*ಪ್ರಾಂಶುಪಾಲರನ್ನೇ ಬರೋಬ್ಬರಿ 27 ಬಾರಿ ಇರಿದು ಬರ್ಬರವಾಗಿ ಹತ್ಯೆಗೈದ ವಿದ್ಯಾರ್ಥಿಗಳು*

ಪ್ರಗತಿವಾಹಿನಿ ಸುದ್ದಿ: 10ನೇ ತರಗತಿಯ ವಿದ್ಯಾರ್ಥಿಗಳೇ ಪ್ರಾಂಶುಪಾಲರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ತೆಲಂಗಾಣದ ನಲ್ಗೊಂಡ ಜಿಲ್ಲೆಯ ಕೊಂಡಮಲೆಪಲ್ಲಿಯ ನಾಗಾರ್ಜುನ ಪಬ್ಲಿಕ್ ಸ್ಕೂಲ್ ನಲ್ಲಿ ಈ ಘಟನೆ ನಡೆದಿದೆ. 45 ವರ್ಷದ ರೂಪಾ ರೆಡ್ಡಿ ವಿದ್ಯಾರ್ಥಿಗಳಿಂದಲೇ ಕೊಲೆಯಾದ ಪ್ರಾಂಶುಪಾಲೆ.
ಪ್ರಾಂಶುಪಾಲೆ ರೂಪಾ ರೆಡ್ಡಿಯವರನ್ನು ವಿದ್ಯಾರ್ಥಿಗಳು 27 ಬಾರಿ ಇರಿದು ಹತ್ಯೆ ಮಾಡಿದ್ದಾರೆ. ಕೊಂಡಮಲ್ಲೆಪಲ್ಲಿಯ ಜೆಬಿ ಕಾಲೋನಿಯಲ್ಲಿ ರೂಪಾ ರೆಡ್ಡಿ ತಮ್ಮ ಪತಿಯೊಂದಿಗೆ ವಾಸವಾಗಿದ್ದರು. ಆ.11ರಂದು ರಾತ್ರಿ ರೂಪಾ ರೆಡ್ಡಿ ಪತಿ ಕೆಲಸದ ವಿಚಾರವಾಗಿ ಹೈದರಾಬಾದ್ ಗೆ ತೆರಳಿದ್ದರು. ಈ ವೇಳೆ ರೂಪಾ ರೆಡ್ಡಿ ಮನೆಯಲ್ಲಿ ಒಬ್ಬರೇ ಇದ್ದರು. ಇದನ್ನು ಗಮಿನಿಸಿದ ವಿದ್ಯಾರ್ಥಿಗಳು ಮನೆಗೆ ನುಗ್ಗಿ ರೂಪಾ ರೆಡ್ದಿ ಅವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಚಾಕುವಿನಿಂದ ಬರೋಬ್ಬರಿ 27 ಬಾರಿ ಇರಿದು ಕೊಲೆ ಮಾಡಿದ್ದಾರೆ.
ಬಳಿಕ ಮನೆಯಲ್ಲಿದ್ದ 4 ಲಕ್ಷ ರೂಪಾಯಿ ಹಣವನ್ನು ದೋಚಿ ಪರಾರಿಯಾಗಿದ್ದಾರೆ. ಪ್ರಕರಣದ ತನಿಖೆ ನಡೆಸಿದ ಪೊಲೀಸರು 80 ಶಂಕಿತರನ್ನು ವಿಚಾರಣೆ ನಡೆಸಿದ್ದಾರೆ. ಬಳಿಕ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಕೊಂಡಮಲ್ಲೆಪಲ್ಲಿ ಮಂಡಲದ ಮೂವರು ಅಪ್ರಾಪ್ತ ಬಾಲಕರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಅವರಲ್ಲಿ ಇಬ್ಬರು ರೂಪಾ ರೆಡ್ಡಿ ಅವರದ್ದೇ ಶಾಲೆಯಲ್ಲಿ 10 ನೇ ತರಗತಿ ಓದುತ್ತಿದ ವಿದ್ಯಾರ್ಥಿಗಳಾಗಿದ್ದಾರೆ ಎಂಬುದು ಬಯಲಾಗಿದೆ.
ಪ್ರಾಂಶುಪಾಲೆಯನ್ನು ಕೊಲೆಗೈದ ಮರುದುನವೇ ವಿದ್ಯಾರ್ಥಿಗಳು ಕಿಂಚಿತ್ತೂ ಭಯ, ಪಶ್ಚಾತ್ತಾಪವಿಲ್ಲದೇ ಶಾಲೆಗೆ ಬಂದಿದ್ದಾರೆ. ಸದ್ಯ ಪೊಲೀಸರು ಪ್ರಕರಣ ಸಂಬಂಧ ಮೂವರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದಿದ್ದಾರೆ. ಇಡೀ ಘಟನೆ ಬಗ್ಗೆ ತಿಳಿಯುತ್ತಿದಂತೆ ವಿದ್ಯಾರ್ಥಿಗಳ ಮನಃಸ್ಥಿತಿಗೆ ಶಾಲೆ ಹಾಗೂ ಆಡಳಿತಮಂಡಳಿ ಬೆಚ್ಚಿ ಬಿದ್ದಿದೆ.




