*ಜೈಲಲ್ಲೂ ಮೊಬೈಲ್: ಪ್ರಜ್ವಲ್ ರೇವಣ್ಣ ಮೇಲೆ ನಡೆದ ದಾಳಿಯಲ್ಲಿ ಪೆನ್ಡ್ರೈವ್ನಲ್ಲಿ 70ಕ್ಕೂ ಹೆಚ್ಚು ಅಶ್ಲೀಲ ವಿಡಿಯೋ ಪತ್ತೆ*

ಪ್ರಗತಿವಾಹಿನಿ ಸುದ್ದಿ: ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಸೆಲ್ನಲ್ಲಿ ಮೊಬೈಲ್ ಫೋನ್, ಪೆನ್ಡ್ರೈವ್ ಸೇರಿದಂತೆ ಹಲವು ವಸ್ತುಗಳು ಪತ್ತೆಯಾಗಿರುವ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ.
ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಸೂಚನೆ ಮೇರೆಗೆ ಸಿಸಿಬಿ ಅಧಿಕಾರಿಗಳು ನಡೆಸಿದ ದಿಢೀರ್ ತಪಾಸಣೆಯಲ್ಲಿ ಈ ವಸ್ತುಗಳು ಪತ್ತೆಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಲಾಗಿದೆ.
ಮಂಗಳವಾರ ಸಿಸಿಬಿ ಅಧಿಕಾರಿಗಳು ಪ್ರಜ್ವಲ್ ರೇವಣ್ಣ ಅವರ ಸೆಲ್ಗೆ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದಾಗ ಮೊಬೈಲ್ ಫೋನ್, ಚಾರ್ಜರ್, ನೋಟ್ಬುಕ್ ಹಾಗೂ ಪೆನ್ಡ್ರೈವ್ ಪತ್ತೆಯಾಗಿವೆ ಎನ್ನಲಾಗಿದೆ. ಪೆನ್ಡ್ರೈವ್ನಲ್ಲಿ 70ಕ್ಕೂ ಹೆಚ್ಚು ಅಶ್ಲೀಲ ವಿಡಿಯೋಗಳು ಇದ್ದವು ಎಂದು ತನಿಖಾ ಮೂಲಗಳು ತಿಳಿಸಿವೆ.
ಮೊಬೈಲ್ ಫೋನ್ನಲ್ಲಿ ವಾಟ್ಸ್ಆ್ಯಪ್, ಫೇಸ್ಬುಕ್, ಇನ್ಸ್ಟಾಗ್ರಾಂ, ನೆಟ್ಫ್ಲಿಕ್ಸ್ ಸೇರಿದಂತೆ ಹಲವು ಆ್ಯಪ್ಗಳು ಬಳಕೆಯಾಗಿರುವುದು ಪತ್ತೆಯಾಗಿದೆ ಎನ್ನಲಾಗಿದೆ. ಅಲ್ಲದೆ, ಗೇಮಿಂಗ್ ಆ್ಯಪ್ ಹಾಗೂ ಡೌನ್ಲೋಡ್ ಮಾಡಲಾಗಿದ್ದ ವಿಡಿಯೋಗಳ ಬಗ್ಗೆಯೂ ತನಿಖಾಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ.
ಜೈಲಿನಿಂದಲೇ ಮೊಬೈಲ್ ಬಳಕೆ?
ಜೈಲು ನಿಯಮಗಳನ್ನು ಉಲ್ಲಂಘಿಸಿ ಪ್ರಜ್ವಲ್ ರೇವಣ್ಣ ಮೊಬೈಲ್ ಬಳಸುತ್ತಿದ್ದರು ಎಂಬ ಆರೋಪದ ಹಿನ್ನೆಲೆಯಲ್ಲಿ ಸಿಸಿಬಿ ತನಿಖೆ ಮುಂದುವರಿಸಿದೆ. ಜೈಲಿನೊಳಗೆ ಮೊಬೈಲ್ ಹೇಗೆ ತಲುಪಿತು, ಅದನ್ನು ಬಳಸಲು ಯಾರಾದರೂ ನೆರವು ನೀಡಿದ್ದಾರೆಯೇ ಮತ್ತು ಈ ವ್ಯವಹಾರದಲ್ಲಿ ಜೈಲು ಸಿಬ್ಬಂದಿಯ ಪಾತ್ರವಿದೆಯೇ ಎಂಬ ಅಂಶಗಳನ್ನೂ ಪರಿಶೀಲಿಸಲಾಗುತ್ತಿದೆ.
ಈ ನಡುವೆ, ಜೈಲಿನಿಂದಲೇ ಪ್ರಜ್ವಲ್ ರೇವಣ್ಣ ಮೊಬೈಲ್ನಲ್ಲಿ ಮಾತನಾಡುತ್ತಿರುವಂತೆ ಕಾಣಿಸುವ 17 ಸೆಕೆಂಡ್ಗಳ ವಿಡಿಯೋವೊಂದು ಬಹಿರಂಗವಾಗಿದ್ದು, ಅದು ಪ್ರಕರಣದ ತನಿಖೆಗೆ ಮತ್ತಷ್ಟು ಮಹತ್ವ ಪಡೆದಿದೆ. ಜಪ್ತಿ ಮಾಡಲಾಗಿರುವ ಪೆನ್ಡ್ರೈವ್ ಹಾಗೂ ಇತರ ಡಿಜಿಟಲ್ ಸಾಧನಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಅವುಗಳಲ್ಲಿರುವ ಮಾಹಿತಿಯನ್ನು ಪರಿಶೀಲಿಸಲಾಗುತ್ತಿದೆ. ಪೆನ್ಡ್ರೈವ್ನಲ್ಲಿ ವಿವಿಧ ಅಶ್ಲೀಲ ಚಿತ್ರಗಳು ಹಾಗೂ ವಿಡಿಯೋಗಳು ಇದ್ದವು ಎನ್ನಲಾಗಿದ್ದು, ಅವುಗಳ ಮೂಲ ಮತ್ತು ಬಳಕೆಯ ಕುರಿತು ತನಿಖೆ ನಡೆಯುತ್ತಿದೆ.
