*ರಾಯರೇ ಆ ಹುಡುಗಿಯಿಂದ ಕಾಪಾಡಿ: ಬೆಳಗಾವಿಯಲ್ಲಿ ವಿಚಿತ್ರ ಘಟನೆ ಬೆಳಕಿಗೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: “ರಾಯರೇ ಆ ಹುಡುಗಿಯಿಂದ ನಮ್ಮನ್ನು ಕಾಪಾಡಿ” ಎಂದು ಯುವಕ ಪತ್ರ ಬರೆದು ಹುಂಡಿಯಲ್ಲಿ ಹಾಕಿ ಹೋಗಿರುವ ವಿಚಿತ್ರ ಘಟನೆ ನಡೆದಿದೆ.
ರಾಮದುರ್ಗದ ಪಡಕೋಟಗಲ್ಲಿಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಇತ್ತಿಚೆಗೆ ಹುಂಡಿ ಎಣಿಕೆ ಮಾಡುವಾಗ ಈ ರೀತಿಯ ವಿಚಿತ್ರ ಪತ್ರವೊಂದು ಪತ್ತೆಯಾಗಿದೆ.
ಪತ್ರದಲ್ಲಿ ಏನಿದೆ..?
ಪತ್ರದಲ್ಲಿ ಶ್ರೀ ಗಣಪತಿಯೇ ನಮಃ, ಓಂ ಶ್ರೀ ರಾಘವೇಂದ್ರಾಯ ನಮಃ, ರಾಯರೇ ನಮ್ಮನ್ನು ಆ ವಿಷದಿಂದ ಕಾಪಾಡು, ರಾಯರೇ ಆ ಹುಡುಗಿಯಿಂದ ನಮ್ಮನ್ನು ಕಾಪಾಡಿ, ರಾಯರೇ ಈ ಕಷ್ಟದಿಂದ ನಮ್ಮನ್ನು ಕಾಪಾಡಿ, ರಾಯರಿದ್ದಾರೆ ನಮ್ಮ ಜೊತೆ, ಹೀಗಾಗಿ ಅವರಲ್ಲಿ ನನ್ನ ಕಷ್ಟವನ್ನು ಕೇಳಿಕೊಳ್ಳುತ್ತಿದ್ದೇನೆ. ಗುರುಗಳೇ ಆದಿಶಕ್ತಿ ದೇವಿ, ತಂದೆ, ತಾಯಿ ಕಾಪಾಡು. ಧನ್ಯವಾದಗಳು ಅಂತಾ ಪತ್ರದಲ್ಲಿ ಬರೆಯಲಾಗಿದೆ.
ಪತ್ರ ಬರೆದಿರುವ ವ್ಯಕ್ತಿಯ ಹೆಸರು, ವಿಳಾಸ ಸೇರಿ ಯಾವುದೇ ಮಾಹಿತಿಯು ಪತ್ರದಲ್ಲಿ ಉಲ್ಲೇಖವಾಗಿಲ್ಲ. ಆದ್ದರಿಂದ ಪತ್ರ ಬರೆದವರು ಯಾರು ಎಂಬುದು ತಿಳಿದುಬಂದಿಲ್ಲ. ಆದರೆ, ಈ ಅಪರೂಪದ ಮನವಿ ಪತ್ರ ಮಠದ ಸಿಬ್ಬಂದಿ ಹಾಗೂ ಭಕ್ತರನ್ನು ಚಕಿತಗೊಳಿಸಿದೆ. ಅಷ್ಟೇ ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲೂ ಚರ್ಚೆಗೆ ಗ್ರಾಸವಾಗಿದೆ.
ಈ ಘಟನೆ ಕುರಿತು ಮಠದ ಉತ್ಸವ ಕಮೀಟಿ ಗೌರವಾಧ್ಯಕ್ಷ ಪವನ ದೇಶಪಾಂಡೆ ಮಾಹಿತಿ ನೀಡಿದ್ದು, ಪ್ರತಿ ಸಲದಂತೆ ನಾವು ಹುಂಡಿ ತೆಗೆದು, ಎಣಿಕೆ ಶುರು ಮಾಡಿದೇವು. ಆಗ ಈ ರೀತಿ ಪತ್ರ ಸಿಕ್ಕಿದ್ದು ನಮಗೆ ಆಶ್ಚರ್ಯ ತಂದಿದೆ. ಸಾಮಾನ್ಯವಾಗಿ ಎಲ್ಲ ಭಕ್ತರು ದೇವರಲ್ಲಿ ಆರೋಗ್ಯ, ಐಶ್ವರ್ಯ, ನೆಮ್ಮದಿ ಕರುಣಿಸುವಂತೆ ಪ್ರಾರ್ಥಿಸುತ್ತಾರೆ. ಆದರೆ, ಯಾರೋ ಅನಾಮಿಕ ವ್ಯಕ್ತಿ ಈ ರೀತಿ ದೇವರಲ್ಲಿ ಕೇಳಿಕೊಂಡಿರುವುದು ವಿಚಿತ್ರ ಸಂಗತಿ. ಇದು ನಮ್ಮ ಮಠದಲ್ಲಿ ನಡೆದ ಮೊದಲ ಪ್ರಕರಣ. ಪತ್ರ ಬರೆದವರು ಯಾರು ಅಂತಾ ಗೊತ್ತಾಗಿಲ್ಲ ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




