*ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ವಿರುದ್ಧ ದೂರು ದಾಖಲು*

ಪ್ರಗತಿವಾಹಿನಿ ಸುದ್ದಿ: 80ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಸಂದರ್ಭದಲ್ಲಿ ನವದೆಹಲಿಯ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ ಗೀತೆ ನಿಲ್ಲಿಸುವಂತೆ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಕಾರ್ಯಕರ್ತರಿಗೆ ಸನ್ನೆ ಮಾಡುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ ಎಂದು ಆರೋಪಿಸಿ ಬಿಜೆಪಿ ಮುಖಂಡರೊಬ್ಬರು ಸೋನಿಯಾ ಗಾಂಧಿ ವಿರುದ್ಧ ದೂರು ದಾಖಲಿಸಿದ್ದಾರೆ.
‘ವಂದೇ ಮಾತರಂ’ ಗಾಯನವನ್ನು ನಿಲ್ಲಿಸುವಂತೆ ಮಲ್ಲಿಕಾರ್ಜುನ ಖರ್ಗೆ ಹಾಗೂ ಸೋನಿಯಾ ಗಾಂಧಿ ಕಾರ್ಯಕರ್ತರಿಗೆ ಸನ್ನೆ ಮಾಡುತ್ತಿರುವಂತೆ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದು ಭಾರಿ ವಿವಾದಕ್ಕೆ ಕಾರಣವಾಗಿದೆ. ರಾಷ್ಟ್ರಗೀತೆಗೆ ನೀಡುವ ಗೌರವವನ್ನೇ ವಂದೇ ಮಾತರಂ ಗೀತೆಗೂ ನೀಡಬೇಕೆಂಬ ನಿಯಮವಿದ್ದರೂ ಸೋನಿಯಾ ಗಾಂಧಿ ವಂದೇ ಮಾತರಂ ಗೀತೆ ಪ್ಲೇ ಆಗುತ್ತಿದ್ದಂತೆ ಕಾರ್ಯಕರ್ತರ ಬಳಿ ಗಾಅಯನ ನಿಲ್ಲಿಸುವಂತೆ ಹೇಳಿದಂತಿರುವುದು ಸರಿಯಲ್ಲ. ಈ ಬಗ್ಗೆ ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉದ್ದೇಶಪೂರ್ವಕವಾಗಿ ಶಾಂತಿಭಂಗ ಮಾಡಿದ್ದಾರೆ ಎಂದು ಆರೋಪಿಸಿ ಮಂಗಳೂರು ಬಿಜೆಪಿ ಮುಖಂಡ ವಿಕಾಸ್ ಪುತ್ತೂರು ಎಂಬುವರು ಸೋನಿಯಾ ಗಾಂಧಿ ವಿರುದ್ಧ ಉರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ವೇಳೆಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ವಿಕಾಸ್, ‘ವಂದೇ ಮಾತರಂ’ ನಮ್ಮ ರಾಷ್ಟ್ರಗೀತೆಯಾದ ‘ಜನ ಗಣ ಮನ’ಕ್ಕೆ ಸಮಾನವಾಗಿದೆ. ಯಾರೇ ಆಗಲಿ ಅವರ ಹುದ್ದೆ ಅಥವಾ ಅಧಿಕಾರ ಏನೇ ಇರಲಿ ಇದನ್ನು ಅವಮಾನಿಸಿದರೆ ಕ್ರಮ ಕೈಗೊಳ್ಳಲಾಗುತ್ತದೆ. ಆದ್ದರಿಂದ, ಸೋನಿಯಾ ಗಾಂಧಿ ವಿರುದ್ಧ ದಂಡನಾತ್ಮಕ ಕ್ರಮ ಕೈಗೊಳ್ಳುವಂತೆ ಮತ್ತು ಅವರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ನಾನು ಉರ್ವ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ನೀಡಿದ್ದೇನೆ ಎಂದು ತಿಳಿಸಿದ್ದಾರೆ.




