*ಎಸ್ಐಆರ್: ಜಾತಿ ಪ್ರಮಾಣ ಪತ್ರ ವಿತರಣಾ ಸಿಬ್ಬಂದಿಗೆ ತರಬೇತಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ನಮೂನೆ ಭರ್ತಿಗೆ ಅಗತ್ಯವಾದ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದಂತೆ ಜಾತಿ ಪ್ರಮಾಣ ಪತ್ರ ವಿತರಣೆಗಾಗಿ ತಂತ್ರಾಂಶದ ಯಾಪ್ನಲ್ಲಿ ಕಾರ್ಯನಿರ್ವಹಿಸುವ ಕುರಿತು ಅಂಗನವಾಡಿ ಹಾಗೂ ಪಾಲಿಕೆ ಆರೋಗ್ಯ ಶಾಖೆ ಸಿಬ್ಬಂದಿಗೆ ತಾಲೂಕು ಆಡಳಿತ ಮತ್ತು ಪಾಲಿಕೆಯಿಂದ ಬುಧವಾರ ಕುಮಾರ ಗಂಧರ್ವ ರಂಗಮಂದಿರದಲ್ಲಿ ತರಬೇತಿ ಆಯೋಜಿಸಲಾಗಿತ್ತು.
ತರಬೇತಿಯಲ್ಲಿ ಭಾಗವಹಿಸಿದ ಸಿಬ್ಬಂದಿಗೆ ಮಾಹಿತಿ ನೀಡಿ ಮಾತನಾಡಿದ, ಪಾಲಿಕೆಯ ಆಡಳಿತ ವಿಭಾಗದ ಉಪ ಆಯುಕ್ತ, ಉತ್ತರ ವಿಧಾನಸಭಾ ಕ್ಷೇತ್ರದ ಸ. ಮತದಾರರ ನೋಂದಣಾಧಿಕಾರಿ ಉದಯಕುಮಾರ್ ಟಿ.ಬಿ. ಅವರು, ಮತದಾರರು ಎಸ್ಐಆರ್ ಪ್ರಕ್ರಿಯೆ ಪೂರೈಸಲು 12 ದಾಖಲಾತಿಗಳನ್ನು ಒದಗಿಸಬೇಕಾಗಿದ್ದು, ಮ್ಯಾಪಿಂಗ್, ಪ್ರೊಜನಿ ಆಗದೆ ಇರುವ, 2002 ರ ಮತದಾರ ಪಟ್ಟಿಯ ದಾಖಲಾತಿಯಲ್ಲಿಲ್ಲದ ಮುಂತಾದ ಸಮಸ್ಯೆಗಳಿರುವ ಮತದಾರರ ದಾಖಲಾತಿಗೆ ಪೂರಕವಾಗಿ ಸರ್ಕಾರದ ಆದೇಶದಂತೆ ಜಾತಿ ಪ್ರಮಾಣ ಪತ್ರ ನೀಡಲಾಗುತ್ತಿದೆ.
ಬೆಳಗಾವಿ ತಾಲೂಕಿಗೆ 3 ಲಕ್ಷ ಜಾತಿ ಪ್ರಮಾಣ ಪತ್ರ ಹಾಗೂ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಉತ್ತರ ಮತ್ತು ದಕ್ಷಿಣ ವಿಧಾನಸಭಾ ಕ್ಷೇತ್ರದ 58 ವಾರ್ಡ್ ಗಳ ಮತದಾರರಿಗೆ
26,000 ಜಾತಿ ಪ್ರಮಾಣ ಪತ್ರ ಹಂಚಿಕೆ ಆಗಬೇಕಾಗಿದೆ. ಈ ಪ್ರಮಾಣ ಪತ್ರವನ್ನು ಎಸ್ ಐ ಆರ್ ನಮೂನೆಗೆ ಬಳಸಿಕೊಳ್ಳುವ ಕಾರ್ಯ ಆಪ್ ಮೂಲಕ ನಡೆಯಬೇಕಾಗಿರುವುದರಿಂದ ಈ ಕಾರ್ಯದ ಜವಾಬ್ದಾರಿ ನೀಡಲಾಗಿರುವ ಅಂಗನವಾಡಿ ಮೇಲ್ವಿಚಾರಕರು, ಶಿಕ್ಷಕೀಯರು ಹಾಗೂ ಪಾಲಿಕೆಯ ಆರೋಗ್ಯ ಶಾಖೆ ಸಿಬ್ಬಂದಿಯು
ತರಬೇತಿಯಲ್ಲಿ ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳಬೇಕು. ಈ ಕುರಿತು ಯಾವುದೇ ರೀತಿಯ ಗೊಂದಲಗಳು ಸಂಶಯಗಳು ಇದ್ದರೆ ಮೇಲಾಧಿಕಾರಿಗಳಿಂದ ಮಾಹಿತಿ ಪಡೆದು ಪರಿಹರಿಸಿಕೊಳ್ಳಬೇಕೆಂದು ಹೇಳಿದರು.
ತರಬೇತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ತಹಸೀಲ್ದಾರ ಹಣಮಂತ ಶಿರಹಟ್ಟಿ ಅವರು ಮಾತನಾಡಿ, ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯಬಾರದು ಎನ್ನುವ ಹಿನ್ನೆಲೆಯಲ್ಲಿ ಸರ್ಕಾರ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ಎಲ್ಲ ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಲಾಗಿದ್ದು, ಜವಾಬ್ದಾರಿಯಿಂದ ನಿಗದಿತ ಅವಧಿಯಲ್ಲಿ ಕಾರ್ಯನಿರ್ವಹಿಸಬೇಕೆಂದು ಹೇಳಿದರು.
ಸಿಡಿಪಿಓ ಅನೀಲ ಕುಮಾರ, ಪಾಲಿಕೆಯ ಪರಿಸರ ಅಭಿಯಂತರ ಹಣಮಂತ ಕಲಾದಗಿ, ಕಂದಾಯ ನಿರೀಕ್ಷಕ ಚಂದ್ರಶೇಖರ ಹೊಂಕಾಳಿ ಸೇರಿದಂತೆ ಇತರೆ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.