ಮೊಬೈಲ್ಗೆ ಪಾಸ್ವರ್ಡ್ ಇರುವುದರಿಂದ ಅದರಲ್ಲಿರುವ ಸಂಪೂರ್ಣ ಡೇಟಾವನ್ನು ಹೊರತೆಗೆಯಲು ಅಧಿಕಾರಿಗಳಿಗೆ ಸದ್ಯಕ್ಕೆ ಸಾಧ್ಯವಾಗಿಲ್ಲ ಎನ್ನಲಾಗಿದೆ. ತಾಂತ್ರಿಕ ತಜ್ಞರ ನೆರವಿನೊಂದಿಗೆ ಮೊಬೈಲ್ನಲ್ಲಿರುವ ಮಾಹಿತಿಯನ್ನು ಸಂಗ್ರಹಿಸುವ ಪ್ರಯತ್ನ ಮುಂದುವರಿದಿದೆ.
ಜೈಲಿನೊಳಗೆ ಮೊಬೈಲ್ ತಲುಪಿಸಲು ನೆರವಾದ ಆರೋಪದ ಮೇಲೆ ಪ್ರತಾಪ್ ಎಂಬಾತನ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ಮೊಬೈಲ್ ಜೈಲಿಗೆ ಹೇಗೆ ಪ್ರವೇಶಿಸಿತು ಮತ್ತು ಅದರ ಹಿಂದೆ ಇನ್ನಷ್ಟು ಮಂದಿ ಇದ್ದಾರೆಯೇ ಎಂಬುದನ್ನು ಸಿಸಿಬಿ ತನಿಖೆ ನಡೆಸುತ್ತಿದೆ.
ವಿಐಪಿ ಬ್ಯಾರಕ್ನಿಂದ ಸಾಮಾನ್ಯ ಬ್ಯಾರಕ್ಗೆ
ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಪ್ರಜ್ವಲ್ ರೇವಣ್ಣ ಅವರನ್ನು ವಿಐಪಿ ಬ್ಯಾರಕ್ನಿಂದ ಬೇರೆ ಬ್ಯಾರಕ್ಗೆ ಸ್ಥಳಾಂತರಿಸಲಾಗಿದೆ. 60 ವರ್ಷ ಮೇಲ್ಪಟ್ಟ ಸುಮಾರು 20 ಕೈದಿಗಳಿರುವ ಸಾಮಾನ್ಯ ಬ್ಯಾರಕ್ಗೆ ಅವರನ್ನು ಶಿಫ್ಟ್ ಮಾಡಲಾಗಿದೆ ಎಂದು ಜೈಲು ಮೂಲಗಳು ತಿಳಿಸಿವೆ.
ಪ್ರಜ್ವಲ್ ಅವರು ಸೆಲ್ನಿಂದ ಮೊಬೈಲ್ ತೆಗೆದುಕೊಂಡು ಹೋಗಿ ಮತ್ತೆ ವಾಪಸ್ ತರುತ್ತಿದ್ದರು ಎಂಬ ಶಂಕೆಯೂ ತನಿಖೆಯಲ್ಲಿ ವ್ಯಕ್ತವಾಗಿದ್ದು, ಈ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಪರಪ್ಪನ ಅಗ್ರಹಾರ ಠಾಣೆಯಲ್ಲಿ ಎಫ್ಐಆರ್
ಜೈಲಿನಲ್ಲಿ ಅಕ್ರಮವಾಗಿ ಮೊಬೈಲ್ ಬಳಕೆ ಹಾಗೂ ನಿಷೇಧಿತ ವಸ್ತುಗಳ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಅಧಿಕಾರಿಗಳು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಜೈಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೆಲವು ಲೋಪಗಳು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ದಿಢೀರ್ ತಪಾಸಣೆಗೆ ಸೂಚನೆ ನೀಡಲಾಗಿತ್ತು ಎಂದು ತಿಳಿಸಿದ್ದಾರೆ.
ಇದೀಗ ಜೈಲಿನೊಳಗೆ ಮೊಬೈಲ್ ಪ್ರವೇಶಿಸಿದ ರೀತಿಯಿಂದ ಹಿಡಿದು, ಅದರ ಬಳಕೆ, ಡಿಜಿಟಲ್ ಸಾಧನಗಳಲ್ಲಿರುವ ಮಾಹಿತಿ ಹಾಗೂ ಇದಕ್ಕೆ ನೆರವಾದವರ ತನಕ ಸಿಸಿಬಿ ತನಿಖೆ ವಿಸ್ತರಿಸಿದೆ. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಮತ್ತು ತನಿಖೆಯ ಮುಂದಿನ ಹಂತಗಳಲ್ಲಿ ಪ್ರಕರಣದ ಸಂಪೂರ್ಣ ಚಿತ್ರಣ ಸ್ಪಷ್ಟವಾಗುವ ನಿರೀಕ್ಷೆಯಿದೆ.


