*ವಿಧಾನಸಭೆ ಕಲಾಪದಲ್ಲಿ ತಾರತಮ್ಯ: ಸ್ಪೀಕರ್ ಗೆ ಪತ್ರ ಬರೆದ ಆರ್.ಅಶೋಕ್*

ಪ್ರಗತಿವಾಹಿನಿ ಸುದ್ದಿ: ವಿಧಾನಸಭೆಯ ಕಾರ್ಯಕಲಾಪದಲ್ಲಿ ತಾರತಮ್ಯ ನಡೆಸಲಾಗುತ್ತಿದೆ. ವಿಪಕ್ಷ ನಾಯಕರು ಮತ್ತು ವಿಪಕ್ಷ ಶಾಸಕರ ಹೇಳಿಕೆಗಳ ಫೋಟೋ, ವೀಡಿಯೋಗಳನ್ನು ಮಾಧ್ಯಮಗಳಿಗೆ ವಾರ್ತಾ ಇಲಾಖೆ ಅಧಿಕಾರಿಗಳು ಬಿಡುಗಡೆ ಮಾಡುತ್ತಿಲ್ಲ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ.
ಈ ಸಂಬಂಧ ವಾರ್ತಾ ಇಲಾಖೆಗೆ ನಿರ್ದೇಶನ ನೀಡಿ. ಇಲ್ಲದಿದ್ದಲ್ಲಿ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಹಕ್ಕುಚ್ಯುತಿ ಮಂಡಿಸೋದಾಗಿ ಉಲ್ಲೇಖಿಸಿ ವಿಧಾನಸಭೆ ಸ್ಪೀಕರ್ಗೆ ಪತ್ರ ಬರೆದಿದ್ದಾರೆ.
ಆಗಸ್ಟ್ 13ರಿಂದ ಮಳೆಗಾಲದ ಅಧಿವೇಶನ ನಡೆಯುತ್ತಿದ್ದು, ವಿಧಾನಸಭೆಯ ಕಾರ್ಯಕಲಾಪಗಳಲ್ಲಿ ವಿರೋಧ ಪಕ್ಷದ ನಾಯಕರು ಮತ್ತು ಶಾಸಕರು ನೀಡುವ ಹೇಳಿಕೆಗಳು, ಭಾಷಣಗಳು ಹಾಗೂ ಧ್ವನಿ-ದೃಶ್ಯ/ವೀಡಿಯೋಗಳು ಮುದ್ರಣ ಹಾಗೂ ಟಿವಿ ಮಾಧ್ಯಮಗಳಲ್ಲಿ ಸಮರ್ಪಕವಾಗಿ ಪ್ರಸಾರವಾಗುತ್ತಿಲ್ಲ. ಮುಖ್ಯಮಂತ್ರಿಗಳು, ಸಚಿವರು ಹಾಗೂ ಆಡಳಿತ ಪಕ್ಷದ ಶಾಸಕರ ಹೇಳಿಕೆಗಳಿಗೆ ಹೆಚ್ಚಿನ ಪ್ರಚಾರ ದೊರೆಯುತ್ತಿದೆ . ಆ ಮೂಲಕ ವಿಧಾನಸಭೆಯ ಕಾರ್ಯಕಲಾಪಗಳಲ್ಲಿ ತಾರತಮ್ಯ ನಡೆಯುತ್ತಿದೆ. ವಿಧಾನಸಭೆಯ ಕಾರ್ಯಕಲಾಪಗಳಲ್ಲಿ ಈ ರೀತಿಯ ತಾರತಮ್ಯವು ಹಿಂದೆಂದು ನಡೆದಿರುವುದಿಲ್ಲ ಎಂದವರು ಆರೋಪಿಸಿದ್ದಾರೆ.
ತಾವು ಕೂಡಲೇ ಸಂಬಂಧಿಸಿದ ವಾರ್ತಾ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿ, ಈ ತಾರತಮ್ಯವನ್ನು ಸರಿಪಡಿಸಲು ಕೋರುತ್ತೇನೆ. ಇಲ್ಲವಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಹಕ್ಕುಚ್ಯುತಿ ಮಂಡಿಸಲಾಗುವುದು ಎಂದು ಸ್ಪೀಕರ್ ಜಿ.ಎಸ್. ಪಾಟೀಲ್ಗೆ ಬರೆದ ಪತ್ರದಲ್ಲಿ ಆರ್. ಅಶೋಕ್ ತಿಳಿಸಿದ್ದಾರೆ.




