Karnataka NewsLatestPolitics

*SIR ಪ್ರಕ್ರಿಯೆಯಿಂದ ಮತದಾರರಿಗೆ ಅನ್ಯಾಯ: ತುರ್ತು ಕ್ರಮಕ್ಕೆ ಮುಖ್ಯಮಂತ್ರಿಗೆ ನಾಗರಿಕ ಸಂಘಟನೆಗಳ ಮನವಿ*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರು: ಕರ್ನಾಟಕದಲ್ಲಿ ನಡೆಯುತ್ತಿರುವ SIR (Special Intensive Revision) ಪ್ರಕ್ರಿಯೆಯಿಂದ ಲಕ್ಷಾಂತರ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯುವ ಆತಂಕ ಎದುರಾಗಿದ್ದು, ಈ ಕುರಿತು ರಾಜ್ಯ ಸರ್ಕಾರ ತುರ್ತು ಹಾಗೂ ಮಹತ್ವದ ಕ್ರಮ ಕೈಗೊಳ್ಳಬೇಕು ಎಂದು ವಿವಿಧ ನಾಗರಿಕ ಸಂಘಟನೆಗಳು ಮತ್ತು ಒಕ್ಕೂಟಗಳು ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿವೆ.


ಕರ್ನಾಟಕದಲ್ಲಿ SIR ಪ್ರಕ್ರಿಯೆಯ ಫಲಿತಾಂಶ ಆತಂಕಕಾರಿಯಾಗಿದ್ದು, ದೇಶದಲ್ಲೇ ಅತಿ ಹೆಚ್ಚಿನ ಪ್ರಮಾಣದ ಡಿಲೀಷನ್ ಪಟ್ಟಿ ರಾಜ್ಯದಲ್ಲಿ ಸಿದ್ಧವಾಗುತ್ತಿದೆ ಎಂದು ಸಂಘಟನೆಗಳು ಆರೋಪಿಸಿವೆ. ಸುಮಾರು 1.09 ಕೋಟಿ ಮತದಾರರು ASDDO ಪಟ್ಟಿಯಲ್ಲಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಬೆಂಗಳೂರಿನಲ್ಲಿ ಅರ್ಧಕ್ಕಿಂತಲೂ ಹೆಚ್ಚು ಮತದಾರರು ಮತದಾರರ ಪಟ್ಟಿಯಿಂದ ಕಾಣೆಯಾಗುವ ಸಾಧ್ಯತೆ ಇದೆ. ಸುಮಾರು 3,000 ಮತಗಟ್ಟೆಗಳಲ್ಲಿ ಡಿಲೀಷನ್ ಪ್ರಮಾಣ ಶೇ.60ಕ್ಕಿಂತ ಹೆಚ್ಚಿದೆ ಎಂದು ಹೇಳಲಾಗಿದೆ.

Home add -Advt


ಹಿರಿಯ ನಾಗರಿಕರು ಮೃತಪಟ್ಟಿದ್ದಾರೆ ಎಂದು ತಪ್ಪಾಗಿ ಗುರುತಿಸಿರುವುದು, ಉದ್ಯೋಗಕ್ಕಾಗಿ ಬೇರೆಡೆ ತೆರಳಿದವರನ್ನು ‘Absentee’ ಎಂದು ಪರಿಗಣಿಸಿ ಮತದಾರರ ಪಟ್ಟಿಯಿಂದ ತೆಗೆದುಹಾಕುವ ಪ್ರಕ್ರಿಯೆ ನಡೆಯುತ್ತಿರುವುದು ಹಾಗೂ Enumeration Form ಸರಿಯಾಗಿ ಭರ್ತಿ ಮಾಡದವರನ್ನು ‘Others’ ಎಂದು ಗುರುತಿಸಿ ಡಿಲೀಷನ್ ಪಟ್ಟಿಗೆ ಸೇರಿಸಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ಸಂಘಟನೆಗಳು ತಿಳಿಸಿವೆ.


SIRನಂತಹ ಬೃಹತ್ ಪ್ರಕ್ರಿಯೆಗೆ ಅಗತ್ಯವಾದ ಪೂರ್ವಸಿದ್ಧತೆ ಮತ್ತು ಜನಜಾಗೃತಿ ಚುನಾವಣಾ ಆಯೋಗದಿಂದ ಸಮರ್ಪಕವಾಗಿ ನಡೆದಿಲ್ಲ. BLOಗಳಿಗೆ ಸಮಗ್ರ ತರಬೇತಿ ನೀಡದೇ, ಜನರಿಗೆ ಸೂಕ್ತ ಮಾಹಿತಿ ಒದಗಿಸದೇ ಅಲ್ಪಾವಧಿಯಲ್ಲಿ ಪ್ರಕ್ರಿಯೆ ನಡೆಸಿರುವುದರಿಂದ ಗೊಂದಲ ಮತ್ತು ಅವ್ಯವಸ್ಥೆ ಉಂಟಾಗಿದೆ ಎಂದು ಪತ್ರದಲ್ಲಿ ಆರೋಪಿಸಲಾಗಿದೆ.


