*ವ್ಯಕ್ತಿಯ ಭೀಕರ ಹತ್ಯೆ ಮಾಡಿ ಠಾಣೆಗೆ ಶರಣಾದ ಗಂಡ-ಹೆಂಡತಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಅಕ್ರಮ ಸಂಬಂಧದ ಹಿನ್ನೆಲೆ ವ್ಯಕ್ತಿಯೊಬ್ಬನನ್ನು ಕುಡಗೋಲಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಕಲ್ಲೋಳಿ ಪಟ್ಟಣದಲ್ಲಿ ನಡೆದಿದೆ.
ಕೊಲೆಯಾದ ವ್ಯಕ್ತಿ ರಮೇಶ ಹಣಮಂತ ಬಂಡ್ರೋಳಿ(40). ಆರೋಪಿಗಳಾದ ಲಕ್ಷ್ಮೀ ಬಣಪ್ಪ ಒಡೆಯರ(33) ಹಾಗೂ ಪತಿ ಬಣಪ್ಪ ರಾಮಚಂದ್ರ ಒಡೆಯರ(45).
ಕೊಲೆಯಾದ ರಮೇಶ್ ಜೊತೆ ಆರೋಪಿ ಬನಪ್ಪನ ಪತ್ನಿಯ ಅಕ್ರಮ ಸಂಬಂಧ ಇತ್ತು ಎನ್ನಲಾಗಿದೆ. ರಮೇಶ ಲಕ್ಷ್ಮೀ ಜೊತೆ ಇರುವ ಫೋಟೋವನ್ನು ತನ್ನ ಮೊಬೈಲ್‌ನ ವಾಟ್ಸ್‌ಆ್ಯಪ್ ಸ್ಟೇಟಸ್‌ನಲ್ಲಿ ಹಾಕಿದ್ದ ಎನ್ನಲಾಗಿದೆ. ಈ ಸ್ಟೇಟಸ್ ಗಮನಿಸಿದ ಬನಪ್ಪ ಮತ್ತು ಆತನ ಪತ್ನಿ ಲಕ್ಷ್ಮೀ ತಮ್ಮ ಮನೆಯ ಹಿಂದೆ ಇರುವ ಗದ್ದೆಯಲ್ಲಿ ಕೊಡಲಿಯಿಂದ ರಮೇಶ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ಕುಡುಗೋಲಿನಿಂದ ಬರ್ಬರವಾಗಿ ಕೊಲೆ ಮಾಡಿ, ಕೊಲೆ ಮಾಡಿದ್ದು ನಾವೇ ಎಂದು ಗಂಡ-ಹೆಂಡತಿ ಘಟಪ್ರಭಾ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾರೆ.
ಅಕ್ರಮ ಸಂಬಂಧದ ವಿಚಾರಕ್ಕೆ ಈಗಾಗಲೇ ಹಿರಿಯರು ಮಹಿಳೆಗೆ ತಿಳಿ ಹೇಳಿದರು ಎನ್ನಲಾಗುತ್ತಿದೆ. ಕಳೆದ ಒಂದು ವರ್ಷಗದಿಂದ ರಮೇಶ ಆರೋಪಿಗಳ ಭೂಮಿಯನ್ನೇ ಉಳುಮೆ ಮಾಡಿಕೊಂಡಿದ್ದ ಎನ್ನಲಾಗಿದೆ.
ಮಾಹಿತಿ ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೊಲೆಗೆ ಬಳಸಲಾಗಿದೆ ಎನ್ನಲಾದ ಕೊಡಲಿ ಸೇರಿದಂತೆ ಅಗತ್ಯ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ.
ಕೊಲೆಗೆ ನಿಖರ ಕಾರಣ, ಘಟನೆಯ ಸಂಪೂರ್ಣ ಹಿನ್ನೆಲೆ ಹಾಗೂ ಆರೋಪಿಗಳ ಪಾತ್ರದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.




