Karnataka NewsLatestPolitics

*ಬಸವರಾಜ ಹೊರಟ್ಟಿ ಅವರ ಹೃದಯ ವೈಶಾಲ್ಯತೆ ಶ್ಲಾಘನೀಯ: ಸಿಎಂ ಡಿ.ಕೆ.ಶಿವಕುಮಾರ್*

ಹೊರಟ್ಟಿ ರಾಜೀನಾಮೆ ಅಂಗೀಕಾರ

ಪ್ರಗತಿವಾಹಿನಿ ಸುದ್ದಿ: “ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ಅವರು ರಾಜಿನಾಮೆ ನೀಡಿದ್ದು, ಅದನ್ನು ಅಂಗೀಕರಿಸಲಾಗಿದೆ. ಬದಲಿ ವ್ಯವಸ್ಥೆ ಆಗುವವರೆಗೂ ಅವರನ್ನೇ ಈ ಸ್ಥಾನದಲ್ಲಿ ಮುಂದುವರಿಸಬೇಕು ಎಂದು ರಾಜ್ಯಪಾಲರಿಗೆ ಪತ್ರ ಬರೆದಿದ್ದೇನೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.

Home add -Advt

ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಶಿವಕುಮಾರ್ ಅವರು ಶುಕ್ರವಾರ ಪ್ರತಿಕ್ರಿಯೆ ನೀಡಿದರು.

“ಪ್ರಸಕ್ತ ರಾಜಕೀಯ ಬೆಳವಣಿಗೆ ಗಮನದಲ್ಲಿಟ್ಟುಕೊಂಡು ಬಸವರಾಜ ಹೊರಟ್ಟಿ ಅವರು ತಮ್ಮ ರಾಜೀನಾಮೆ ನೀಡಿದ್ದಾರೆ. ಅವರಿಗೆ ಧನ್ಯವಾದ ಅರ್ಪಿಸುತ್ತೇನೆ. ಹೊರಟ್ಟಿ ಅವರು ದೇಶದ ವಿಧಾನ ಪರಿಷತ್ ಇತಿಹಾಸದಲ್ಲೇ ಅತ್ಯಂತ ಹಿರಿಯ ನಾಯಕರು. ಅವರು ತಮ್ಮ ಹೃದಯ ವೈಶಾಲ್ಯತೆ ತೋರಿದ್ದಾರೆ. ಅದು ಮೆಚ್ಚುವಂತದ್ದು. ಆಗಸ್ಟ್ 13 ರಂದು ವಿಧಾನಮಂಡಲ ಅಧಿವೇಶನ ಆರಂಭವಾಗಲಿದ್ದು, 14 ರಂದು ನೂತನ ಉಪಸಭಾಪತಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ನಂತರ ಉಪಸಭಾಪತಿಗಳ ಮೂಲಕ ಸಭಾಪತಿಗಳ ಚುನಾವಣೆ ನಡೆಯಲಿದೆ” ಎಂದು ತಿಳಿಸಿದರು.

ಇದಕ್ಕೂ ಮುನ್ನ ಬಸವರಾಜ ಹೊರಟ್ಟಿ ಅವರೊಂದಿಗೆ ವಿಧಾನಸೌಧದಲ್ಲಿ ಚರ್ಚೆ ನಡೆಸಿದ್ದ ಶಿವಕುಮಾರ್ ಅವರು, “ವಿಧಾನ ಪರಿಷತ್ತಿನ ಅಧ್ಯಕ್ಷ, ಉಪಾಧ್ಯಕ್ಷರನ್ನ ಆಯ್ಕೆ ಮಾಡಿ ನಂತರ ನಮ್ಮ ಸದಸ್ಯರೆಲ್ಲರಿಗೂ ಕೃತಜ್ಞತೆ ಸಲ್ಲಿಸುವ ಆಸೆಯನ್ನು ಬಸವರಾಜ ಹೊರಟ್ಟಿಯವರು ಇಟ್ಟುಕೊಂಡಿದ್ದಾರೆ. ಅವರ ಭಾವನೆಗಳನ್ನು ನಾವು ಒಪ್ಪಿಕೊಂಡಿದ್ದೇವೆ, ಗೌರವಿಸುತ್ತೇವೆ” ಎಂದರು.

ಹೊರಟ್ಟಿ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ವಿಚಾರ ಇತ್ತಲ್ಲ ಎಂದು ಕೇಳಿದಾಗ, “ನಾವುಗಳೇ ಒಂದು ಒಪ್ಪಂದಕ್ಕೆ ಬಂದ ಮೇಲೆ ಮುಂದೇನಿದೆ? ಅವಿಶ್ವಾಸ ನಿರ್ಣಯ ಮಂಡನೆ ಅಪ್ರಸ್ತುತ. ಈಗ ಅವರೇ ರಾಜೀನಾಮೆ ನೀಡಿದ್ದಾರೆ. ಈಗ ರಾಜೀನಾಮೆ ಅಂಗೀಕರಿಸಿದರೂ ಅವರನ್ನೇ ಹಂಗಾಮಿ‌ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕಿದೆ” ಎಂದರು.