ಮನೆ ಬದಲಾಯಿಸಿರುವವರು, ಉದ್ಯೋಗಕ್ಕಾಗಿ ವಲಸೆ ಹೋಗಿರುವವರು ಹಾಗೂ ವಿವಾಹವಾಗಿ ಪತಿಯ ಮನೆಗೆ ತೆರಳಿರುವ ಮಹಿಳೆಯರಿಗೆ Enumeration Form ತಲುಪಿಸುವ ಮತ್ತು ಅವರ ಮತದಾರರ ಹಕ್ಕು ವರ್ಗಾವಣೆ ಮಾಡುವ ವ್ಯವಸ್ಥೆ ಸಮರ್ಪಕವಾಗಿ ನಡೆದಿಲ್ಲ. ಇಂತಹ ಸಹಜ ಜೀವನಕ್ರಮದ ಕಾರಣಕ್ಕೆ ಮತದಾನದ ಹಕ್ಕನ್ನೇ ರದ್ದುಪಡಿಸುವುದು ನ್ಯಾಯಸಮ್ಮತವಲ್ಲ ಎಂದು ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ.


ಮೂರು ತಿಂಗಳ ಕಾಲಾವಕಾಶಕ್ಕೆ ಒತ್ತಾಯ
ಪ್ರಕ್ರಿಯೆಯಿಂದ ಬಡವರು, ಮಧ್ಯಮ ವರ್ಗದವರು, ಉದ್ಯೋಗಕ್ಕಾಗಿ ವಲಸೆ ಹೋಗುವವರು ಹಾಗೂ ವಿವಾಹಿತ ಮಹಿಳೆಯರು ಹೆಚ್ಚು ಸಂಕಷ್ಟಕ್ಕೆ ಒಳಗಾಗುವ ಸಾಧ್ಯತೆ ಇದೆ. ಇವರ ಮತದಾನದ ಹಕ್ಕು ರಕ್ಷಿಸುವುದು ಸರ್ಕಾರದ ಹೊಣೆಗಾರಿಕೆ ಎಂದು ಸಂಘಟನೆಗಳು ಮುಖ್ಯಮಂತ್ರಿಗೆ ಮನವಿ ಮಾಡಿವೆ.


SIR ಪ್ರಕ್ರಿಯೆಗೆ ಕನಿಷ್ಠ ಮೂರು ತಿಂಗಳ ಕಾಲಾವಕಾಶ ವಿಸ್ತರಿಸಬೇಕು ಮತ್ತು ಇಡೀ ಪ್ರಕ್ರಿಯೆಗೆ ಒಂದು ವರ್ಷದ ಅವಧಿ ನಿಗದಿಪಡಿಸಿ ವ್ಯವಸ್ಥಿತವಾಗಿ ನಡೆಸುವಂತೆ ಚುನಾವಣಾ ಆಯೋಗವನ್ನು ರಾಜ್ಯ ಸರ್ಕಾರ ಒತ್ತಾಯಿಸಬೇಕು ಎಂದು ಆಗ್ರಹಿಸಲಾಗಿದೆ.


‘Shifted’, ‘Absent’ ಮತ್ತು ‘Others’ ವಿಭಾಗದಲ್ಲಿರುವವರನ್ನು ತಕ್ಷಣವೇ ಡಿಲೀಟ್ ಮಾಡಬಾರದು. BLOಗಳು ಮತ್ತೊಮ್ಮೆ ಮನೆಮನೆಗೆ ತೆರಳಿ ಪ್ರಸ್ತುತ ವಾಸಿಸುತ್ತಿರುವ ಮತದಾರರಿಗೆ Enumeration Form ಹಾಗೂ Form 8 ನೀಡಿ ಮತದಾರರ ಪಟ್ಟಿಯಲ್ಲಿ ಹೆಸರು ಉಳಿಸಿಕೊಳ್ಳಲು ಅವಕಾಶ ಕಲ್ಪಿಸಬೇಕು. ಹೊಸ ಮತದಾರರ ನೋಂದಣಿಗೆ Form 6 ಮೂಲಕ ಅವಕಾಶ ನೀಡುವ ಪ್ರಕ್ರಿಯೆಯನ್ನೂ ಸಮಾನಾಂತರವಾಗಿ ನಡೆಸಬೇಕು ಎಂದು ಮನವಿ ಮಾಡಲಾಗಿದೆ.


