Kannada NewsKarnataka NewsLatestPolitics

*ಉತ್ತರ ಕರ್ನಾಟಕದ ಜಿಲ್ಲೆಗಳ ಅಭಿವೃದ್ಧಿ, ಚರ್ಚೆಗೆ ಒತ್ತು ಕೊಡುತ್ತೀರೆಂಬ ವಿಶ್ವಾಸ ಇದೆ; ನೂತನ ಸಭಾಧ್ಯಕ್ಷರನ್ನು ಅಭಿನಂದಿಸಿ ಲಕ್ಷ್ಮೀ ಹೆಬ್ಬಾಳ್ಕರ್ ಮಾತು*

ಉತ್ತರ ಕರ್ನಾಟಕದ ಜಿಲ್ಲೆಗಳ ಅಭಿವೃದ್ಧಿ, ಚರ್ಚೆಗೆ ಒತ್ತು ಕೊಡುತ್ತೀರೆಂಬ ವಿಶ್ವಾಸ ಇದೆ; ನೂತನ ಸಭಾಧ್ಯಕ್ಷರನ್ನು ಅಭಿನಂದಿಸಿ ಲಕ್ಷ್ಮೀ ಹೆಬ್ಬಾಳ್ಕರ್ ಮಾತು

ಪ್ರಗತಿವಾಹಿನಿ ಸುದ್ದಿ/ ಬೆಂಗಳೂರು:

Home add -Advt

ವಿಧಾನಸಭೆಯ ನೂತನ ಸಭಾಧ್ಯಕ್ಷರಾಗಿ ರೋಣ ಕ್ಷೇತ್ರದ ನಾಲ್ಕು ಬಾರಿಯ ಶಾಸಕ ಜೆ.ಎಸ್. ಪಾಟೀಲ್ ಆಯ್ಕೆಯಾಗಿದ್ದು, ಅವರನ್ನು ಅಭಿನಂದಿಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿಧಾನಸಭೆಯಲ್ಲಿ ಮಾತನಾಡಿದರು.

ಪಾಟೀಲರು ನಮ್ಮ ಉತ್ತರ ಕರ್ನಾಟಕ ಭಾಗದವರು ಎನ್ನುವ ಹೆಮ್ಮೆ ನಮಗೆಲ್ಲ ಇದೆ. ಹೀಗಾಗಿ ಬೆಂಗಳೂರು, ಮೈಸೂರು ಹೊರತುಪಡಿಸಿ ಉತ್ತರ ಕರ್ನಾಟಕದ ಜಿಲ್ಲೆಗಳು, ಆ ಭಾಗದಲ್ಲಿ ಕೈಗಾರಿಕೆಗಳ ಸ್ಥಾಪನೆ, ಅಭಿವೃದ್ಧಿ ವಿಚಾರದ ಬಗ್ಗೆ ಚರ್ಚೆಗೆ ಹೆಚ್ಚು ಒತ್ತು ಕೊಡುತ್ತೀರಿ ಎನ್ನುವ ವಿಶ್ವಾಸ ಇದೆ. ದಾವಣಗೆರೆಯಿಂದ ಆಚೆಗೆ ಕಿತ್ತೂರು ಕರ್ನಾಟಕದ ಅಭಿವೃದ್ಧಿ ಆಗಬೇಕಾಗಿದ್ದು, ಅದಕ್ಕೆ ಪೂರಕವಾದ ಚರ್ಚೆಗೆ ಅವಕಾಶ ಮಾಡಿಕೊಡುತ್ತೀರಿ ಎಂಬ ಭರವಸೆ ಇದೆ.

ತಾವು ಶಾಸಕರಾಗಿ ರೋಣ ಕ್ಷೇತ್ರವನ್ನು ಯಾವ ರೀತಿ ಮಾದರಿಯಾಗಿ ಅಭಿವೃದ್ಧಿಪಡಿಸಿದ್ದೀರಿ ಎನ್ನುವುದು ನಮಗೆಲ್ಲ ಆದರ್ಶಪ್ರಾಯ. ಇಡೀ ಕ್ಷೇತ್ರದ ಚಿತ್ರಣವನ್ನು ಬದಲಿಸಿರುವುದನ್ನು ಸ್ವತಃ ಕಂಡಿದ್ದೇನೆ. ನಿಮ್ಮಂಥವರ ಮಾರ್ಗದರ್ಶನ ಸದಾ ಬೇಕಾಗುತ್ತದೆ. ತಮ್ಮ ಅಧ್ಯಕ್ಷತೆಯಲ್ಲಿ ಈ ಸದನದಲ್ಲಿ ಕರ್ನಾಟಕದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ, ಸಮಾನ ಅವಕಾಶದ ಬದ್ಧತೆಯನ್ನು ಒದಗಿಸುವ ಚರ್ಚೆಗಳು ನಡೆಯಲಿವೆ ಎನ್ನುವ ವಿಶ್ವಾಸ ನನಗಿದೆ.

ಈ ಹಿಂದೆ ವಿಧಾನಸಭಾಧ್ಯಕ್ಷರಾಗಿದ್ದ ಯು.ಟಿ. ಖಾದರ್ ಅವರು ಒಬ್ಬ ಯುವಕನಾಗಿ ತಮಗೆ ಕೊಟ್ಟ ಜವಾಬ್ದಾರಿಯನ್ನು ಯಾವ ರೀತಿ ಸಮರ್ಥವಾಗಿ ನಿರ್ವಹಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ತಾವು ಕೂಡ ಹಿರಿಯ ಸದಸ್ಯರಾಗಿರುವುದರಿಂದ ಅಷ್ಟೇ ರೀತಿಯ ಸಮರ್ಥ ಮತ್ತು ಪಕ್ಷಾತೀತ ನಿರ್ವಹಣೆ ಮಾಡಲಿದ್ದೀರಿ ಎಂಬ ವಿಶ್ವಾಸ ಇದೆ.

ಪ್ರಾಮಾಣಿಕವಾಗಿ ಹೇಳಬೇಕು ಅಂದ್ರೆ, ನೀವು ಕೂಡ ಮಂತ್ರಿ ಆಗಬೇಕಿತ್ತು. ಆದರೆ ಪಕ್ಷದ ನಿರ್ಧಾರ ಮತ್ತು ಶಾಸಕರ ಒಲವಿನಿಂದಾಗಿ ನೀವು ಪೀಠಾಧ್ಯಕ್ಷರಾಗಿದ್ದೀರಿ. ಈ ಸದನದ ಮುಖ್ಯಸ್ಥರಾಗಿ 224 ಶಾಸಕರನ್ನು ಮತ್ತು ಮಂತ್ರಿಗಳನ್ನು ಒಂದೇ ತಕ್ಕಡಿಯಲ್ಲಿ ಸರಿತೂಗಿಸಿ ಈ ಸದನವನ್ನು ಮುನ್ನಡೆಸಲು ಭಗವಂತ ಶಕ್ತಿ ನೀಡಲಿ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಶುಭ ಹಾರೈಸಿದರು.

Related Articles

Back to top button