“ರಾಜೀನಾಮೆ ನೀಡುತ್ತೇನೆ ಎಂದು ಹೊರಟ್ಟಿ ಅವರು ದೇಶದ ಮುಂದೆಯೇ ಹೇಳಿರುವಾಗ ಆ ವಿಚಾರವೇ ಬಾರದು. ಬಸವರಾಜ ಹೊರಟ್ಟಿ ಅವರು ಶಿಸ್ತಿನ ಮನುಷ್ಯ. ಅವರು ಸಭಾಪತಿ ಸ್ಥಾನಕ್ಕೆ ನೀಡಿದಷ್ಟು ಗೌರವವವನ್ನು ಯಾರೂ ನೀಡಿಲ್ಲ. ಎಲ್ಲಾ ಸಂದರ್ಭದಲ್ಲೂ ಸರ್ಕಾರದ ಗೌರವ ಕಾಪಾಡಿಕೊಂಡು ಬಂದಿದ್ದಾರೆ. ನಮಗೆಲ್ಲರಿಗೂ ಅವರ ಬಗ್ಗೆ ಹೆಮ್ಮೆಯಿದೆ” ಎಂದರು.

ಇದುವರೆಗೂ ಸಭಾಪತಿಗಳ ಬದಲಾವಣೆಯಾಗಿರಲಿಲ್ಲ ಎಂದು ಬಿಜೆಪಿಯವರು ಆರೋಪ ಮಾಡುತ್ತಿದ್ದಾರೆ ಎಂದು ಕೇಳಿದಾಗ, “ಅವರು ಬೇರೆ ರಾಜ್ಯಗಳಲ್ಲಿ ಏನೆಲ್ಲಾ ಮಾಡಿದ್ದಾರೆ ಪಟ್ಟಿ ನೀಡಲೇ? ನಾನು ಅವರ ಬಗ್ಗೆ ಮಾತನಾಡುವುದಿಲ್ಲ. ಇದು ನಮ್ಮ ಹಾಗೂ ಹೊರಟ್ಟಿ ಅವರ ನಡುವಣ ವಿಚಾರ. ಶೆಟ್ಟರ್ ಅವರು ಇದ್ದಾಗ, ಹೊರಟ್ಟಿ ಅವರನ್ನು ಸಭಾಪತಿ ಮಾಡಿದಾಗ ನಡೆದ ಘಟನೆ ಏನು? ಮರೆತು ಹೋಯಿತೇ? ಮಾಧ್ಯಮಗಳಲ್ಲಿ ಅವುಗಳ ದೃಶ್ಯಾವಳಿ ಇರಬೇಕಲ್ಲವೇ, ಮರುಪ್ರಸಾರ ಮಾಡಿ” ಎಂದರು.

ಪ್ರಶ್ನೋತ್ತರ

ಕೃಷ್ಣಪ್ಪ ಅವರು ಸಚಿವ ಸ್ಥಾನ ಬೇಕೇಬೇಕು ಎಂದು ಕೇಳುತ್ತಿದ್ದಾರೆ ಎಂದು ಕೇಳಿದಾಗ, “ತಪ್ಪೇನಿಲ್ಲ, ಎಲ್ಲರೂ ಕೇಳುತ್ತಾರೆ” ಎಂದರು.

ನೀವು ಎಂ ಸಿ ಸುಧಾಕರ್ ಹಾಗೂ ಇತರರಿಗೆ ಕರೆ ಮಾಡಿ, ಸಚಿವರನ್ನು ಕರೆಸಿಕೊಂಡು ಸಮಾಧಾನ ಮಾಡಿದ್ದೀರಲ್ಲವೇ ಎಂದು ಕೇಳಿದಾಗ, “ಯಾರಿಗೂ ಅಸಮಾಧಾನವಿಲ್ಲ. ಕೆಲವು ಹಿರಿಯ ನಾಯಕರಿರುತ್ತಾರೆ. ಅವರಿಗೆ ಜವಾಬ್ದಾರಿ ನೀಡಬೇಕಾಗುತ್ತದೆ. ನಾವು ಎಲ್ಲವನ್ನು ಬಗೆಹರಿಸುತ್ತೇವೆ” ಎಂದು ತಿಳಿಸಿದರು.

ಮಹಿಳಾ ಸಚಿವರ ಆಯ್ಕೆ ಯಾವಾಗಎಂದಾಗ, “ನಿಮಗೆ ಮಾಹಿತಿ ನೀಡಿಯೇ ಅವರಿಗೆ ಪ್ರಮಾಣವಚನ ನೀಡಲಾಗುವುದು” ಎಂದರು.

ಸಂಪುಟದಲ್ಲಿ ಸಣ್ಣ ಸರ್ಜರಿಯಾಗುತ್ತದೆ ಎಂಬ ಚರ್ಚೆ ಇದೆ ಎಂದು ಕೇಳಿದಾಗ, “ಮಾಧ್ಯಮಗಳಿಗೆ ಸರ್ಜರಿ ಮಾಡಬೇಕು ಎಂದುಕೊಂಡಿದ್ದೇವೆ” ಎಂದು ಚಟಾಕಿ ಹಾರಿಸಿದರು.