ಇದರ ಜೊತೆಗೆ ಚುನಾವಣಾ ಆಯೋಗದಿಂದ ವ್ಯಾಪಕ ಜನಜಾಗೃತಿ ಅಭಿಯಾನ ನಡೆಸಬೇಕು. ಅದು ಸಾಧ್ಯವಾಗದಿದ್ದರೆ ರಾಜ್ಯ ಸರ್ಕಾರವೇ ಜವಾಬ್ದಾರಿ ವಹಿಸಿಕೊಂಡು ಸಾರ್ವಜನಿಕರಿಗೆ ಮಾಹಿತಿ ನೀಡಬೇಕು, ಸರ್ಕಾರಿ ಸಿಬ್ಬಂದಿಯನ್ನು ಮನೆಮನೆಗೆ ಕಳುಹಿಸಿ ಜಾಗೃತಿ ಮೂಡಿಸಬೇಕು ಹಾಗೂ ಸಹಾಯವಾಣಿ ಕೇಂದ್ರಗಳನ್ನು ಸ್ಥಾಪಿಸಬೇಕು ಎಂದು ಸಂಘಟನೆಗಳು ಒತ್ತಾಯಿಸಿವೆ.


ಚುನಾವಣಾ ಆಯೋಗ ಈ ಕ್ರಮಗಳಿಗೆ ಒಪ್ಪದಿದ್ದರೆ ವಿಧಾನಮಂಡಲದಲ್ಲಿ ಚರ್ಚೆ ನಡೆಸಿ ರಾಜ್ಯ ಸರ್ಕಾರವೇ ನಿರ್ಣಯ ಕೈಗೊಂಡು ಕೇಂದ್ರ ಚುನಾವಣಾ ಆಯೋಗದ ಮೇಲೆ ಒತ್ತಡ ತರಬೇಕು. ಅಗತ್ಯವಿದ್ದರೆ ಸುಪ್ರೀಂ ಕೋರ್ಟ್‌ನ ಮೊರೆ ಹೋಗಿ ರಾಜ್ಯದ ಹಿತ ಕಾಪಾಡಬೇಕು ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ.
ಕರ್ನಾಟಕದ ಪ್ರತಿಯೊಬ್ಬ ಅರ್ಹ ಮತದಾರರೂ ಮತದಾರರ ಪಟ್ಟಿಯಲ್ಲಿ ಗೌರವಯುತವಾಗಿ ಉಳಿಯಬೇಕು. ಲಕ್ಷಾಂತರ ಅರ್ಹ ಮತದಾರರ ಮತದಾನದ ಹಕ್ಕು ಕಸಿದುಕೊಳ್ಳುವ ರೀತಿಯ ಅನ್ಯಾಯಯುತ ಮತದಾರರ ಪಟ್ಟಿಯನ್ನು ಕರ್ನಾಟಕ ಒಪ್ಪುವುದಿಲ್ಲ ಎಂಬ ಸಂದೇಶ ಕೇಂದ್ರಕ್ಕೆ ರವಾನೆಯಾಗಬೇಕು ಎಂದು ನಾಗರಿಕ ಸಂಘಟನೆಗಳು ಒತ್ತಾಯಿಸಿವೆ.


ಪ್ರಕಾಶ್ ರಾಜ್, ಬಿ.ಟಿ. ಲಲಿತಾ ನಾಯಕ್, ತಾರಾ ರಾವ್, ನೂರ್ ಶ್ರೀಧರ್, ಮೊಹಮ್ಮದ್ ಯೂಸುಫ್ ಕನ್ನಿ, ತಸ್ಲೀಮುಲ್ಲಾಮಾರುಫ್, ಫಾ. ಅರುಣ್ ಲೂಯಿಸ್, ವಿನಯ್ ಶ್ರೀನಿವಾಸ್, ಐಶ್ವರ್ಯ, ಸೈಯದ್ ತೌಸಿಫ್ ಮಸೂದ್, ಮೊಹಮ್ಮದ್ ಇಸ್ಮಾಯಿಲ್, ಕೆ.ಎಲ್. ಅಶೋಕ್, ಸುನಿಲ್ ಸಿರಸಂಗಿ ಸೇರಿದಂತೆ ವಿವಿಧ ನಾಗರಿಕ ಸಂಘಟನೆಗಳ ಪ್ರತಿನಿಧಿಗಳು ಪತ್ರಕ್ಕೆ ಸಹಿ ಹಾಕಿದ್ದಾರೆ.

Related Articles

Back to top button