗ, “ಅವರಿಗೂ ನೋವಾಗಿರುತ್ತದೆ. ನನಗೆ ನೋವಾಗಿರಲಿಲ್ಲವೇ? ನನಗೆ, ಪರಮೇಶ್ವರ್ ಅವರಿಗೂ ನೋವಾಗಿತ್ತು” ಎಂದರು.
ಮಹಿಳೆಯರಿಗೆ ಸ್ಥಾನ ಸಿಕ್ಕಿಲ್ಲ ಎಂದು ಕೇಳಿದಾಗ, “ಮಹಿಳೆಯರಿಗೆ ಸ್ಥಾನ ಕೊಟ್ಟೆ ಕೊಡುತ್ತೇವೆ. ಮಹಿಳೆಯರಿಲ್ಲದೆ ನಮ್ಮ ಪಕ್ಷವೇ ಇಲ್ಲ” ಎಂದರು.
ಖಾತೆ ಹಂಚಿಕೆ ವಿಳಂಬದ ಬಗ್ಗೆ ಬಿಜೆಪಿ ಟೀಕೆ ಬಗ್ಗೆ ಕೇಳಿದಾಗ, “ಯಡಿಯೂರಪ್ಪ ಅವರ ಸರ್ಕಾರದ ಇತಿಹಾಸವನ್ನು ನೀವೇ ಸ್ವಲ್ಪ ಹೇಳಿ. ಅವರ ಸರ್ಕಾರ ರಚನೆಯಾಗಿದ್ದಾಗ ಒಬ್ಬರೇ ಸರ್ಕಾರ ಮಾಡಲಿಲ್ಲವೇ” ಎಂದು ಕೇಳಿದರು.
ನಾಗೇಂದ್ರ ಅವರ ವಿರುದ್ಧ ಪ್ರಕರಣವಿದ್ದರೂ ಸಚಿವ ಸ್ಥಾನ ನೀಡಲಾಗಿದೆ ಎಂದು ಕೇಳಿದಾಗ, “ನನ್ನ ಮೇಲೂ ಪ್ರಕರಣ ದಾಖಲಿಸಿದ್ದರು. ನಮ್ಮ ಪಕ್ಷ ನನ್ನನ್ನು ಮುಖ್ಯಮಂತ್ರಿಯನ್ನಾಗಿ ಮಾಡಿಲ್ಲವೇ? ನನ್ನನ್ನು ಕೇಸ್ ಹಾಕಿ ಜೈಲಿಗೆ ಹಾಕಿರಲಿಲ್ಲವೇ?” ಎಂದರು.
ಖಾತೆಗಳು ಬದಲಾವಣೆಯಾಗುತ್ತವೆಯೇ ಎಂದು ಕೇಳಿದಾಗ, “ಪಕ್ಷದ ಹೈಕಮಾಂಡ್ ಏನು ಹೇಳುತ್ತದೆಯೋ ಅದನ್ನಷ್ಟೇ ಕೇಳುತ್ತೇವೆ” ಎಂದು ತಿಳಿಸಿದರು.
ರಾಮಲಿಂಗಾ ರೆಡ್ಡಿ ಅವರಿಗೆ ಖಾತೆ ಬದಲಾವಣೆ ಮಾಡಿಕೊಡುವ ಬಗ್ಗೆ ಕೇಳಿದಾಗ, “ನನ್ನ ಹಾಗೂ ರಾಮಲಿಂಗಾ ರೆಡ್ಡಿ ಅವರದ್ದು 40 ವರ್ಷಗಳ ಸ್ನೇಹ. ನಾನು ಅವರೊಂದಿಗೆ ಮಾತನಾಡಿದ್ದೇನೆ. ಅವರು ನಿಮ್ಮ ಹತ್ತಿರ ಏನು ಮಾತನಾಡಿದ್ದಾರೊ, ನನ್ನ ಹತ್ತಿರ ಏನು ಮಾತನಾಡಿದ್ದಾರೆ ನನಗೆ ಗೊತ್ತಿದೆ” ಎಂದರು.
ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ತಮಿಳುನಾಡಿಗೆ, ಕಾನೂನು ಮೂಲಕವೇ ಉತ್ತರ
ತಮಿಳುನಾಡು ನ್ಯಾಯಾಲಯದ ಮೆಟ್ಟಿಲೇರಿರುವ ಬಗ್ಗೆ ಕೇಳಿದಾಗ, “ಕಾವೇರಿ ವಿಚಾರದಲ್ಲಿ ತಮಿಳುನಾಡು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಕಾನೂನು ತಜ್ಞರ ಜೊತೆ ಚರ್ಚೆ ಮಾಡಿ ಅವರಿಗೆ ಕಾನೂನು ಮೂಲಕ ಉತ್ತರ ನೀಡಲಾಗುವುದು. ಕಾವೇರಿ ವಿಚಾರದಲ್ಲಿ ತಮಿಳುನಾಡು ನ್ಯಾಯಾಲಯದ ಮೇಟ್ಟಿಲೇರಿದೆ ಎಂಬ ಮಾಹಿತಿ ಬಂದಿದೆ. ನಾನು ಅವರ ಹಕ್ಕನ್ನು ಪ್ರಶ್ನೆ ಮಾಡುವುದಿಲ್ಲ. ಆದರೆ ನಾನು ದೇಶದ ಕಾನೂನನ್ನು ಗೌರವಿಸಿದ್ದೇವೆ. ನಾವು ಎಲ್ಲಾ ಪಕ್ಷಗಳನ್ನು ವಿಶ್ವಾಸಕ್ಕೆ ಪಡೆಯಬೇಕು ಎಂದು ತಕ್ಷಣವೇ ತೀರ್ಮಾನ ಮಾಡಲಿಲ್ಲ. ನಮಗೆ ಬಿಜೆಪಿ ಹಾಗೂ ಜೆಡಿಎಸ್ ಸಹಕಾರ ನೀಡಿವೆ. ಈ ವಿಚಾರದಲ್ಲಿ ಇಡೀ ಕರ್ನಾಟಕ ಒಗ್ಗಟ್ಟಾಗಿ ನಿಂತಿದೆ. ಭವಿಷ್ಯದಲ್ಲೂ ಅವರು ನಮ್ಮ ಜೊತೆ ನಿಲ್ಲುತ್ತಾರೆ ಎಂಬ ವಿಶ್ವಾಸ ನನಗಿದೆ. ಸಹಕಾರ ನೀಡಿರುವ ನಮ್ಮ ರಾಜ್ಯದ ನಾಯಕರಿಗೆ ಧನ್ಯವಾದ ಅರ್ಪಿಸುತ್ತೇನೆ. ಪ್ರಹ್ಲಾದ್ ಜೋಷಿ ಅವರು ಸಂಸದರ ನಿಯೋಗವನ್ನು ಕೇಂದ್ರ ಸಚಿವರ ಬಳಿಗೆ ಕೊಂಡೊಯ್ದಿದ್ದು ಮನವಿ ಮಾಡಿದ್ದಾರೆ. ವರುಣ ದೇವರ ಕೃಪೆ ಕೂಡ ನಮ್ಮ ಮೇಲಿದೆ. ನಾವು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶವನ್ನು ಕಾನೂನು ಚೌಕಟ್ಟಿನಲ್ಲಿ ಪಾಲನೆ ಮಾಡುತ್ತಿದ್ದೇವೆ. ಕಾವೇರಿ ನೀರು ನಿಯಂತ್ರಣ ಸಮಿತಿ ಹಾಗೂ ನಿರ್ವಹಣಾ ಪ್ರಾಧಿಕಾರ 15 ದಿನಗಳಿಗೊಮ್ಮೆ ಸಭೆ ಮಾಡಲಿದ್ದು, ಪರಿಸ್ಥಿತಿ ಅನುಗುಣವಾಗಿ ತೀರ್ಮಾನ ಮಾಡಲಿವೆ. ನಾವು ಅವರಿಗೆ ಪರಿಸ್ಥಿತಿ ವಿವರಿಸುತ್ತೇವೆ” ಎಂದು ತಿಳಿಸಿದರು.
CM DK Shivakumar urges patience over Cabinet expansion, says women will get representation
Bengaluru
Karnataka Chief Minister D K Shivakumar on Monday appealed to legislators to remain patient over ministerial berths, asserting that all Congress MLAs were capable of serving as ministers and assuring that women would be given representation in the Cabinet.
Addressing reporters after chairing a nearly two-hour Cabinet meeting with the newly inducted ministers, Shivakumar said he had issued guidelines to the ministers and directed them to begin work immediately.
“I have asked all the ministers to begin their work from tomorrow itself. There are a lot of capable people. We have 136 MLAs, and all of them are eligible. The party has taken a decision and entrusted us with this responsibility,” he said.
Referring to dissatisfaction among some legislators left out of the Cabinet, Shivakumar said deserving leaders had missed out on ministerial positions in the past as well.
“There were times when even I was not inducted into the Cabinet, but we all waited patiently. I request all my friends to be patient,” he said.
Responding to questions on meetings held by disappointed MLAs after the Cabinet expansion and the absence of women ministers, the Chief Minister said the government would address those concerns.
“We will do the needful on those matters. We will also give representation to women. If there are no women, then our party is incomplete,” he said.
On reports of differences within the Congress, Shivakumar dismissed speculation and stressed that the party leadership was united.
“We have all sat together and decided. It was his birthday. We are one team. I am also a follower of Siddaramaiah,” he said.
The Chief Minister said the Cabinet also discussed the Cauvery water dispute and the prevailing drought situation in the state.
Referring to the ongoing legal battle over the Cauvery river water-sharing issue, Shivakumar said Karnataka had the backing of leaders across party lines.
“I know Tamil Nadu has moved the Supreme Court. I don’t want to question that. I took the all-party leaders into confidence. All of them stand with us. They stand with the entire state. All Union ministers, MPs and opposition leaders support us. Even the rain god supported us,” he said.



