*ಭಾರತದ ಹೃದಯ ಬೆಂಗಳೂರು; ಬೆಂಗಳೂರಿನ ಹೃದಯ ವಿಧಾನಸೌಧ: ಸಿಎಂ ಡಿ.ಕೆ.ಶಿವಕುಮಾರ್ ಬಣ್ಣನೆ*

ಪ್ರಗತಿವಾಹಿನಿ ಸುದ್ದಿ: “ತಂತ್ರಜ್ಞಾನದ ವಿಚಾರದಲ್ಲಿ ಭಾರತದ, ಕರ್ನಾಟಕದ ಹೃದಯ ಬೆಂಗಳೂರು. ಬೆಂಗಳೂರಿನ ಹೃದಯ ವಿಧಾನಸೌಧ. ವಿಧಾನಸೌಧ ನಾಡಿನ ಯುವಕರ ಆಸ್ತಿ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಬಣ್ಣಿಸಿದರು.
ವಿಧಾನಸೌಧದ ಆವರಣದಲ್ಲಿ ಆಯೋಜಿಸಿರುವ ಫ್ರೀಡಂ ಹಬ್ಬದಲ್ಲಿ ಭಾಗವಹಿಸಿದ್ದ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
“ಕೆಂಗಲ್ ಹನುಮಂತಯ್ಯ ಅವರು ವಿಧಾನಸೌಧ ನಿರ್ಮಿಸಿದರು. ಇದಕ್ಕೂ ಮೊದಲು ಅಠಾರ ಕಚೇರಿ ಪ್ರಸ್ತುತ ಹೈಕೋರ್ಟ್ ನಲ್ಲಿ ವಿಧಾನಸಭೆ ಕಲಾಪಗಳು ನಡೆಯುತ್ತಿದ್ದವು. ಇಂತಹ ಪ್ರಜಾಪ್ರಭುತ್ವದ ಸೌಧ ನೋಡಲು ಕೃಷ್ಣ ಬೈರೇಗೌಡರ ನೇತೃತ್ವದಲ್ಲಿ ಅವಕಾಶ ಮಾಡಿಕೊಡಲಾಗಿದೆ” ಎಂದರು.

“ನಮ್ಮ ಜನರಿಗೆ, ಮಕ್ಕಳಿಗೆ ಪ್ರಜಾಪ್ರಭುತ್ವದ ದೇಗುಲ ನೋಡುವ ಆಸೆ. ಎಷ್ಟೋ ಜನ ಈ ಶಕ್ತಿಸೌಧವನ್ನು ನೋಡಿರಲಿಲ್ಲ. ಅದಕ್ಕೆ ಒಳಗೂ ಸಹ ವೀಕ್ಷಣೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಜನರ ಹಾಗೂ ಯುವಕರ ಸಮಸ್ಯೆಗಳನ್ನು ಬಗೆಹರಿಸಲು ನಾವು ಇಲ್ಲಿಂದಲೇ ಕೆಲಸ ಮಾಡಬೇಕಿದೆ” ಎಂದರು.
“ಈ ಹಿಂದೆ ಹಿರಿಯ ನಾಗರಿಕರು, ಹೊಸ ಜೋಡಿಗಳು ವಿಧಾನಸೌಧದ ಮೆಟ್ಟಿಲ ಮೇಲೆ ಕುಳಿತು ಕಡಲೆ ಕಾಯಿ ತಿಂದು, ಸಂಜೆಯನ್ನು ಸವಿದು ಹೋಗುತ್ತಿದ್ದರು. ಅದನ್ನೂ ನಾನು ನೋಡಿದ್ದೇನೆ. ಇಂತಹ ಪ್ರಜಾ ದೇಗುಲದ ಬಾಗಿಲು ತೆರೆದು ಜನರಿಗೆ ನೋಡಲು ಅವಕಾಶ ಮಾಡಿಕೊಟ್ಟಿದ್ದೇವೆ” ಎಂದರು.
“ಕೆಂಗಲ್ ಹನುಮಂತಯ್ಯ, ಎಸ್ ಆರ್ ಕಂಠಿ, ನಿಜಲಿಂಗಪ್ಪ, ಅರಸು ಅವರು, ಸಿದ್ದರಾಮಯ್ಯ ಅವರು ಹೀಗೆ ಹಲವಾರು ಮಹಾನ್ ನಾಯಕರು ಇಲ್ಲಿಂದ ಆಡಳಿತ ನಡೆಸಿದ್ದಾರೆ” ಎಂದರು.
“ಪ್ರಜಾಪ್ರಭುತ್ವದಿಂದ ನಾವು ಪ್ರಬಲಗೊಂಡಿದ್ದೇವೆ, ಸಂವಿಧಾನದಿಂದ ಶಕ್ತಿಯುತರಾಗಿದ್ದೇವೆ. ಈ ಸ್ವಾತಂತ್ರ್ಯ ಹಬ್ಬ ನಮ್ಮನ್ನು ಇನ್ನೂ ಹೆಚ್ಚು ಗಟ್ಟಿಗೊಳಿಸಲಿ ಎಂದು ಆಶಿಸುತ್ತೇನೆ” ಎಂದರು.

“ಇದು ನಮ್ಮ ಸ್ವಾತಂತ್ರ್ಯದ ಹಬ್ಬ. ಈ ಸ್ವಾತಂತ್ರ್ಯದಹಬ್ಬದಲ್ಲಿ 4-5 ಲಕ್ಷ ಜನ ಭಾಗವಹಿಸುವ ನಿರೀಕ್ಷೆಯಿತ್ತು. ಇದಕ್ಕೂ ಮೀರಿ ಜನರು ಬಂದಿದ್ದಾರೆ. ಆದರೆ ನಾವು ಕಾರಣಾಂತರಗಳಿಂದ ಜನರ ಪ್ರವೇಶವನ್ನು ಸೀಮಿತಗೊಳಿಸಿದೆವು. ಈ ಕಾರಣಕ್ಕೆ ಕ್ಷಮೆ ಕೇಳುತ್ತೇನೆ” ಎಂದರು.
“ಮುಂದಿನ ದಿನಗಳಲ್ಲಿ ಹೆಚ್ಚಿನ ಜನರಿಗೆ ವೀಕ್ಷಣೆ ಮಾಡಲು ವ್ಯವಸ್ಥೆ ಮಾಡಲಾಗುವುದು” ಎಂದು ಭರವಸೆ ನೀಡಿದರು.


