*ಸಂಸ್ಕೃತ ದಿನ – ಸಂಸ್ಕೃತ ಸಪ್ತಾಹ*

ಪ್ರತಿ ವರ್ಷ ಶ್ರಾವಣ ಹುಣ್ಣಿಮೆಯ ದಿನದಂದು ಸಂಸ್ಕೃತ ಭಾರತಿಯ ವತಿಯಿಂದ ಸಂಪೂರ್ಣ ದೇಶಾದ್ಯಂತ ಸಂಸ್ಕೃತ ದಿನವನ್ನು ಆಚರಿಸಲಾಗುತ್ತದೆ. ಹುಣ್ಣಿಮೆಯಿಂದ ಮೂರು ದಿನಗಳ ಮೊದಲು ಮತ್ತು ಮೂರು ದಿನಗಳ ನಂತರ, ಹೀಗೆ ಒಟ್ಟು ಏಳು ದಿನಗಳ ಕಾಲ ಸಂಸ್ಕೃತ ಸಪ್ತಾಹವನ್ನು ಆಚರಿಸಲಾಗುತ್ತದೆ.
ಈ ವರ್ಷ ಆಗಸ್ಟ್ 28ರಂದು ಸಂಸ್ಕೃತ ದಿನವನ್ನು ಆಚರಿಸಲಾಗುತ್ತಿದ್ದು, ಆಗಸ್ಟ್ 25ರಿಂದ 31ರವರೆಗೆ ಸಂಸ್ಕೃತ ಸಪ್ತಾಹವನ್ನು ಆಚರಿಸಲಾಗುತ್ತದೆ.
ಸಂಸ್ಕೃತವು ನಮ್ಮ ಭಾರತೀಯ ಸಂಸ್ಕೃತಿ ಮತ್ತು ಜ್ಞಾನ ಪರಂಪರೆಯ ಪ್ರಮುಖ ಭಾಷೆಯಾಗಿದೆ. ನಮ್ಮ ಅನೇಕ ಪ್ರಾಚೀನ ಗ್ರಂಥಗಳು, ಶಾಸ್ತ್ರಗಳು, ವೇದಗಳು ಮತ್ತು ಜ್ಞಾನ ಪರಂಪರೆಯ ಬಹುಭಾಗ ಸಂಸ್ಕೃತ ಭಾಷೆಯಲ್ಲಿ ರಚನೆಯಾಗಿದೆ. ಆಯುರ್ವೇದ, ಯೋಗ, ಗಣಿತ, ತತ್ತ್ವಶಾಸ್ತ್ರ, ವ್ಯಾಕರಣ, ಮಂತ್ರ ಮುಂತಾದ ಅನೇಕ ಜ್ಞಾನ ಕ್ಷೇತ್ರಗಳಲ್ಲಿ ಸಂಸ್ಕೃತದ ಮಹತ್ವ ಅಪಾರವಾಗಿದೆ.
ಸಂಸ್ಕೃತವು ಕೇವಲ ಒಂದು ಜಾತಿಯ ಭಾಷೆಯಲ್ಲ. ಅದು ಯಾವುದೇ ಒಂದು ಜನಾಂಗಕ್ಕೆ ಅಥವಾ ಒಂದು ಪ್ರಾದೇಶಿಕತೆಗೆ ಸೀಮಿತವಾದ ಭಾಷೆಯೂ ಅಲ್ಲ. ಸಂಸ್ಕೃತವು ಜ್ಞಾನದ ಭಾಷೆ, ಸಂಸ್ಕೃತಿಯ ಭಾಷೆ ಮತ್ತು ಮಾನವೀಯ ಮೌಲ್ಯಗಳನ್ನು ಸಾರುವ ಭಾಷೆಯಾಗಿದೆ.
ಅನೇಕರಲ್ಲಿ ಸಂಸ್ಕೃತದ ಬಗ್ಗೆ ಒಂದು ತಪ್ಪು ಕಲ್ಪನೆ ಇದೆ—“ಸಂಸ್ಕೃತ ಬಹಳ ಕಠಿಣವಾದ ಭಾಷೆ; ಇದು ಸಾಮಾನ್ಯ ಜನರಿಗೆ ಅರ್ಥವಾಗುವುದಿಲ್ಲ; ಶಾಸ್ತ್ರಗಳನ್ನು ಓದುವವರಿಗೆ ಮಾತ್ರ ಇದು ಉಪಯುಕ್ತ” ಎಂಬ ಭಾವನೆ ಇದೆ.
ಆದರೆ ಸಂಸ್ಕೃತ ಭಾರತಿಯ ಸಂದೇಶವೇನೆಂದರೆ ಸಂಸ್ಕೃತ ಸರಳ, ಸುಲಭ ಮತ್ತು ಸುಂದರವಾದ ಭಾಷೆ. ಇದನ್ನು ಯಾರೇ ಆಗಲಿ, ಯಾವುದೇ ವಯಸ್ಸಿನವರೇ ಆಗಲಿ ಕಲಿಯಬಹುದು ಮತ್ತು ಅಭ್ಯಾಸ ಮಾಡಬಹುದು.
