Kannada NewsKarnataka NewsLatestPolitics

*ಮೈಸೂರು ಅಭಿವೃದ್ಧಿ ಪ್ರಾಧಿಕಾರದ 50:50 ಬದಲಿ ನಿವೇಶನ ಹಂಚಿಕೆ ರದ್ದುಪಡಿಸಿ ಡಾ.ಯತೀಂದ್ರ ಸಿದ್ದರಾಮಯ್ಯ ಆದೇಶ*

ಪ್ರಗತಿವಾಹಿನಿ ಸುದ್ದಿ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (MDA) ನಿಯಮಗಳನ್ನು ಉಲ್ಲಂಘಿಸಿ ಮಾಡಲಾಗಿರುವ 50:50 ಬದಲಿ ನಿವೇಶನಗಳ ಹಂಚಿಕೆಗೆ ಸಂಬಂಧಿಸಿದಂತೆ ಮಾನ್ಯ ಏಕಸದಸ್ಯ ವಿಚಾರಣಾ ಆಯೋಗದ ಶಿಫಾರಸ್ಸಿನಂತೆ, ಉನ್ನತ ಮಟ್ಟದ ತಾಂತ್ರಿಕ ಸಮಿತಿಯು ನೀಡಿರುವ ವರದಿಯನ್ವಯ ತಕ್ಷಣದಿಂದ ಜಾರಿಗೆ 2023ರ ಮಾರ್ಚ್ 14ರ ನಿರ್ದೇಶನವನ್ನು ಉಲ್ಲಂಘಿಸಿ ಮಾಡಲಾದ ಎಲ್ಲಾ  50:50 ಬದಲಿ ನಿವೇಶನಗಳ ಹಂಚಿಕೆಯನ್ನು ರದ್ದುಪಡಿಸಿ ಆದೇಶಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

Home add -Advt

ಸರ್ಕಾರದ ಪತ್ರ ಸಂಖ್ಯೆ ‘ನಅಇ 71 ಮೈಅಪ್ರಾ 2023(ಇ), ದಿನಾಂಕ: 14-03-2023’ ರ ನಿರ್ದೇಶನಗಳನ್ನು ಉಲ್ಲಂಘಿಸಿ ಹಂಚಿಕೆ ಮಾಡಲಾಗಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ, ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು/ಜಿಲ್ಲಾಧಿಕಾರಿಗಳು, ಆಯುಕ್ತರು ಹಾಗೂ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳಿಗೆ ಸರ್ಕಾರವು  ಪ್ರಮುಖ ನಿರ್ದೇಶನಗಳನ್ನು ನೀಡಿದೆ.

​ಹಂಚಿಕೆ ಆದೇಶಗಳ ರದ್ದು: ದಿನಾಂಕ 14-03-2023ರ ಸರ್ಕಾರದ ನಿರ್ದೇಶನವನ್ನು ಉಲ್ಲಂಘಿಸಿ ಮಾಡಲಾಗಿರುವ ಎಲ್ಲಾ 50:50 ಬದಲಿ ನಿವೇಶನ ಹಂಚಿಕೆ ಆದೇಶಗಳನ್ನು ತಕ್ಷಣವೇ ರದ್ದುಪಡಿಸಬೇಕು.

​ಕ್ರಯಪತ್ರ ರದ್ದತಿಗೆ ಸಿವಿಲ್ ದಾವೆ: ನಿಯಮ ಉಲ್ಲಂಘಿಸಿ ಈಗಾಗಲೇ ಸಬ್-ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿಯಾಗಿರುವ ಬದಲಿ ನಿವೇಶನಗಳ ‘ಕ್ರಯಪತ್ರ’ಗಳನ್ನು (Sale Deed) ರದ್ದುಪಡಿಸಲು ಸಿವಿಲ್ ನ್ಯಾಯಾಲಯದಲ್ಲಿ ತಕ್ಷಣವೇ ದಾವೆ ಹೂಡುವುದು.

​ಹೊಸ ಕ್ರಯಪತ್ರ ವಿತರಣೆ ತಡೆ: ಇದುವರೆಗೆ ಕ್ರಯಪತ್ರವಾಗದ ಪ್ರಕರಣಗಳಲ್ಲಿ, ಸರ್ಕಾರದಿಂದ ಸ್ಪಷ್ಟ ಮಾರ್ಗಸೂಚಿ ರಚನೆಯಾಗಿ ಸೂಕ್ತ ನಿರ್ದೇಶನ ಬರುವವರೆಗೂ ಪ್ರಾಧಿಕಾರದಿಂದ ಯಾವುದೇ ಕ್ರಯಪತ್ರಗಳನ್ನು ನೀಡಬಾರದು.