ಖಾತೆ ಹಂಚಿಕೆ ವಿಳಂಬವಾಗುತ್ತಿದೆ ಎಂದು ಕೇಳಿದಾಗ, “ಯಡಿಯೂರಪ್ಪ ಅವರು ಏಕಾಂಗಿಯಾಗಿ ಎಷ್ಟು ದಿನ ಸರ್ಕಾರ ನಡೆಸಿದರು? ದೆಹಲಿಯಲ್ಲಿ ಎಷ್ಟು ದಿನ ಸರ್ಕಾರ ನಡೆಯಿತು?” ಎಂದು ಪ್ರಶ್ನಿಸಿದರು.

2028ಕ್ಕೆ ಪಕ್ಷವನ್ನು ಅಧಿಕಾರಕ್ಕೆ ತರುವುದೇ ಎಲ್ಲರ ಅಜೆಂಡವೇ ಎಂದು ಕೇಳಿದಾಗ, “ಎಲ್ಲರೂ ಒಪ್ಪಿದ್ದಾರೆ, ನೀವು (ಮಾಧ್ಯಮಗಳು) ಒಪ್ಪಿದ್ದೀರ?” ಎಂದರು.

ನಾಗೇಂದ್ರ ಅವರು ರಾಜಿನಾಮೆ ನೀಡಬೇಕು ಎಂದು ಬಿಜೆಪಿ ಆಗ್ರಹಿಸಿದೆ ಎಂದು ಕೇಳಿದಾಗ, “ಒಳ್ಳೆಯದು ಮಾಡಲಿ” ಎಂದರು.

ಬಿಡದಿ ಟೌನ್ ಶಿಪ್ ವಿಚಾರದಲ್ಲಿ 9ರಿಂದ ಪಾದಯಾತ್ರೆ ಮಾಡಲು ಮುಂದಾಗಿದ್ದಾರೆ ಎಂದು ಕೇಳಿದಾಗ, “ಅವರು ರಾಜಕೀಯ ಅಜೆಂಡಾ ಮಾಡುತ್ತಿದ್ದಾರೆ. ನಾನು ರೈತರ ಅಭಿಪ್ರಾಯ ಕೇಳಲು ಸಮಿತಿ ಮಾಡಿದ್ದೇನೆ. ಎರಡು ಹೆಸರು ಚರ್ಚೆಯಲ್ಲಿದೆ. ಅವರು ನಮಗೆ ಒಂದು ತಿಂಗಳಲ್ಲಿ ವರದಿ ನೀಡುತ್ತಾರೆ. ಅವರು ಮಾಡುವುದನ್ನು ತಪ್ಪು ಎಂದು ಹೇಳುವುದಿಲ್ಲ. ಅವರು ಮಾಡುವುದು ಮಾಡಲಿ. ನಾನಂತೂ ಯಾರಿಂದಲೂ ಬಲವಂತವಾಗಿ ಭೂಸ್ವಾಧೀನ ಮಾಡಲ್ಲ ಎಂದು ಹೇಳಿದ್ದೇನೆ. ಕಾನೂನು ಪ್ರಕಾರ ಮುಂಚೆಯಿಂದ ಯಾವ ಸಂಪ್ರದಾಯವಿದೆ ಅದನ್ನು ಮುಂದುವರಿಸಿಕೊಂಡು ಹೋಗುತ್ತೇವೆ” ಎಂದರು.

ನನ್ನ ಖಾತೆ ನನ್ನ ಹಕ್ಕು ನಿರೀಕ್ಷಿತ ಮಟ್ಟದಲ್ಲಿ ಯಶ ಕಂಡಿಲ್ಲ ಎಂದು ಕೇಳಿದಾಗ, “ಎಸ್ಐಆರ್ ವಿಚಾರದಲ್ಲಿ ಅಧಿಕಾರಿಗಳು ನಿರತರಾಗಿದ್ದು, 15 ದಿನಗಳ ನಂತರ ನಾವು ಅಭಿಯಾನ ಮಾಡುತ್ತೇವೆ” ಎಂದರು.

1.10 ಕೋಟಿ ಮತದಾರರ ಹೆಸರನ್ನು ಮತಪಟ್ಟಿಯಿಂದ ತೆಗೆಯಲಾಗುತ್ತಿದೆ ಎಂದು ಕೇಳಿದಾಗ “ಎಸ್ಐಆರ್ ಪ್ರಕ್ರಿಯೆ ಮುಗಿಯಲಿ ಆನಂತರ ಮಾತನಾಡುತ್ತೇನೆ. ಈಗ ಈ ವಿಚಾರ ಬೇಡ, ಪ್ರತ್ಯೇಕವಾಗಿ ಮಾತನಾಡುವೆ” ಎಂದರು.

Related Articles

Back to top button