ಸಾಮಾನ್ಯರಿಂದ ಅಸಾಮಾನ್ಯರ ತನಕ ಎಲ್ಲರಿಗೂ ಸಂಸ್ಕೃತವನ್ನು ಪರಿಚಯಿಸುವುದು, ಕಲಿಸುವುದು, ಚರ್ಚಿಸುವುದು, ಪ್ರಚಾರ ಮಾಡುವುದು ಮತ್ತು ಪ್ರಸಾರ ಮಾಡುವ ಮೂಲಕ ಸಂಸ್ಕೃತವನ್ನು ಜನಭಾಷೆಯಾಗಿ ಬೆಳೆಸಬೇಕು ಎಂಬ ಮಹತ್ತರ ಉದ್ದೇಶದಿಂದ ಸಂಸ್ಕೃತ ಭಾರತಿ ಕಾರ್ಯನಿರ್ವಹಿಸುತ್ತಿದೆ.
ಸಂಸ್ಕೃತವು ನಮ್ಮ ಭೂತಕಾಲದ ಹೆಮ್ಮೆಯಷ್ಟೇ ಅಲ್ಲ; ನಮ್ಮ ವರ್ತಮಾನಕ್ಕೆ ಜ್ಞಾನವನ್ನು ನೀಡುವ ಮತ್ತು ಭವಿಷ್ಯಕ್ಕೆ ದಾರಿ ತೋರಿಸುವ ಭಾಷೆಯೂ ಹೌದು.
ಆದ್ದರಿಂದ ಈ ಸಂಸ್ಕೃತ ಸಪ್ತಾಹದ ಸಂದರ್ಭದಲ್ಲಿ ನಾವೆಲ್ಲರೂ ಸಂಸ್ಕೃತವನ್ನು ತಿಳಿಯೋಣ, ಕಲಿಯೋಣ, ಮಾತನಾಡೋಣ ಮತ್ತು ಇತರರಿಗೂ ಪರಿಚಯಿಸೋಣ.
“ಸಂಸ್ಕೃತಂ ಸರಲಂ — ಸಂಸ್ಕೃತಂ ಸುಂದರಂ — ಸಂಸ್ಕೃತಂ ಸರ್ವೇಷಾಂ”
ಸಂಸ್ಕೃತದ ಜ್ಞಾನವನ್ನು ಪ್ರತಿಯೊಬ್ಬರಿಗೂ ತಲುಪಿಸುವ ಸಂಕಲ್ಪದೊಂದಿಗೆ ಈ ಸಂಸ್ಕೃತ ಸಪ್ತಾಹವನ್ನು ಅರ್ಥಪೂರ್ಣವಾಗಿ ಆಚರಿಸೋಣ.
ಇಂದು ಸಂಸ್ಕೃತವನ್ನು ಅಭ್ಯಾಸ ಮಾಡಿದವರಿಗೆ ದೇಶ-ವಿದೇಶಗಳಲ್ಲಿ ಉತ್ತಮವಾದ ಉದ್ಯೋಗಾವಕಾಶಗಳು ದೊರೆಯುತ್ತವೆ. ಸಂಸ್ಕೃತ ಕಲಿತವರಿಗೆ ಸಮಾಜದಲ್ಲಿ ಗೌರವವೂ ದೊರೆಯುತ್ತದೆ.
ಹೀಗೆ ಸಂಸ್ಕೃತದ ಪರಿಚಯವಿರುವವರನ್ನು, ಸಂಸ್ಕೃತದ ಬಗ್ಗೆ ಆಸಕ್ತಿ ಹೊಂದಿರುವವರನ್ನು ಹಾಗೂ ಸಂಸ್ಕೃತವನ್ನು ಪ್ರೀತಿಸುವವರನ್ನು ಒಂದೇ ಛತ್ರದ ಅಡಿಯಲ್ಲಿ ತಂದು, ಅವರ ನಡುವೆ ಪರಸ್ಪರ ಬಾಂಧವ್ಯವನ್ನು ಬೆಸೆಯುವ ಮಹತ್ವದ ಕಾರ್ಯವನ್ನು ಸಂಸ್ಕೃತ ಭಾರತೀ ಮಾಡುತ್ತಿದೆ.
ಅಷ್ಟೇ ಅಲ್ಲದೆ, ಸಂಸ್ಕೃತ ಭಾಷೆಯು ಜನಸಾಮಾನ್ಯರಿಗೆ ತಲುಪಬೇಕು, ಅದರ ಜ್ಞಾನ ಮತ್ತು ಸುಗಂಧವು ಎಲ್ಲೆಡೆ ಹರಡಬೇಕು ಎಂಬ ಸದಾಶಯದೊಂದಿಗೆ ಸಂಸ್ಕೃತ ಭಾರತೀ ಕಾರ್ಯನಿರ್ವಹಿಸುತ್ತಿದೆ.