​ಖಾತಾ ಪ್ರಕ್ರಿಯೆಗೆ ತಡೆ: ಈಗಾಗಲೇ ನೋಂದಣಿಯಾಗಿರುವ ನಿವೇಶನಗಳಿಗೆ ಖಾತಾ ಮಾಡಿಕೊಡುವುದನ್ನು ತಡೆಹಿಡಿಯಲು ಮೈಸೂರು ಮಹಾನಗರ ಪಾಲಿಕೆ, ಸಂಬಂಧಪಟ್ಟ ನಗರಸಭೆ ಹಾಗೂ ಗ್ರಾಮ ಪಂಚಾಯಿತಿಗಳಿಗೆ ನಿರ್ದೇಶನ ನೀಡುವುದು.

​ಖಾತಾ ರದ್ದುಪಡಿಸುವಿಕೆ: ಈಗಾಗಲೇ ಖಾತಾ ಆಗಿದ್ದಲ್ಲಿ, ಕರ್ನಾಟಕ ನಗರ ಪಾಲಿಕೆಗಳ ಕಾಯ್ದೆ 1976, ಕರ್ನಾಟಕ ಮುನಿಸಿಪಲ್ ಕಾಯ್ದೆ 1961 ಹಾಗೂ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ 1993 ರಡಿ ನಿಯಮಾನುಸಾರ ರದ್ದುಪಡಿಸಲು ಸ್ಥಳೀಯ ಸಂಸ್ಥೆಗಳಿಗೆ ಸೂಚಿಸುವುದು.

​ಈ ಆದೇಶದ ಮೇರೆಗೆ ಕೈಗೊಂಡ ಕ್ರಮಗಳ ಕುರಿತು ಅನುಪಾಲನಾ ವರದಿಯನ್ನು (Compliance Report) ಸರ್ಕಾರಕ್ಕೆ ತಕ್ಷಣವೇ ಸಲ್ಲಿಸಲು ಸೂಚಿಸಲಾಗಿದೆ. ಸೂಚನೆ ಪಾಲನೆಯಲ್ಲಿ ವಿಫಲವಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ನಿಯಮಾನುಸಾರ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಸರ್ಕಾರ ಎಚ್ಚರಿಸಿದೆ.

ನಿಯಮ ಉಲ್ಲಂಘಿಸಿ 50:50 ಬದಲಿ ನಿವೇಶನಗಳ ಹಂಚಿಕೆ ರದ್ದುಪಡಿಸಲು 2026 ಆಗಸ್ಟ್ 19 ರಂದು ನೀಡಿರುವ ನಿರ್ದೇಶನದನ್ವಯ ಮೈಸೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಸುಮಾರು 1100 50:50 ಬದಲಿ ನಿವೇಶನಗಳನ್ನು ರದ್ದುಪಡಿಸಲು ಸರ್ಕಾರ ನಿರ್ದೇಶನ ನೀಡಿದೆ. ಇದರ ಮೌಲ್ಯ ಸರಿ ಸುಮಾರು ರೂ.2000 ಕೋಟಿ ಎಂದು ಅಂದಾಜಿಸಬಹುದಾಗಿದೆ.

ಮೊದಲ ಹಂತದಲ್ಲಿ 2023ರ ಮಾರ್ಚ್ 14ರ ನಂತರ ನಿಯಮ ಉಲ್ಲಂಘಿಸಿ ಮಾಡಲಾದ ಹಂಚಿಕೆಯನ್ನು ರದ್ದುಪಡಿಸಲಾಗಿದೆ. ಎರಡನೇ ಹಂತದಲ್ಲಿ 2023ರ ಮಾರ್ಚ್ 14ಕ್ಕೂ ಮೊದಲೂ ಹಂಚಿಕೆ ಮಾಡಲಾಗಿರುವ ಪ್ರಕರಣಗಳಲ್ಲಿ ನಿಯಮ ಉಲ್ಲಂಘನೆಯನ್ನು ಪರಿಶೀಲಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಅಕ್ರಮ ಕಂಡುಬಂದಲ್ಲಿ ಅವುಗಳ‌ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Related Articles

Back to top button