ತನ್ಮೂಲಕ ಇಡೀ ಸಮಾಜದ ಸಂಘಟನೆ ಆಗಬೇಕು, ಸನಾತನ ಧರ್ಮವು ಮತ್ತೆ ತಲೆ ಎತ್ತಿ ನಿಂತು ವಿಶ್ವಕ್ಕೆ ಮಾದರಿಯಾಗಬೇಕು ಎಂಬುದನ್ನು ಸಂಸ್ಕೃತ ಭಾರತೀ ತನ್ನ ಧ್ಯೇಯವನ್ನಾಗಿ ಮಾಡಿಕೊಂಡಿದೆ.
ಈ ದಿಸೆಯಲ್ಲಿ ಸಂಸ್ಕೃತ ಭಾರತೀ ಕಳೆದ 44 ವರ್ಷಗಳಿಂದ ದೇಶಾದ್ಯಂತ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಕೇವಲ ನಮ್ಮ ದೇಶದಲ್ಲಿ ಮಾತ್ರವಲ್ಲದೆ, ವಿದೇಶಗಳಲ್ಲಿಯೂ ಸಂಸ್ಕೃತ ಭಾರತಿಯ ಕಾರ್ಯಚಟುವಟಿಕೆಗಳು ನಡೆಯುತ್ತಿವೆ. ಸರಿ ಸುಮಾರು 45 ದೇಶಗಳಲ್ಲಿ ಸಂಸ್ಕೃತ ಭಾರತಿಯ ವಿವಿಧ ಕಾರ್ಯಚಟುವಟಿಕೆಗಳು ನಡೆಯುತ್ತಿವೆ.
ನಮ್ಮ ದೇಶದಲ್ಲಿ 650ಕ್ಕೂ ಹೆಚ್ಚು ಜಿಲ್ಲೆಗಳಿಗೆ ನಾವು ತಲುಪಿದ್ದೇವೆ. ಇಡೀ ದೇಶದಲ್ಲಿ 4,880ಕ್ಕೂ ಹೆಚ್ಚು ಶಾಖೆಗಳಿವೆ. ಸಂಸ್ಕೃತ ಮಾತನಾಡುವ ಮನೆಗಳು “ಸಂಸ್ಕೃತ ಗೃಹಂ” 6,500ಕ್ಕೂ ಹೆಚ್ಚಿವೆ. ಕರ್ನಾಟಕದ ಮೂರು ಗ್ರಾಮಗಳು ಸೇರಿದಂತೆ, ಸರಿಸುಮಾರು 8 ಗ್ರಾಮಗಳನ್ನು “ಸಂಸ್ಕೃತ ಗ್ರಾಮ” ಎಂದು ಘೋಷಿಸಲಾಗಿದೆ.
1,50,000ಕ್ಕೂ ಹೆಚ್ಚು ಸಂಸ್ಕೃತ ಶಿಕ್ಷಕರನ್ನು ಸಂಸ್ಕೃತ ಭಾರತಿಯು ಹುಟ್ಟುಹಾಕಿದ್ದು, ಅವರ ಮೂಲಕ ಇಂದು ಉಳಿದ ಜನರಿಗೆ ಹಾಗೂ ವಿವಿಧ ಪ್ರದೇಶಗಳಿಗೆ ಸಂಸ್ಕೃತವನ್ನು ತಲುಪಿಸುವ ಕಾರ್ಯವನ್ನು ಸಂಸ್ಕೃತ ಭಾರತಿ ಸಂಸ್ಥೆಯ ಮೂಲಕ ಮಾಡಲಾಗುತ್ತಿದೆ.
ಬನ್ನಿ, ಎಲ್ಲರೂ ಕೈಜೋಡಿಸಿ ಈ ಪೂಜ್ಯ ಕಾರ್ಯದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳೋಣ. ಸಂಸ್ಕೃತ ಸಪ್ತಾಹದಲ್ಲಿ ಭಾಗವಹಿಸೋಣ. ಕಳೆದುಹೋದ ನಮ್ಮ ವೈಭವದ ದಿನಗಳನ್ನು ಮರಳಿ ಪಡೆಯಲು ನಮ್ಮ ತನು, ಮನ, ಧನವನ್ನು ಸಮರ್ಪಿಸೋಣ. ಸಂಸ್ಕೃತವನ್ನು ಕಲಿಯೋಣ, ನಂತರ ಕಲಿಸೋಣ.
ಸಂಸ್ಕೃತ ಭಾರತಿ ಸಂಸ್ಥೆಯ ಸಾಮಾನ್ಯ ಕಾರ್ಯಕರ್ತರಾಗಿ ದೇವಭಾಷೆಗೆ ಗೌರವ ಸಲ್ಲಿಸುವ ಮೂಲಕ ಸಂಸ್ಕೃತ ದಿನ ಮತ್ತು ಸಂಸ್ಕೃತ ಸಪ್ತಾಹವನ್ನು ಅರ್ಥಪೂರ್ಣವಾಗಿ ಆಚರಿಸೋಣ.
ವದತು ಸಂಸ್ಕೃತಂ ಜಯತು ಭಾರತಮ್
-ಶ್ರೀಧರ ಗುಮ್ಮಾನಿ
(ಅಧ್ಯಕ್ಷರು, ಸಂಸ್ಕೃತ ಭಾರತಿ, ಬೆಳಗಾವಿ ನಗರ)



